ಬಾಗಲಕೋಟೆ: ಸಂಸತ್ ಮೇಲೆ ದಾಳಿ ಪ್ರಕರಣದ ಆರೋಪಿ ಮನೋರಂಜನ್ ಲಿಂಕ್ ಬಾಗಲಕೋಟೆಗೆ ವ್ಯಾಪಿಸಿದ್ದು, ಆತನೊಂದಿಗೆ ನಂಟು ಹೊಂದಿದ್ದ ನಗರದ ಯುವಕನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವನಗರದ ಪೊಲೀಸ್ ಠಾಣೆಯಲ್ಲಿ ಸತತ ಎರಡು ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಯುವಕನನ್ನು ವಶಕ್ಕೆ ಪಡೆಯಲಾಗಿದೆ.
ನಗರದ ವಿದ್ಯಾಗಿರಿಯ ನಿವೃತ್ತ ಡಿವೈಎಸ್ಪಿ ಪುತ್ರ ವಿಠ್ಠಲ ಜಗಲಿ ಅವರ ಪುತ್ರ ಸಾಯಿಕೃಷ್ಣ ಜಗಲಿ (Sai Krishna)ಯನ್ನು ವಶಕ್ಕೆ ಪಡೆಯಲಾಗಿದೆ. 2008-09ರಲ್ಲಿ ಬೆಂಗಳೂರಿನ ಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಮೈಸೂರಿನ ಆರೋಪಿ ಮನೋರಂಜನ್ ಹಾಗೂ ಸಾಯಿಕೃಷ್ಣ ರೂಮ್‌ಮೇಟ್ಸ್ ಆಗಿದ್ದರು. ಕಾಲೇಜು ಬಳಿಕ ಇಬ್ಬರೂ ದೂರವಾಣಿ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು.
ಇದನ್ನೂ ಓದಿ | Security Breach in Lok Sabha: ಮನೋರಂಜನ್ ಪೋಷಕರಿಗೆ ನೂರಾರು ಪೊಲೀಸ್ ಪ್ರಶ್ನೆಗಳ ಗ್ರಿಲ್!
ಸಾಯಿಕೃಷ್ಣ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರ ಆಗಿದ್ದು, ಮನೋರಂಜನ್ ಡೈರಿ, ಕಾಲ್ ರೆಕಾರ್ಡ್ ನೋಡಿದಾಗಿ ಈತನೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಮನೋರಂಜನ್ ಅತೀ ಹೆಚ್ಚು ಬಾರಿ ಸಾಯಿಕೃಷ್ಣ ಜತೆ ಪೋನ್‌ನಲ್ಲಿ ಸಂಪರ್ಕಿಸಿದ್ದ. ಸಾಯಿಕೃಷ್ಣ ಕೂಡ ಕ್ರಾಂತಿಕಾರಿ ಮನಸ್ಥಿತಿ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಬಾಗಲಕೋಟೆಯಿಂದ ದೆಹಲಿಗೆ ಕರೆದೊಯ್ಯಲಾಗಿದೆ.
ನನ್ನ ತಮ್ಮ ಮುಗ್ಧ, ಅವನಿಗೇನೂ ಗೊತ್ತಿಲ್ಲ
ಸಾಯಿಕೃಷ್ಣ ಸಹೋದರಿ ಸ್ಪಂದನಾ ಪ್ರತಿಕ್ರಿಯಿಸಿ, ಸಾಯಿಕೃಷ್ಣ ಎರಡು ದಿನಗಳ ಹಿಂದೆ ಬಾಗಲಕೋಟೆಗೆ ಬಂದಿದ್ದ. ಮನೋರಂಜನ್ ಹಾಗೂ ಅವನು ಫ್ರೆಂಡ್ಸ್ ಅನ್ನೊದಕ್ಕಿಂತ ರೂಮ್‌ಮೇಟ್ಸ್. ಇಷ್ಟಕ್ಕೆಲ್ಲಾ ಈ ರೀತಿ ತನಿಖೆ ಮಾಡುತ್ತಿದ್ದಾರೆ. ನಾವು ಎಲ್ಲವನ್ನು ಫೇಸ್ ಮಾಡಲು ಸಿದ್ಧರಿದ್ದೇವೆ. ನಾವೇನು ತಪ್ಪೇ ಮಾಡಿಲ್ಲ ಅಂದಮೇಲೆ ಹೆದರೋದಿಲ್ಲ. ಇಬ್ಬರೂ ಬೆಂಗಳೂರಿನಲ್ಲಿ ಬಿಐಟಿ ಕಲಿಯುವಾಗ ರೂಮ್ ಮೇಟ್ಸ್ ಅಷ್ಟೇ. ಅವನು ಡ್ರಾಪ್ ಔಟ್ ಮಾಡಿದ್ದ, ಮನೋರಂಜನ್ ಜತೆ ಕಾಂಟ್ಯಾಕ್ಟ್ ಇಲ್ಲ. ಸಾಯಿಕೃಷ್ಣದ್ದು ಡೈರಿ ಇರುವುದು ಸುಳ್ಳು, ಅದು ರೂಮರ್. ಕಾಲ್ ರೆಕಾರ್ಡ್ ಇಲ್ಲ, ಅವನು ಮಾತನಾಡಿರುವುದು ಸುಳ್ಳು. ಅವರ ಜತೆ ಇದ್ದಾರೆ ಎಂದು ವಶಕ್ಕೆ ಪಡೆದಿಲ್ಲ, ಬರಿ ತನಿಖೆಯಷ್ಟೇ ಎಂದು ಹೇಳಿದ್ದಾರೆ.
ಇದನ್ನೂ ಓದಿ | Corruption Case: ಕೆಎಸ್‌ಡಿಎಲ್ ಟೆಂಡರ್‌ಗಾಗಿ ಲಂಚ; ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಕೇಸ್ ರದ್ದು
ಮನೋರಂಜನ್‌ಗೆ ಏನು ಶಿಕ್ಷೆ ಆಗಬೇಕೋ ಆಗಲಿ. ನನ್ನ ತಮ್ಮ ಇದರೊಳಗೆ ಇಲ್ಲ, ಅವನೇನೂ ತಪ್ಪು ಮಾಡಿಲ್ಲ. ಬಿಐಟಿ ಒಳಗೆ ಇರುವವರನ್ನು ವಿಚಾರಣೆ ಮಾಡಿದ್ದಾರೆ. ಅದರಲ್ಲಿ ಸಾಯಿಕೃಷ್ಣ ಕೂಡ ಒಬ್ಬ. ಅವನು ಮುಗ್ಧ, ಅವನು ಏನೂ ತಪ್ಪೇ ಮಾಡಿಲ್ಲ. ಇಡೀ ಬಾಗಲಕೋಟೆಯಲ್ಲಿ ಯಾರನ್ನು ಬೇಕಾದರೂ ಕೇಳಿ ಎಂದು ಹೇಳಿದ್ದಾರೆ.