ಮತ್ತೀಕೆರೆ ಜಯರಾಮ್, ಮಂಡ್ಯ
ವಿಶ್ವವಿಖ್ಯಾತ ವೈರಮುಡಿ ಉತ್ಸವ ನಡೆಯುವ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇಗುಲವನ್ನು ಹೊಂದಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೆ ವಿಧಾನಸಭೆ ಚುನಾವಣೆ ಬಿಸಿ ಆರಂಭವಾಗಿದೆ.
ಕ್ಷೇತ್ರದಲ್ಲಿ 2004ರಿಂದ ನಡೆದ ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಅವರೇ ಜಯಗಳಿಸಿದ್ದಾರೆ. ಒಮ್ಮೆ ಮಾತ್ರ ರೈತ ಸಂಘದ ಕೆ.ಎಸ್. ಪುಟ್ಟಣ್ಣಯ್ಯ ಗೆಲುವಿನ ನಗೆ ಬೀರಿದ್ದರು. ಈ ಬಾರಿಯೂ ಸೆಣೆಸಲು ಪುಟ್ಟಣ್ಣಯ್ಯ ಪುತ್ರ ದರ್ಶನ್ ತಾಲೀಮು ಆರಂಭಿಸಿದ್ದಾರೆ.
ವೈರಮುಡಿ ಸಂಭ್ರಮದ ಕ್ಷೇತ್ರ
ಪಾಂಡವಪುರ ಕ್ಷೇತ್ರ ಮರು ವಿಂಗಡಣೆಯಲ್ಲಿ ಮೇಲುಕೋಟೆ ಹೆಸರಲ್ಲಿ ಹೊಸ ರೂಪ ತಳೆದಿದೆ. ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಭಾಗಶಃ ಗ್ರಾಮಗಳು ಮೇಲುಕೋಟೆ ಕ್ಷೇತ್ರಕ್ಕೆ ಸೇರಿವೆ. ಮಂಡ್ಯ ನಗರದ ಗಡಿಯಂಚಿನ 2 ಕಿ.ಮೀ.ನಿಂದಲೇ ಮೇಲುಕೋಟೆ ಕ್ಷೇತ್ರ ಪ್ರಾರಂಭವಾಗುತ್ತದೆ. ವಿಶ್ವವಿಖ್ಯಾತ ವೈರಮುಡಿ ಉತ್ಸವ ನೆರವೇರುವ ಶ್ರೀ ಚಲುವನಾರಾಯಣಸ್ವಾಮಿ ದೇಗುಲ ಈ ಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ಮೇಲುಕೋಟೆಯಲ್ಲಿದೆ.
ತೊಣ್ಣೂರು ಕೆರೆಯಂತಹ ಪ್ರವಾಸಿ ತಾಣವಿದೆ. ಕೆ.ಆರ್.ಎಸ್. ಜಲಾಶಯದ ನಾರ್ತ್ ಬ್ಯಾಂಕ್ ವರೆಗೂ ಕ್ಷೇತ್ರ ಚಾಚಿಕೊಂಡಿದೆ. ಇಷ್ಟು ವರ್ಷದ ರಾಜಕಾರಣದಲ್ಲಿ ಈ ಕ್ಷೇತ್ರವರೊಬ್ಬರು ಒಮ್ಮೆಯೂ ಸಚಿವ ಪದವಿಗೇರಿಲ್ಲ ಮತ್ತು ಸಂಸದರಾಗಿಲ್ಲ ಎನ್ನುವ ಕೊರಗು ಪುಟ್ಟರಾಜು ಮೂಲಕ ನೀಗಿದೆ. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ ಅವರು ಇದೇ ಮೇಲುಕೋಟೆ ಕ್ಷೇತ್ರಕ್ಕೆ ಸೇರಿದ ಇಂಗಲಗುಪ್ಪೆ ಗ್ರಾಮದವರು.
ಪುಟ್ಟರಾಜು ವರ್ಸಸ್ ಪುಟ್ಟಣ್ಣಯ್ಯ
2004 ರ ಚುನಾವಣೆಯಲ್ಲಿ ಇನ್ನೂ ಪಾಂಡವಪುರ ಕ್ಷೇತ್ರವಾಗಿತ್ತು. ಆ ವೇಳೆಗೆ ಹಾಲಿ ಕಾಂಗ್ರೆಸ್ ಶಾಸಕರಾಗಿದ್ದ ಕೆ.ಕೆಂಪೇಗೌಡ ನೇಪಥ್ಯಕ್ಕೆ ಸರಿದರು. ಜೆಡಿಎಸ್ ನಿಂದ ದೇವೇಗೌಡರ ಮಾನಸಪುತ್ರ ಎಂದೇ ಹೆಸರಾದ ಸಿ.ಎಸ್.ಪುಟ್ಟರಾಜು ಚೊಚ್ಚಲ ಬಾರಿ ಸ್ಪರ್ಧೆಗೆ ಧುಮುಕಿದರು. ರೈತ ಸಂಘದಿಂದ ಅದರ ರಾಜ್ಯಾಧ್ಯಕ್ಷರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ(1994ರಲ್ಲಿ ಶಾಸಕರಾಗಿದ್ದರು) ಸ್ಪರ್ಧಿಸಿದರು. ಪುಟ್ಟರಾಜು ಮತ್ತು ಪುಟ್ಟಣ್ಣಯ್ಯ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಈ ಹೋರಾಟದಲ್ಲಿ ಪುಟ್ಟರಾಜು ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಲ್.ಡಿ.ರವಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದರು. ಬಿಜೆಪಿಗೆ ಠೇವಣಿ ಸಿಕ್ಕಿರಲಿಲ್ಲ.
2008 ರ ಚುನಾವಣೆಯಲ್ಲೂ ಕ್ಷೇತ್ರ ಮರುವಿಂಗಡಣೆಗೊಂಡು, ಮೇಲುಕೋಟೆ ಹೆಸರು ಬಂದಿತು. ಮತ್ತೆ ಆಗಲೂ ಸಿ.ಎಸ್.ಪುಟ್ಟರಾಜು ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ನೇರ ಎದುರಾಳಿಗಳಾಗಿದ್ದರು. ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದ ಮಂಡ್ಯ ತಾಲೂಕಿನ ದುದ್ದ ಹೋಬಳಿಯಲ್ಲಿ ದೊರೆತ ಅಭೂತಪೂರ್ವ ಬೆಂಬಲದೊಂದಿಗೆ ಪುಟ್ಟರಾಜು ಸತತ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ಠೇವಣಿ ಜಪ್ತಿಯಾಯಿತು.
2013 ರ ಹೊತ್ತಿಗೆ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿಯೇ ಬಿಟ್ಟಿತು. ಸತತ ಮೂರು ಬಾರಿ ಸೋಲು ಕಂಡಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಇದು ಕಡೆ ಚುನಾವಣೆ ಎಂದೇ ಬಿಂಬಿಸಿಕೊಂಡು, ಹೋರಾಟಕ್ಕೆ ಇಳಿದರು. ಎರಡು ಬಾರಿ ಶಾಸಕರಾಗಿದ್ದ ಪುಟ್ಟರಾಜುಗೆ ಆಡಳಿತ ವಿರೋಧಿ ಅಲೆ ಎದುರಾಯಿತು. ಗುತ್ತಿಗೆ ಕಾಮಗಾರಿಗಳ ವಿಚಾರವಾಗಿ ಸ್ವಪಕ್ಷೀಯ ಗುತ್ತಿಗೆದಾರರ ಜತೆಗೆ ಪುಟ್ಟರಾಜು ಮನಸ್ತಾಪ ಮಾಡಿಕೊಂಡಿದ್ದರು. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಡಮ್ಮಿ ಮಾಡಿ, ಪುಟ್ಟಣ್ಣಯ್ಯರನ್ನು ಬೆಂಬಲಿಸಿತು. ಇದೆಲ್ಲದರ ಪರಿಣಾಮ ಪುಟ್ಟಣ್ಣಯ್ಯ ಗೆಲುವು ಕಂಡರು. ಈ ಚುನಾವಣೆ ಸೋಲಿನ ತರುವಾಯ ಪುಟ್ಟರಾಜು ಸುಮ್ಮನಿರಲಿಲ್ಲ. ಲೋಕಸಭೆ ಉಪ ಚುನಾವಣೆಗೂ ಸ್ಪರ್ಧಿಸಿದರು. ಅಲ್ಲಿ ಮತ್ತೊಂದು ಸೋಲು ಕಂಡರು. ಕೆಲವೇ ತಿಂಗಳಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಎದುರಾದಾಗ ಮತ್ತೆ ಸ್ಪರ್ಧಿಸಿ, ಗೆಲುವಿನ ಲಯಕ್ಕೆ ಮರಳಿದರು. 2013ರ ವಿಧಾನಸಭೆ ಚುನಾವಣೆ ಸೋಲು ಪುಟ್ಟರಾಜು 2014ಕ್ಕೆ ಪಾರ್ಲಿಮೆಂಟ್ ಸದಸ್ಯರಾಗಲು ಕಾರಣವಾಯಿತು.
ವರ್ಕ್ ಆಗಲಿಲ್ಲ ಪುಟ್ಟಣ್ಣಯ್ಯ ಅನುಕಂಪ
2018ರ ಚುನಾವಣೆಗೆ ಕೆಲವೇ ದಿನಗಳಿರುವಾಗ ಹಾಲಿ ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಹೃದಯಾಘಾತದಿಂದ ನಿಧನರಾದರು. ಅಮೆರಿಕದಲ್ಲಿದ್ದ ದರ್ಶನ್ ಪುಟ್ಟಣ್ಣಯ್ಯ ಅವರು ತಂದೆಯ ಕನಸಿನ ಕೂಸಾದ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಅಭ್ಯರ್ಥಿಯಾದರು. ತಂದೆ ಸಾವಿನ ಸಿಂಪಥಿ ದರ್ಶನ್ ಪರವಾಗಿ ಇತ್ತು. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆನ್ನುವ ನಿಟ್ಟಿನಲ್ಲಿ ಒಕ್ಕಲಿಗರು ಪ್ರದರ್ಶನ ಮಾಡಿದ ಒಗ್ಗಟ್ಟಿನ ಬೆಂಬಲ ಇನ್ನೂ ಜೋರಾಗಿಯೇ ಇತ್ತು. ಕುಮಾರಸ್ವಾಮಿ ಪರವಾದ ಬಿರುಗಾಳಿ ಮತ್ತು ಪುಟ್ಟರಾಜು ಜನಪ್ರಿಯತೆ ಎದುರು ಸಾವಿನ ಸಿಂಪಥಿ ಕೆಲಸ ಮಾಡಲಿಲ್ಲ. ಪುಟ್ಟರಾಜು ಮತ್ತೊಂದು ದೊಡ್ಡ ಮಟ್ಟದ ಅಂತರದ ಗೆಲುವು ದಾಖಲಿಸಿ, 3ನೇ ಬಾರಿ ಶಾಸಕರಾದರು. ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ನೀರಾವರಿ ಖಾತೆಯೊಂದಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಕೂಡ ಹೆಗಲಿಗೇರಿಸಿಕೊಂಡರು.
2023ರ ಮುಖಾಮುಖಿ
ಮಾಜಿ ಸಚಿವ, ಶಾಸಕ ಸಿ.ಎಸ್. ಪುಟ್ಟರಾಜು ತಮ್ಮ ಪಕ್ಷಾಂತರದ ಬಗ್ಗೆ ಎದ್ದಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಲಾ ಒಮ್ಮೆ ಸಚಿವ ಮತ್ತು ಸಂಸದ, ಮೂರನೇ ಬಾರಿ ಶಾಸಕರಾಗಿರುವ ಪುಟ್ಟರಾಜು ಜೆಡಿಎಸ್ ನಲ್ಲಿ ಮತ್ತಷ್ಟು ಕ್ರಿಯಾಶೀಲರಾಗಿದ್ದು, ತಾವಿರುವ ಪಕ್ಷದಿಂದಲೇ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಮಂಡ್ಯದಲ್ಲಿ ಜನತಾ ಪರಿವಾರದಿಂದ ಸಚಿವರಾದವರಿಗೆ ದೇವೇಗೌಡರ ಕುಟುಂಬದ ಜತೆ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ವಾಡಿಕೆ. ಅಂತೆಯೇ ಪುಟ್ಟರಾಜು ಕೂಡ ಕೆಲ ಕಾಲ ಅಂತರ ಕಾಯ್ದುಕೊಂಡಿದ್ದರು. ಇನ್ನೇನು ಪಕ್ಷ ಬಿಟ್ಟೇ ಬಿಟ್ಟರು ಎನ್ನುವ ಮಟ್ಟಕ್ಕೆ ಬೆಳವಣಿಗೆ ನಡೆದು ಹೋಗಿತ್ತು. ಹಳಸಿದ್ದ ಸಂಬಂಧ ಈಗ ಸರಿ ಹೋಗಿದೆ.
ಇವರ ಟಿಕೆಟ್‌ಗೆ ದಳಪತಿಗಳಿಂದಲೂ ಯಾವುದೇ ಅಡೆತಡೆ ಇಲ್ಲ. ಅರೆ ನೀರಾವರಿ ಪ್ರದೇಶವಾಗಿರುವ ಮೇಲುಕೋಟೆ ಕ್ಷೇತ್ರದಲ್ಲಿ ಏತ ನೀರಾವರಿ ಕ್ರಾಂತಿ, ಸಮಗ್ರ ರಸ್ತೆಗಳ ನಿರ್ಮಾಣ ಸಹಿತ ಅಭಿವೃದ್ಧಿಯ ಕ್ರಾಂತಿಯನ್ನು ಪುಟ್ಟರಾಜು ಮಾಡಿದ್ದು, ಕ್ಷೇತ್ರ ಗಟ್ಟಿಗೊಳಿಸಿಕೊಂಡಿದ್ದಾರೆ.
ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅಗಲಿಕೆ ನಂತರ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಕಳೆದ ಬಾರಿ ಸರ್ವೋದಯ ಕರ್ನಾಟಕ ಪಕ್ಷದ ಹೆಸರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದ ಪುಟ್ಟರಾಜು ಸಮ್ಮಿಶ್ರ ಸರ್ಕಾರದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿಯೊಂದಿಗೆ ಸಚಿವ ಕೂಡ ಆದರು. ಸೋಲಿನ ನಂತರ ಮತ್ತೆ ವಿದೇಶಕ್ಕೆ ಹಾರಿದ್ದ ದರ್ಶನ್ ಪುಟ್ಟಣ್ಣಯ್ಯ ತವರಿಗೆ ಮರಳಿದ್ದು, ಚುನಾವಣೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಡಾ.ಎಚ್.ಎನ್. ರವೀಂದ್ರ, ಬಿಜೆಪಿಯಲ್ಲಿ ಡಾ. ಇಂದ್ರೇಶ್ ಸ್ವಪಕ್ಷಗಳಿಗೆ ಇಲ್ಲದ ನೆಲೆ ಕಂಡುಕೊಟ್ಟು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್ ಮತ್ತೆ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡುವುದೋ ಅಥವಾ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದೋ ಎನ್ನುವುದು ಜಿಜ್ಞಾಸೆ ಮೂಡಿಸಿದೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಸಿ.ಎಸ್.ಪುಟ್ಟರಾಜು (ಜೆಡಿಎಸ್)
2. ದರ್ಶನ್ ಪುಟ್ಟಣ್ಣಯ್ಯ (ಸರ್ವೋದಯ ಕರ್ನಾಟಕ ಪಕ್ಷ )
3. ಡಾ.ಎಚ್.ಎನ್.ರವೀಂದ್ರ (ಕಾಂಗ್ರೆಸ್)
4. ಡಾ. ಇಂದ್ರೇಶ್ (ಬಿಜೆಪಿ)
ಇಸವಿ | ವಿಜೇತ ಅಭ್ಯರ್ಥಿ – ಮತ | ಪರಾಜಿತ ಅಭ್ಯರ್ಥಿ – ಮತ | ಅಂತರ |
2004 | ಸಿ.ಎಸ್.ಪುಟ್ಟರಾಜು(ಜೆಡಿಎಸ್) – 44,165 | ಕೆ.ಎಸ್.ಪುಟ್ಟಣ್ಣಯ್ಯ(ರೈತ ಸಂಘ) – 41,661 | 2,504 |
2008 | ಸಿ.ಎಸ್.ಪುಟ್ಟರಾಜು(ಜೆಡಿಎಸ್) 66,626 | ಕೆ.ಎಸ್.ಪುಟ್ಟಣ್ಣಯ್ಯ(ರೈತ ಸಂಘ) – 54,681 | 11,945 |
2013 | ಕೆ.ಎಸ್.ಪುಟ್ಟಣ್ಣಯ್ಯ(ರೈತ ಸಂಘ) 80,041 | ಸಿ.ಎಸ್.ಪುಟ್ಟರಾಜು(ಜೆಡಿಎಸ್) – 70,193 | 9,848 |
2018 | ಸಿ.ಎಸ್.ಪುಟ್ಟರಾಜು(ಜೆಡಿಎಸ್) 96,003 | ದರ್ಶನ್ ಪುಟ್ಟಣ್ಣಯ್ಯ(ರೈತ ಸಂಘ) – 73,779 | 22,224 |
ವಿಧಾನಸಭಾ ಕ್ಷೇತ್ರ | ಒಟ್ಟು ಮತದಾರರು | ಪುರುಷ ಮತದಾರರು | ಮಹಿಳಾ ಮತದಾರರು | ಇತರೆ ಮತದಾರರು |
ಮೇಲುಕೋಟೆ ಕ್ಷೇತ್ರ | 19,5970 | 97,592 | 98,374 | 04 |
ಜಾತಿವಾರು ಮತದಾರರ ವಿವರ
ಲಿಂಗಾಯತ | ಮುಸ್ಲಿಂ | ಎಸ್ಸಿ | ಕುರುಬ | ಎಸ್ಟಿ |
17,000 | 8,000 | 28,000 | 9,000 | 4,000 |
ಒಕ್ಕಲಿಗ | ಸವಿತಾ ಸಮಾಜ | ಬ್ರಾಹ್ಮಣ | ವಿಶ್ವಕರ್ಮ | ಇತರೆ |
95,000 | 4000 | 5,000 | 5,000 | 14,000 |