ಮಂಗಳೂರು: ಮಂಗಳೂರಿನ ಹೊರ ವಲಯದ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನ ಜಾಡನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತ ವಾಸವಾಗಿದ್ದ ಸ್ಥಳ ಪತ್ತೆಯಾಗಿದ್ದು, ಅಲ್ಲಿ ಹಲವಾರು ಸ್ಫೋಟಕ ವಸ್ತುಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಆದರೆ, ನಕಲಿ ಹೆಸರಲ್ಲಿ ಆತ ರೂಂನಲ್ಲಿ ಬಾಡಿಗೆ ಪಡೆದುಕೊಂಡಿದ್ದಾನೆಂಬುದು ತಿಳಿದುಬಂದಿದೆ.
ಮೈಸೂರಲ್ಲಿ ರೂಂ ಪಡೆದಿದ್ದ ಶಂಕಿತ
ಮೈಸೂರಿನ ಲೋಕನಾಯಕ ನಗರದ ೧೦ನೇ ಕ್ರಾಸ್‌ನಲ್ಲಿ ರೂಂವೊಂದನ್ನು ಬಾಡಿಗೆಗೆ ಪಡೆದಿದ್ದು. ಸಿಂಗಲ್ ರೂಂ ಇದಾಗಿದ್ದು, ತಾನು ಹುಬ್ಬಳ್ಳಿಯವನು ಎಂದು ಶಂಕಿತ ಹೇಳಿಕೊಂಡಿದ್ದಾನೆ. ಮೋಹನ್ ಕುಮಾರ್ ಎಂಬುವವರ ಬಿಲ್ಡಿಂಗ್‌ನಲ್ಲಿ ರೂಂ ಪಡದಿದ್ದ.
ಅಗ್ರಿಮೆಂಟ್‌ನಲ್ಲಿ ಪ್ರೇಮ್ ರಾಜ್ ಹೆಸರು ಉಲ್ಲೇಖ
ಕಟ್ಟಡ ಮಾಲೀಕರ ಬಳಿ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಕೊಂಡಿದ್ದ ಶಂಕಿತನು, ಹುಬ್ಬಳ್ಳಿಯ ವಿಳಾಸ ನೀಡಿದ್ದ. ಈಗ ಪೊಲೀಸರ ತನಿಖೆ ವೇಳೆ ಆತ ನೀಡಿರುವ ಮಾಹಿತಿಯೂ ನಕಲಿ ಎಂಬುದು ಗೊತ್ತಾಗಿದ್ದು, ಗಾಯಾಳುವಿನ ಮೇಲೆ ಶಂಕೆ ತೀವ್ರಗೊಂಡಿದೆ.
ಇದನ್ನೂ ಓದಿ | Mangalore Blast | ಸ್ಫೋಟ ತನಿಖೆಗೆ ಆಗಮಿಸಿದ ಎನ್‌ಐಎ ತಂಡ; ಉಗ್ರ ಕೃತ್ಯ ಆಯಾಮದಲ್ಲಿ ಪರಿಶೀಲನೆ
ಸ್ಫೋಟಕ ವಸ್ತುಗಳು ಪತ್ತೆ
ಶಂಕಿತ ಕೊಠಡಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಕೆಲವು ಸೋಟಕ ವಸ್ತುಗಳು ಪತ್ತೆಯಾಗಿವೆ. ಸರ್ಕ್ಯೂಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ವುಡೆನ್ ಪೌಡರ್, ಅಲ್ಯುಮಿನಿಯಂ, ಮಲ್ಟಿ ಮೀಟರ್, ವೈರ್‌ಗಳು, ಮಿಕ್ಸರ್ ಜಾರ್‌ಗಳು, ಪ್ರೆಶರ್ ಕುಕ್ಕರ್ ಸೇರಿದಂರೆ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ.
ರಾಜ್ಯಾದ್ಯಂತ ಬಿಗಿ ಕಟ್ಟೆಚ್ಚರ
ಮಂಗಳೂರು ಆಟೋ ಸ್ಫೋಟ ಬೆನ್ನಲ್ಲೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಏರ್ಪೋರ್ಟ್, ರೈಲ್ವೆ ಸ್ಟೇಷನ್, ಮಾರ್ಕೆಟ್, ಬಸ್ ನಿಲ್ದಾಣಗಳು ಸೇರಿ ಚರ್ಚ್, ದೇವಾಲಯ, ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ರಾಜ್ಯಾದ್ಯಂತ ಸೂಕ್ಷ್ಮ ಹಾಗೂ ಜನ ಸೇರಿದ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸೂಚನೆ ಬಂದಿದೆ.
ಇದನ್ನೂ ಓದಿ | Mangalore Blast | ಗಾಯಾಳು ಪ್ರಯಾಣಿಕನ ಬಳಿ ಇದ್ದ ಆಧಾರ್ ಕಾರ್ಡ್ ನಕಲಿ; ಅಸಲಿ ವ್ಯಕ್ತಿ ತುಮಕೂರಲ್ಲಿ ಪತ್ತೆ