ಮತ್ತೀಕೆರೆ ಜಯರಾಮ್, ಮಂಡ್ಯ
ಕೋಟೆ-ಕೊತ್ತಲಗಳ ಬೀಡು ಎಂದೇ ಕರೆಯಲ್ಪಡುವ ಶ್ರೀರಂಗಪಟ್ಟಣ ಮೈಸೂರು ಅರಸರು, ಟಿಪ್ಪು ಆಳ್ವಿಕೆಯಿಂದ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಶ್ರೀರಂಗಪಟ್ಟಣ ಸುಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಶ್ರೀರಂಗನಾಥ ಸ್ವಾಮಿ ದೇಗುಲ, ರಂಗನತಿಟ್ಟು ಪಕ್ಷಿಧಾಮ, ಶೂಟಿಂಗ್ ಸ್ಪಾಟ್ ಆಗಿರುವ ಮಹದೇವಪುರ, ಗೆಂಡೆಹೊಸಹಳ್ಳಿ, ಬಲಮುರಿ, ಜೀವನಾಡಿ ಕನ್ನಂಬಾಡಿ(ಕೆ.ಆರ್.ಎಸ್) ಜಲಾಶಯವೂ ಇದೇ ಕ್ಷೇತ್ರದಲ್ಲಿದೆ. ಶ್ರೀರಂಗಪಟ್ಟಣ ಇಡೀ ತಾಲೂಕಿನ ಜತೆಗೆ ಮಂಡ್ಯ ತಾಲೂಕಿನ ತಗ್ಗಹಳ್ಳಿ, ಕೊತ್ತತ್ತಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿ ಈ ಕ್ಷೇತ್ರಕ್ಕೆ ಒಳಪಟ್ಟಿವೆ. ಮಂಡ್ಯ ನಗರಸಭೆ ವ್ಯಾಪ್ತಿಯೊಳಗೆ ಶ್ರೀರಂಗಪಟ್ಟಣ ಬೆಸೆದುಕೊಂಡಿದೆ.
ಚುನಾವಣಾ ಇತಿಹಾಸ
2004ರ ಚುನಾವಣೆಯಲ್ಲಿ ಪ್ರಬಲ ಚತುಷ್ಕೋನ ಸ್ಪರ್ಧೆ ಎದುರಾಗಿತ್ತು. ಹಾಲಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ(ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ತಾಯಿ) ಮತ್ತೆ ಜನ ಮನ್ನಣೆ ಗಳಿಸುವಲ್ಲಿ ವಿಫಲರಾದರು. ರೈತ ಸಂಘದ ಕೆ.ಎಸ್. ನಂಜುಂಡೇಗೌಡ ಪ್ರಬಲ ಸ್ಪರ್ಧೆ ಒಡ್ಡಿದ್ದರಾದರೂ ಅಂತಿಮವಾಗಿ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ(ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ತಾಯಿ) ಗೆಲುವಿನ ನಗೆ ಬೀರಿದರು. ವಿಜಯಲಕ್ಷ್ಮಿ ಪತಿ ಎ.ಎಸ್. ಬಂಡಿಸಿದ್ದೇಗೌಡ ಕೂಡ ಈ ಕ್ಷೇತ್ರದಿಂದ ಗೆದ್ದು, ಸಚಿವರಾಗಿದ್ದರು. ಅವರ ನಿಧನ ಬಳಿಕ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಉಪ ಚುನಾವಣೆಯಲ್ಲಿ ಗೆದ್ದಿದ್ದರು. ಅದಾದ ನಂತರ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಕಂಡರು.
2008ರಲ್ಲಿ ಇತ್ತ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಅತ್ತ ಪಾರ್ವತಮ್ಮ ಶ್ರೀಕಂಠಯ್ಯ ಇಬ್ಬರೂ ಚುನಾವಣಾ ಕಣದಿಂದ ದೂರ ಉಳಿದು ತಮ್ಮ ಮಕ್ಕಳಿಗೆ ಭವಿಷ್ಯ ಕಟ್ಟಿಕೊಡಲು ಹೊರಟರು. ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ತಮಗಿದ್ದ ಪ್ರಭಾವ ಬಳಸಿ ಜೆಡಿಎಸ್‌ನಿಂದ ರಮೇಶ್ ಬಂಡಿಸಿದ್ದೇಗೌಡಗೆ ಟಿಕೆಟ್ ಕೊಡಿಸಿದರು. ಆದರೆ, ಪಾರ್ವತಮ್ಮ ಶ್ರೀಕಂಠಯ್ಯ ತಮ್ಮ ಅವರಿಂದ ಪುತ್ರ ರವೀಂದ್ರ ಶ್ರೀಕಂಠಯ್ಯಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲಾಗಲಿಲ್ಲ. ಆಗ ಸಂಸದರಾಗಿದ್ದ ಅಂಬರೀಶ್ ಹಠಕ್ಕೆ ಬಿದ್ದವರಂತೆ ಶ್ರೀರಂಗಪಟ್ಟಣದ ಕಾಂಗ್ರೆಸ್ ಟಿಕೆಟ್ ಪಡೆದುಕೊಂಡು, ಸ್ಪರ್ಧೆಗಿಳಿದರು. ರವೀಂದ್ರ ಶ್ರೀಕಂಠಯ್ಯ ಬಂಡೆದ್ದು, ಅಂಬರೀಶ್ ಅವರ ಬಲ ಉಡುಗಿಸಿದರು. ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್‌ನ ರಮೇಶ್ ಬಂಡಿಸಿದ್ದೇಗೌಡ ಗೆದ್ದು ಬೀಗಿದರು.
2013ರಲ್ಲೂ ಅಂಬರೀಶ್ ಮತ್ತು ರವೀಂದ್ರ ಶ್ರೀಕಂಠಯ್ಯ ತಿಕ್ಕಾಟ ಮುಗಿಯಲಿಲ್ಲ. ಮಂಡ್ಯದಿಂದ ಸ್ಪರ್ಧೆ ಮಾಡಿದ ಅಂಬರೀಶ್ ಅವರು ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯಗೆ ಟಿಕೆಟ್ ತಪ್ಪಿಸಿದರು. ಅಂಬರೀಶ್ ತಮ್ಮ ಬೆಂಬಲಿಗ ಎಸ್.ಎಲ್. ಲಿಂಗರಾಜು ಅವರಿಗೆ ಕೈ ಟಿಕೆಟ್ ಒಲಿಯುವಂತೆ ಮಾಡಿದರು. ರವೀಂದ್ರ ಶ್ರೀಕಂಠಯ್ಯ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರು. ಕಾಂಗ್ರೆಸ್ ಗೊಂದಲ ಮತ್ತೆ ರಮೇಶ್ ಬಂಡಿಸಿದ್ದೇಗೌಡರಿಗೆ ವರದಾನವಾಯಿತು. ಸತತ ಎರಡನೇ ಬಾರಿಯೂ ರಮೇಶ್ ಬಂಡಿಸಿದ್ದೇಗೌಡ ವಿಜಯ ಪತಾಕೆ ಹಾರಿಸಿದರು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪ್ರಬಲ ಪೈಪೋಟಿ ಒಡ್ಡಿ, ಸೋಲಿಗೆ ಶರಣಾದರು.
2018ರ ವೇಳೆಗೆ ರಾಜಕೀಯ ಚಿತ್ರಣ ಸಾಕಷ್ಟು ಬದಲಾಯಿತು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರ್ಪಡೆಗೊಂಡರು. ರವೀಂದ್ರ ಶ್ರೀಕಂಠಯ್ಯ ಕೂಡ ಜೆಡಿಎಸ್ ಗೆ ಪಕ್ಷಾಂತರ ಮಾಡಿದರು. ಪಕ್ಷ ಬದಲಿಸಿ ಪರಸ್ಪರ ಎದುರಾಗಿ ನಡೆಸಿದ ಚುನಾವಣಾ ಕದನದಲ್ಲಿ ರವೀಂದ್ರ ಶ್ರೀಕಂಠಯ್ಯಗೆ ಚೊಚ್ಚಲ ಬಾರಿ ವಿಧಾನಸಭೆ ಪ್ರವೇಶಿಸುವ ಅವಕಾಶ ಒಲಿಯಿತು. ರೈತ ಸಂಘದಿಂದ ಅಷ್ಟರಲ್ಲಾಗಲೇ ಐದು ಬಾರಿ ಸೋಲು ಕಂಡಿದ್ದ ಕೆ.ಎಸ್. ನಂಜುಂಡೇಗೌಡ ಬಿಜೆಪಿ ಸೇರಿ, 6ನೇ ಸೋಲು ಕಂಡರು.
2023ರ ಮುಖಾಮುಖಿ
ಜೆಡಿಎಸ್ ಸೇರ್ಪಡೆಗೊಂಡು ಶಾಸಕರಾಗಿರುವ ರವೀಂದ್ರ ಶ್ರೀಕಂಠಯ್ಯ ವೈಟ್ ಕಾಲರ್ ರಾಜಕಾರಣಿ ಎಂದೇ ಬಿಂಬಿತರಾದವರು. ರವೀಂದ್ರ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿ ಎನ್ನುವುದು ನಿಸ್ಸಂದೇಹ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ, ಪರಾಭವಗೊಂಡ ಮಾಜಿ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮತ್ತದೇ ಎದುರಾಳಿ. ರೈತ ಸಂಘ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್.ನಂಜುಂಡೇಗೌಡ ಅವರಿಗೆ ಈ ಬಾರಿ ಟಿಕೆಟ್ ಅನುಮಾನ. ಸಂಸದೆ ಸುಮಲತಾ ಅಂಬರೀಶ್ ಆಪ್ತ ಬಳಗದಲ್ಲಿರುವ ಕೆ.ಎಸ್. ಸಚ್ಚಿದಾನಂದ ಬಿಜೆಪಿಯತ್ತ ಮುಖ ಮಾಡಿದ್ದು, ಟಿಕೆಟ್ ಗಟ್ಟಿ ಮಾಡಿಕೊಂಡಿದ್ದಾರೆ. ಕಮಲ ಪಾಳೆಯದಲ್ಲಿ ಸಕ್ರಿಯರಾಗಿರುವ ಸಚ್ಚಿದಾನಂದ ಅಧಿಕೃತವಾಗಿ ಪಕ್ಷ ಸೇರ್ಪಡೆ ಮಾತ್ರ ಬಾಕಿ ಉಳಿದಿದೆ. ಈ ಕ್ಷೇತ್ರದಲ್ಲಿ ರೈತ ಸಂಘ, ಆಮ್ ಆದ್ಮಿ ಸ್ಪರ್ಧೆ ಸಾಂಕೇತಿಕವಷ್ಟೇ ಎನ್ನುವಂತಾಗಿದೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಶಾಸಕ ರವೀಂದ್ರ ಶ್ರೀಕಂಠಯ್ಯ (ಜೆಡಿಎಸ್)
2. ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ(ಕಾಂಗ್ರೆಸ್)
3. ಎಸ್.ಸಚ್ಚಿದಾನಂದ/ಕೆ.ಎಸ್.ನಂಜುಂಡೇಗೌಡ(ಬಿಜೆಪಿ)
ಜಾತಿವಾರು ಮತದಾರರ ಪ್ರಮಾಣ
ಇದನ್ನೂ ಓದಿ | ಎಲೆಕ್ಷನ್ ಹವಾ | ಮಳವಳ್ಳಿ | ಇರೋ ಮೂವರಲ್ಲಿ ಗೆಲ್ಲೋರು ಯಾರೆಂಬ ಕುತೂಹಲ