Site icon Vistara News

Nagamangala Case: ನಾಗಮಂಗಲ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ; ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು- ಎಚ್‌ಡಿ ಕುಮಾರಸ್ವಾಮಿ

Nagamangala Case

ಮಂಡ್ಯ: ಗಣೇಶ ವಿಸರ್ಜನೆ ವೇಳೆ ನಾಗಮಂಗಲದ ಗಲಭೆ (Nagamangala Case) ವಿಚಾರಕ್ಕೆ ಸಂಬಂಧಿಸಿಂತೆ ಶುಕ್ರವಾರ ಕೇಂದ್ರ ಸಚಿವ ಎಚ್‌ಡಿ‌ ಕುಮಾರಸ್ವಾಮಿ (HD kumaraswamy) ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಮಂಗಲದ ಇಡೀ ಘಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ. 1990ರಲ್ಲಿ ವಿರೇಂದ್ರ ಪಾಟೀಲರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನ ಸಿಎಂ ಕುರ್ಚಿಯಿಂದ‌ ಕೆಳಗೆ ಇಳಿಸಲು ಕಾಂಗ್ರೆಸ್‌ನಲ್ಲೇ ನಡೆಸಿರುವ ಸಂಚು ಎಂದು ಹೊಸ ಬಾಂಬ್ ಹಾಕಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗದಲ್ಲಿ ನಡೆದಿರುವ ಕೋಮು ದಳ್ಳೂರಿ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ಗುರುವಾರವಷ್ಟೆ ಬಿಜೆಪಿ ನಿಯೋಗ ಭೇಟಿ ನೀಡಿ ಹೋಗಿತ್ತು. ಆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ನಾಯಕರು ನಾಗಮಂಗಲದ ಗಲಭೆಯನ್ನ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗುಡುಗಿದ್ದರು.

ಶುಕ್ರವಾರ ನಾಗಮಂಗಲಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎಚ್‌ಡಿ‌ ಕುಮಾರಸ್ವಾಮಿ ಗಲಭೆಯಲ್ಲಿ ಹಾನಿಗೊಳಗಾಗಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತಮ್ಮ ತಮ್ಮ ಅಂಗಡಿ ಮುಂಗ್ಗಟ್ಟುಗಳನ್ನು ಕಳೆದುಕೊಂಡಿದ್ದ ಜನರು ಕುಮಾರಸ್ವಾಮಿ ಬಳಿ ತಮ್ಮ ನೋವನ್ನು ತೊಡಿಕೊಂಡರು. ನಾಗಮಂಗಲದ ಕೋಮು ದಳ್ಳುರಿಯನ್ನು ಕಣ್ಣಾರೆ ಕಂಡ ಕುಮಾರಸ್ವಾಮಿ ಇಡೀ ಗಲಭೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ನೇರವಾಗಿ ಆರೋಪ ಮಾಡಿದರು. 1990 ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಲು ಕಾಂಗ್ರೆಸ್ ಪಕ್ಷವೇ ನಡೆಸಿರೊ ಷಡ್ಯಂತ್ರ ಇದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವ ತನಿಖೆಯನ್ನಾದರು ಮಾಡಲಿ ಎಂದು ಗುಡುಗಿದರು.

ಇದನ್ನೂ ಓದಿ: Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಫೂರ್ವ ನಿಯೋಜಿತ ಕೃತ್ಯವಷ್ಟೇ

ನಾಗಮಂಗಲದ ಗಲಭೆಯಲ್ಲಿ ಹಾನಿಗೊಳಗಾಗಿರುವ ಬಹುತೇಕ ಎಲ್ಲಾ ಅಂಗಡಿಗಳಿಗೂ ತೆರಳಿ ಪರಿಶೀಲಿಸಿದ ಕುಮಾರಸ್ವಾಮಿ, ಗಲಭೆಗೆ ಸಂಬಂಧಿಸಿದಂತೆ ಹಾಕಲಾಗಿರುವ ಎಫ್‌ಐಆರ್ ಬಗೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಗೂ ಮುನ್ನಾ ಎಫ್ ಐ ಆರ್ ಪ್ರತಿಯನ್ನು ಪರಿಶೀಲಿಸಿದ ಕುಮಾರಸ್ವಾಮಿ, ಇಲ್ಲಿ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದವರೇ ಮೊದಲ ಆರೋಪಿ ಆಗಿದ್ದಾರೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮತ್ತು ಇಂತಹ ದಿನ ವಿಸರ್ಜನೆ ಮಾಡಲಾಗುವುದು ಎಂದು ಪೊಲೀಸರಲ್ಲಿ ಅನುಮತಿಯನ್ನು ಪಡೆಯಲಾಗಿತ್ತು ಅನ್ನೋದು ಎಫ್ ಐ ಆರ್ ನಲ್ಲೇ ನಮೂದಾಗಿದೆ.

ಅಂದ್ಮೇಲೆ ಘಟನೆ ನಡೆದ ದಿನ ಗಣೇಶ ಮೂರ್ತಿ ವಿಸರ್ಜನೆ ಇದೆ ಅನ್ನೋದು ಪೊಲೀಸರಿಗೂ ಗೊತ್ತಿತ್ತು. ಆದರೆ ಅವರು ಹೆಚ್ಚಿನ ಜನರನ್ನು ನಿಯೋಜನೆ ಮಾಡಲಿಲ್ಲ. ಬದಲಾಗಿ ಭದ್ರತೆಗಾಗಿ ನಿಯೋಜಿಸಿದ್ದ ಡಿಎಆರ್ ಪೊಲೀಸರನ್ನು ಅಲ್ಲಿಂದ ಕಳುಹಿಸಲಾಗಿತ್ತು. ಹೀಗೆ ಪೊಲೀಸರು ಅಲ್ಲಿಂದ ತೆರಳಲು ಸೂಚನೆ ಕೊಟ್ಟವರು ಯಾರು? ದೂರು ನೀಡಿರುವ ರವಿ ಎಂಬ ಪೊಲೀಸ್ ಅಧಿಕಾರಿ ಅಷ್ಟು ಜನರ ಹೆಸರನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆ? ಅಂದು ನಡೆದ ಘಟನೆಯಲ್ಲಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಲ್ಲಾ ಇತ್ತು ಎನ್ನುವುದಾದರೆ ಇದೆಲ್ಲವು ಏಕಾಏಕಿ ಬರುವುದಿಲ್ಲ. ಇದನ್ನು ಗಮನಿಸಿದಾಗ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತೆ‌‌. ಆದರೆ ಗೃಹಮಂತ್ರಿಗೆ ಇದು ಸಣ್ಣ ಘಟನೆ ಅಂತೆ, ಅವರು ಇಲ್ಲಿಗೆ ಬರಬೇಕು ಅಂದರೆ ಹೆಣ ಬೀಳಬೇಕಾ ಎಂದು ಪ್ರಶ್ನಿಸಿದ ಎಚ್‌ಡಿಕೆ ಅವರನ್ನು ಯಾರ್‌ರೀ ಗೃಹ ಮಂತ್ರಿ ಅಂತಾರೆ ಎಂದೂ ಗುಡುಗಿದರು.

ಗಲಭೆಗೆ ಸಂಬಂಧಿಸಿದಂತೆ ಹಾನಿಗೊಳಗಾಗಿರುವ ಜನರಿಗೆ ಸದ್ಯಕ್ಕೆ ಅವರ ಜೀವನೋಪಾಯಕ್ಕೆ ಅನುಕೂಲವಾಗಲಿ ಎಂಬ ಕಾರಣದಿಂದ ವೈಯಕ್ತಿಕವಾಗಿ ಒಂದಷ್ಟು ನೆರವು ನೀಡಿದ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಲೇ ಎರಡೂ ಕೋಮಿನ‌ ಜನರು ಈ ರೀತಿಯ ಗಲಭೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version