ಮಂಡ್ಯ: ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಹಲವರಿಗೆ ಗಾಯವಾಗಿದೆ. ಬಸ್ ಪಲ್ಟಿ ಹೊಡೆಯುತ್ತಿದ್ದಂತೆ ತಕ್ಷಣ ಸಹಾಯಕ್ಕೆ ಧಾವಿಸಿದ ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳುಗಳನ್ನು ಹತ್ತಿರವೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದಲ್ಲಿ ಗುಂಡಿಗೆ ಉರುಳಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್
ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ಗುಂಡಿಗೆ ಉರುಳಿ ಬಿದ್ದಿದೆ. 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಓಬಳಾಪುರ ತಾಂಡ ಬಳಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಬಾರಿ ದುರಂತ ತಪ್ಪಿದೆ.
ಘಟನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೂ ಗಾಯವಾಗಿದೆ. ಓಬಳಾಪುರ ತಾಂಡದಿಂದ ಜವನಗೊಂಡನಹಳ್ಳಿ ಕಡೆ ಬರುತ್ತಿದ್ದ ಸಾರಿಗೆ ಬಸ್ ಪಲ್ಟಿ ಹೊಡೆದಿದೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನ ಹಿರಿಯೂರಿನಲ್ಲಿ ಸಾರ್ವಜನಿಕರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Murder Case : ಪಿತೃಪಕ್ಷ ಪೂಜೆ ಬಳಿಕ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಬಗೆದು ಕೊಂದ ಪಾಪಿ!
ವೇಗವಾಗಿ ಬಂದ ಆಟೋ ಪಲ್ಟಿ; ಚಾಲಕ ಸಾವು
ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿ ಬಳಿ ಘಟನೆ ನಡೆದಿದೆ. ವೇಗವಾಗಿ ಬಂದ ಆಟೋ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿದೆ. ಪಲ್ಟಿಯ ರಭಸಕ್ಕೆ ಚಾಲಕ ಸಂಜೀವ್ ಶಿಂಧೆ (48) ಎಂಬಾತ ಮೃತಪಟ್ಟಿದ್ದಾರೆ. ಸಂಜೀವ್ ಧಾರವಾಡದ ಮೈಲಾರಲಿಂಗ ನಗರದ ನಿವಾಸಿಯಾಗಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ; ಟೆಕ್ಕಿ ಸಾವು
ಆನೇಕಲ್‌ನ ಬನ್ನೇರುಘಟ್ಟ- ಜಿಗಣಿ ಮುಖ್ಯರಸ್ತೆಯ ಹರಪನಹಳ್ಳಿ ತಿರುವಿನಲ್ಲಿ ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಟಿಕ್ಕಿ ದಾರುಣವಾಗಿ ಮೃತಪಟ್ಟಿದ್ದಾರೆ. ನರೇಶ್(33) ಅಪಘಾತದಲ್ಲಿ ಮೃತಪಟ್ಟವರು. ಮೂಲತಃ ಆಂಧ್ರ ಮೂಲದ ಚಿತ್ತೂರಿನ ನರೇಶ್ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಜಿಗಣಿಗೆ ಬಂದು ವಾಸವಾಗಿದ್ದರು. ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆಗಿದ್ದ ನರೇಶ್ ನಿನ್ನೆ ಚಿಕ್ಕಪ್ಪನ ಮನೆಗೆ ಹೋಗಿ ಬೆಳಗ್ಗೆ ಜಿಗಣಿಗೆ ವಾಪಸ್ ಆಗುತ್ತಿದ್ದರು. ಹರಪನಹಳ್ಳಿ ಬಳಿ ಏಕಾಏಕಿ ಚಾಲಕ ತಿರುವು ಪಡೆದುಕೊಂಡಿದ್ದರಿಂದ ಕ್ಯಾಂಟರ್ ಮುಂಬದಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ