Site icon Vistara News

ದೋಸೆ ಸವಿದ ಮಾಸ್ಟರ್‌ಷೆಫ್ ಜಡ್ಜ್, ಮತ್ತೆ ಬೆಂಗಳೂರಿಗೆ ಬರ್ತಿನಿ ಅಂದ್ರು ಗ್ಯಾರಿ!

MasterChef Australia judge Gary Mehigan enjoyed Dosa in Bengaluru

ಬೆಂಗಳೂರು: ಮಾಸ್ಟರ್‌ಷೆಫ್ ಆಸ್ಟ್ರೇಲಿಯಾ (MasterChef Australia) ಟಿವಿ ಶೋ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಶೋ. ಈ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾದ ಗ್ಯಾರಿ ಮೆಹಿಗನ್ (Gary Mehigan) ಅವರು, ಸಿಲಿಕಾನ್ ಸಿಟಿ ಬೆಂಗಳೂರಿಗೆ (Silicon City Bengaluru) ಆಗಮಿಸಿದ್ದು, ಇಲ್ಲಿನ ತಿಂಡಿಗಳಿಗೆ ಮಾರು ಹೋಗಿದ್ದಾರೆ. ಸ್ಥಳೀಯ ಹೊಟೇಲ್‌ವೊಂದರಲ್ಲಿ ಅವರು ಕ್ರಿಸ್ಪಿ ದೋಸೆಯನ್ನು (Dosa) ಸೇವೆಯನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಈ ಕುರಿತಾದ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕೇವಲ ದೋಸೆ ಮಾತ್ರವಲ್ಲದೇ, ರಾಗಿ ದೋಸೆ(Ragi Dosa), ಬೆಣ್ಣೆ ದೋಸೆ(ghee roast dosa), ಉದ್ದಿನ ವಡೆ, ಬೆಣ್ಣೆ ಇಡ್ಲಿ ಪೋಡಿ, ಕೇಸರಿ ಭಾತ್ (kesari Bhath) ಸೇವಿಸಿ, ರುಚಿಯನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಷೇರ್ ಮಾಡಿಕೊಂಡಿರುವ ಗ್ಯಾರಿ, ಅದು ‘ಸರಿಯಾದ’ ದೋಸೆಯಾಗಿತ್ತು. ನಾವು ರಾಮೇಶ್ವರ ಕೆಫೆಯಲ್ಲಿ ರಾಗಿ ದೋಸೆ, ತುಪ್ಪದ ಹುರಿದ ದೋಸೆ, ಉದ್ದಿನ ವಡಾ, ತುಪ್ಪದ ಇಡ್ಲಿ ಪೋಡಿ, ಕೇಸರಿ ಭಾತ್ ಮತ್ತು ಅದ್ಭುತ ಫಿಲ್ಟರ್ ಕಾಫಿ ಸೇವಿಸಿದೆವು. ಇದಕ್ಕಾಗಿಯೇ ಮತ್ತೆ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಗ್ಯಾರಿ ಅವರು ಬೆಂಗಳೂರಿನ ಎಂಜಿ ರೋಡ್ ತಾಜ್‌ನಲ್ಲಿ ಆಯೋಜಿಸಲಾಗಿರುವ ಪಾಪ್ ಅಪ್ ಡಿನ್ನರ್‌ನಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಇನ್‌ಸ್ಟಾಗ್ರಾಮದಲ್ಲಿನ ಗ್ಯಾರಿ ಅವರು ಪೋಸ್ಟ್‌ ಸಾಕಷ್ಟು ಜನರ ಗಮನ ಸೆಳೆದಿದೆ. ಬಹಳಷ್ಟು ಜನರು ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಅಲ್ಲದೇ, ಕೆಲವು ಹೊಟೇಲ್‌ಗಳು, ಸ್ಥಳಗಳನ್ನು ರೆಫರ್ ಮಾಡಿದ್ದಾರೆ. ನೀವು ಖಂಡಿತವಾಗಿಯೂ ಗಾರ್ಲಿಕ್ ರೋಸ್ಟ್ ದೋಸೆಯನ್ನು ಸೇವಿಸಬೇಕು. ಹಾಗೆಯೇ ಬೆಂಗಳೂರಿನ ಅದ್ಭುತ ದೋಸೆಗಾಗಿ ನೀವು ಸಿಟಿಆರ್‌ಗೆ ಭೇಟಿ ನೀಡಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, ಓಹೋ ನೀವು ಬೆಂಗಳೂರಿನಲ್ಲಿದ್ದೀರಾ…!, ಜಯನಗರ, ಬಸವನಗುಡಿಯ ಕೆಲವು ಭಾಗಗಳಲ್ಲಿ ಭೇಟಿ ನೀಡಿದ್ದೀರಿ ಎಂದು ಭಾವಿಸುತ್ತೇನೆ. ಅಲ್ಲದೇ, ಡಿಸೆಂಬರ್‌ ಮೊದಲ ವಾರದಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಸಾಕ್ಷಿಯಾಗಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಬೆಂಗಳೂರಿಗೆ ಆಗಮಿಸುವ ಯಾವುದೇ ಗಣ್ಯರು ಇಲ್ಲಿನ ವಿಶಿಷ್ಟ ತಿಂಡಿಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅದರಲ್ಲೂ, ಬೆಂಗಳೂರಿಗರ ನೆಚ್ಚಿನ ಬೆಳಗಿನ ತಿಂಡಿಯಾದ ದೋಸೆ ಮತ್ತು ಇಡ್ಲಿ-ವಡೆ ತಿಂದೇ ತಿನ್ನುತ್ತಾರೆ. ಹಾಗೆಯೇ, ಅದ್ಭುತ ರುಚಿಗೆ ಮಾರುಹೋಗದವರೇ ಇಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಬೆಂಗಳೂರಿನ ಸ್ಥಳೀಯ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಅವರು ಬೆಂಗಳೂರಿನ ಉಪಹಾರವನ್ನು ಸವಿಯುತ್ತಿದದ್ದು ಸುದ್ದಿಯಾಗಿತ್ತು. ಹಲವು ವಿದೇಶಿಗರು ಸ್ಥಳೀಯವಾಗಿ ಜನಪ್ರಿಯವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ತಿಂಡಿಯನ್ನು ಸವಿಯುವ ಸುದ್ದಿಗಳನ್ನು ಆಗಾಗ ಕೇಳಬಹುದು.

ಈ ಸುದ್ದಿಯನ್ನೂ ಓದಿ: IPL 2023: ಮಲ್ಲೇಶ್ವರಂನ ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆ ದೋಸೆ ಸವಿದ ವಿರುಷ್ಕಾ ದಂಪತಿ

Exit mobile version