Site icon Vistara News

ದೇವಸ್ಥಾನದಲ್ಲಿ ಮರ್ಡರ್‌ ಮಾಡಿ ಪರಾರಿಯಾಗುವಾಗ ಸೀಜರ್‌ಗಳ ಕೈಗೆ ಸಿಕ್ಕಿಬಿದ್ದರು!

k r pete

ಮಂಡ್ಯ: ಕೆ. ಆರ್‌. ಪೇಟೆಯಲ್ಲಿ ಸೋಮವಾರ (ಜೂನ್‌ 27) ಶಿವನ ದೇಗುಲದಲ್ಲಿ ಶಿವನಾಮ ಸ್ಮರಣೆ ಬದಲು ಮಹಿಳೆಯೊಬ್ಬರ ಕೂಗಾಟ ಚಿರಾಟವೇ ಕೇಳಿ ಬಂದಿತ್ತು. ಅಲ್ಲಿದ್ದವರು ಗಾಬರಿಯಾಗಿ ಬಂದು ನೋಡಿದಾಗ ಶಿವನ ದರ್ಶನ ಮಾಡಲು ಬಂದವನು ಕೊಲೆಯಾಗಿ ಹೋಗಿದ್ದ.

ಇದನ್ನೂ ಓದಿ | ಮುಂದಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಚಲುವರಾಯಸ್ವಾಮಿ ; ಮಂಡ್ಯದಲ್ಲಿ ಅಭಿಮಾನಿಗಳ ಜೈಕಾರ

ಹಾಡಹಗಲೇ ಕುಖ್ಯಾತ ರೌಡಿ ಅರುಣ್ ಅಲಿಯಾಸ್‌ ಅಲ್ಲು (38) ಎಂಬಾತನ ಮೇಲೆ ಐವರು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ಹೀಗೆ ಕೊಲೆಗೈದು ಪರಾರಿಯಾಗುವ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು ಬೈಕ್‌ ಸೀಜರ್‌ಗಳ ಕೈಗೆ.

ಕೆ.ಆರ್‌. ಪೇಟೆಯ ಹೊರವಲಯದಲ್ಲಿ ಬೈಕ್‌ ಸೀಜರ್‌ಗಳು ನಿಂತಿದ್ದರು. ಬೈಕ್‌ ಸಾಲ, ಕೈಸಾಲ, ಮೀಟರ್‌ ಬಡ್ಡಿ ಸೇರಿ ಬೇರೆ ಬೇರೆ ಕಾರಣಕ್ಕೆ ಸಾಲ ಪಡೆದವರು ತೀರಿಸದೆ ಹೋದಾಗ ಅವರ ಆಟೊ, ಬೈಕ್‌ ಮುಂತಾದವನ್ನು ಸೀಜ್‌ ಮಾಡಿಕೊಂಡು ಹೋಗುವುದು ಇವರ ಕೆಲಸ. ಈ ವೇಳೆ ಅದೇ ಮಾರ್ಗದಲ್ಲಿ, ಅವೆಂಜರ್‌ ಬೈಕಿನಲ್ಲಿ ಮೂವರು ಆರೋಪಿಗಳು ಆಗಮಿಸಿದ್ದರು. ಬೈಕ್‌ ಲೋನ್ ಕಟ್ಟದ ಹಿನ್ನೆಲೆಯಲ್ಲಿ ಅಡ್ಡಗಟ್ಟಿ ಬೈಕ್ ಸೀಜ್‌ ಮಾಡುವುದಾಗಿ ಇವರು ಹೇಳಿದರು. ಈ ವೇಳೆ ತಮ್ಮನ್ನು ಬಿಡುವಂತೆ ಆರೋಪಿಗಳು ಕೇಳಿದ್ದಾರೆ. ಸೀಜರ್‌ಗಳು ಒಪ್ಪಿಲ್ಲ. ಆರೋಪಿಗಳಲ್ಲಿ ಒಬ್ಬ ಫೋನ್‌ನಲ್ಲಿ “ಕೇಸ್ ಮಾಡಿ ಬರುತ್ತಿದ್ದೇವೆ, ಗಾಡಿ ಹಿಡಿದಿದ್ದಾರೆʼ ಎಂದಿದ್ದಾನೆ.

ಇದನ್ನು ಕೇಳಿ ಸೀಜರ್‌ ಗಾಬರಿಗೊಂಡು ʼಏನು ಕೇಸ್ ಅಣ್ಣ?ʼ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ಆರೋಪಿಗಳು ʼಮರ್ಡರ್‌ ಮಾಡಿ ಬಂದ್ದೀವಿ ಕಣಪ್ಪ, ಬೇಕಾದರೆ ನ್ಯೂಸ್‌ನಲ್ಲಿ ನೋಡು. ಈಗ ನಮಗೆ ಹೋಗಲು ಬಿಡಿ. ಪೊಲೀಸರು ಬಂದರೆ ನಮಗೂ ಹಿಂಸೆʼ ಎಂದಿದ್ದಾನೆ. ನಂತರ ಆರೋಪಿಗಳು ಬೈಕ್‌ನಲ್ಲಿ ಅಲ್ಲಿಂದ ತೆರಳಿದ್ದಾರೆ.

ಇಡೀ ಘಟನೆಯ ವಿಡಿಯೋವನ್ನು ತಮ್ಮ ಸುರಕ್ಷತೆಗಾಗಿ ಸೀಜರ್‌ ಹುಡುಗರು ಮಾಡಿಕೊಂಡಿದ್ದರು. ಕೊಲೆ ಕೃತ್ಯಕ್ಕಾಗಿ ಬಳಸಿದ್ದ ಮಾರಕಾಸ್ತ್ರಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಇಟ್ಟುಕೊಂಡಿರುವುದೂ ವಿಡಿಯೋದಲ್ಲಿ ದಾಖಲಾಗಿದೆ.‌ ಈ ವಿಡಿಯೊ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಡಿಪಾರಾಗಿದ್ದ ಅರುಣ್‌

ಕೊಲೆಯಾದ ಅರುಣ್ ಅಲಿಯಾಸ್‌ ಅಲ್ಲು ಮೇಲೆ ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿತ್ತು. ಜೈಲಿನಲ್ಲಿದ್ದಾಗಲೇ ಅಧಿಕಾರಿಯ ಸಹಾಯ ಪಡೆದು ಮಾರ್ವಾಡಿಯೊಬ್ಬರನ್ನು ಕಿಡ್ನಾಪ್ ಮಾಡಿದ್ದ. ಆ ಪ್ರಕರಣದಲ್ಲಿ ಭಾಗಿಯಾದ ಜೈಲು ಅಧಿಕಾರಿಗೂ ಶಿಕ್ಷೆಯಾಗಿತ್ತು. ನಂತರ ಕೆ.ಆರ್‌. ಪೇಟೆಯಿಂದ ಅರುಣ್‌ ಗಡಿಪಾರಾಗಿದ್ದ. ಆದರೂ ಕೆ.ಆರ್.ಪೇಟೆಗೆ ಬಂದಿದ್ದ. ದೇಗುಲದಲ್ಲಿದ್ದಾಗ ಹೊಂಚು ಹಾಕಿದ ಐವರಿಂದ ಭೀಕರವಾಗಿ ಕೊಲೆಯಾಗಿದ್ದ. ಹಲವು ವರ್ಷಗಳಿಂದಲೂ ಕಾದಿದ್ದ ಹಂತಕರು, ಹಳೆಯ ದ್ವೇಷದಿಂದ ಕೊಲೆಗೈದಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ | ಮಂಡ್ಯ ಪೊಲೀಸರನ್ನು ಪೂರ್ತಿ ಹೈರಾಣಾಗಿಸಿದ ಅರ್ಧ ದೇಹ: ಊರೂರು ಅಲೆಯುತ್ತಿರುವ ಖಾಕಿ ಪಡೆ

Exit mobile version