ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ತಾವು ಮಾಡಿದ ಕಾಮಗಾರಿಗಳ ಬಾಕಿ ಬಿಲ್ (Pending bills of works) ಅನ್ನು 2 ವರ್ಷಗಳಿಂದ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ಜೀವನ ನಡೆಸುವುದು ಕಷ್ಟವಾಗಿದೆ. ಹಾಗಾಗಿ ದಯಾಮರಣ ಬೇಕು ಎಂದು ಕೋರಿ ರಾಜ್ಯಪಾಲರಿಗೆ ಪತ್ರ (Mercy letter to Governor) ಬರೆದಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ (BBMP contractors) ಕಾನೂನು ಸಂಕಷ್ಟ ಎದುರಾಗಿದೆ. ದಯಾಮರಣ ಪತ್ರದ ತನಿಖೆಯನ್ನು ಪೊಲೀಸರು (Police investigation) ತೀವ್ರಗೊಳಿಸಿದ್ದು, ಕಾಮಗಾರಿಯನ್ನೇ ಮಾಡದ ಕೆಲವು ಗುತ್ತಿಗೆದಾರರು ಪತ್ರಕ್ಕೆ ಸಹಿ ಹಾಕಿ ಈಗ ಪೇಚಿಗೆ ಸಿಲುಕಿದ್ದಾರೆ ಎಂದು ಗೊತ್ತಾಗಿದೆ. ಈ ಮೂಲಕ ಕಮಿಷನ್ ಪಾಲಿಟಿಕ್ಸ್ (Commission Politics) ಮುಂದುವರಿದಿದೆ.
ಬಿಬಿಎಂಪಿ ಗುತ್ತಿಗೆದಾರರ ದಯಾಮರಣ ಪತ್ರದ ಬಗ್ಗೆ ಪೊಲೀಸ್ ತನಿಖೆ ತೀವ್ರಗೊಂಡಿದ್ದು, ಪತ್ರಕ್ಕೆ ಸಹಿ ಹಾಕಿದ ಕೆಲವು ಗುತ್ತಿಗೆದಾರರಿಗೆ ಕಾನೂನು ಕಂಟಕ ಎದುರಾಗಿದೆ. ದಯಾಮರಣ ಪತ್ರದ ಬಗ್ಗೆ ಶೇಷಾದ್ರಿಪುರಂ ಉಪವಿಭಾಗ ಎಸಿಪಿ ಪ್ರಕಾಶ್ ಅವರು ಸುಮಾರು 57 ಜನ ಗುತ್ತಿಗೆದಾರರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ 38 ಮಂದಿ ಗುತ್ತಿಗೆದಾರರು ಕಾಮಗಾರಿ ಮಾಡಿದ್ದು, ಉಳಿದ 19 ಮಂದಿ ಯಾವುದೇ ಕಾಮಗಾರಿ ನಡೆಸದೆ ಇದ್ದರೂ ದಯಾಮರಣಕ್ಕೆ ಸಹಿ ಹಾಕಿ ಈಗ ಪೇಚಿಗೆ ಸಿಲುಕಿದ್ದಾರೆ ಎಂಬುದು ಗೊತ್ತಾಗಿದೆ.
ಬಿಬಿಎಂಪಿ ಕಾಮಗಾರಿಯ ಬಿಲ್ ಬಾಕಿ ಇದ್ದು, ತ್ವರಿತವಾಗಿ ಹಣ ಬಿಡುಗಡೆ ಮಾಡಿಸುವಂತೆ 19 ಮಂದಿ ಗುತ್ತಿಗೆದಾರರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಸಹಿ ಹಾಕಿದ್ದಾರೆ. ಗುತ್ತಿಗೆದಾರರ ಈ ಪತ್ರದಿಂದ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದು, ಪೊಲೀಸರ ತನಿಖೆ ವೇಳೆ ಈ 19 ಗುತ್ತಿಗೆದಾರರು ಯಾವುದೇ ಕಾಮಗಾರಿ ನಡೆಸದೇ ಇರುವುದು ಬೆಳಕಿಗೆ ಬಂದಿದೆ.
ಕಾನೂನು ಕ್ರಮಕ್ಕೆ ಮುಂದಾದ ಪೊಲೀಸರು
ಆದ್ದರಿಂದ ಪತ್ರದ ಮೂಲಕ ಸರ್ಕಾರಕ್ಕೆ ಮುಜುಗರ ತರಿಸುವ ಪ್ರಯತ್ನ ನಡೆಸಿದ ಆರೋಪದ ಮೇಲೆ 19 ಮಂದಿ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕಾನೂನು ಪ್ರಕ್ರಿಯೆ ಆರಂಭಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ದಾಖಲೆ ಒದಗಿಸದಿದ್ದಲ್ಲಿ ಕಾನೂನು ಕಂಟಕ!
ಕಾಮಗಾರಿ ಮಾಡದೇ ಹಣ ಬಿಡುಗಡೆಗೊಳಿಸುವಂತೆ ವಿನಾಕಾರಣ ಒತ್ತಡ ಹಾಕಿದ ಆರೋಪದ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಕಾಮಗಾರಿ ಮಾಡಿದ ಬಗ್ಗೆ ಸೂಕ್ತ ದಾಖಲೆ ಒದಗಿಸಲು ಕೋರಿದ್ದಾರೆ. ಪಾಲಿಕೆಯ ಯಾವ ಕಾಮಗಾರಿ ಮಾಡಿದ್ದೀರಾ? ಎಲ್ಲಿ ಕಾಮಗಾರಿ ಮಾಡಲಾಗಿದೆ? ಎಷ್ಟು ಮೊತ್ತದ ಕಾಮಗಾರಿ? ಎಷ್ಟು ಬಿಲ್ ಬಾಕಿ ಇದೆ ಎಂಬ ದಾಖಲೆ ಒದಗಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಪೊಲೀಸರು ಕೇಳಿದ ದಾಖಲೆ ಹಾಜರು ಪಡಿಸದಿದ್ದಲ್ಲಿ ಕಾನೂನು ಕಂಟಕ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
ಇದನ್ನೂ ಓದಿ: Operation Hasta : ಆಯನೂರು ಸೇರ್ಪಡೆ ಪಕ್ಕಾ? ʼಆಪರೇಷನ್ ಹಸ್ತʼ ಹೌದು ಅಂದ್ರು ಡಿಕೆಶಿ, ಸತೀಶ್!
ಗುತ್ತಿಗೆದಾರನತ್ತ ಪೊಲೀಸರ ದೃಷ್ಟಿ
ಸದ್ಯ ಗುತ್ತಿಗೆದಾರರ ವಿಚಾರಣೆ ನಡೆಸಿದ ಪೊಲೀಸರು ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ. ಯಾವ ಗುತ್ತಿಗೆದಾರ ಯಾವ ಕಾಮಗಾರಿ ಮಾಡಿದ್ದಾರೆ, ಯಾವಾಗ ಕಾಮಗಾರಿ ಮಾಡಲಾಗಿದೆ? ಬಿಲ್ ಮೊತ್ತ ಎಷ್ಟು? ಬಾಕಿ ಮೊತ್ತ ಎಷ್ಟು ಎಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.