ವಿಧಾನಸಭೆ: ಎಸ್‌ಸಿಎಸ್‌ಟಿ ಸಮುದಾಯದ ರೈತರ ಕೃಷಿ ಭೂಮಿಯಲ್ಲಿ ಉಚಿತವಾಗಿ ಬೋರ್‌ವೆಲ್ ಕೊರೆಯುವ ಗಂಗಾ ಕಲ್ಯಾಣ ಯೋಜನೆಯು ಸರಿಯಾಗಿ ನಡೆಯದೇ ಇರಲು ಬೋರ್‌ವೆಲ್ ಗುತ್ತಿಗೆದಾರರ ಲಾಬಿಯೊಂದು ಪ್ರಯತ್ನ ನಡೆಸುತ್ತಿರುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆ ಕುರಿತು ಸಾಕಷ್ಟು ಹೊತ್ತು ಚರ್ಚೆ ನಡೆಯಿತು. ಸಚಿವರ ಉತ್ತರದ ಕುರಿತು ಉಪಪ್ರಶ್ನೆ ಮಾಡಿದ ಯತೀಂದ್ರ, ಇಲಾಖೆಗಳಲ್ಲಿ ಅನೇಕ ಸಮಸ್ಯೆಗಳನ್ನು, ಗೋಜಲುಗಳನ್ನು ಮಾಡಿಕೊಳ್ಳಲಾಗಿದೆ. 2018-19ರಲ್ಲಿ ಮಂಜೂರಾದ ಅಭ್ಯರ್ಥಿಗಳಿಗೆ ಈಗ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಮೂರ್ನಾಲ್ಕು ವರ್ಷವಾದರೂ ಕೊಳವೆ ಬಾವಿ ಕೊರೆಯಲಿಲ್ಲ ಎಂದರೆ ತೊಂದರೆ ಆಗುತ್ತದೆ. ಅಧಿಕಾರಿಗಳ ಮೂಲಕ ಎಚ್ಚರಿಕೆ ಕೊಡಿಸಿದರೂ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ಇಡೀ ರಾಜ್ಯಕ್ಕೆ ಒಬ್ಬರಿಗೇ ಗುತ್ತಿಗೆ ನೀಡಿರುವುದರಿಂದ ತೊಂದರೆ ಆಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, 452 ಬೋರ್‌ವೆಲ್ ಕೊರೆಯುವುದು ಬಾಕಿಯಿದೆ ಎಂದು ಹೇಳಿದ್ದೇನೆ. 2018-19ರಿಂದಲೂ ಬಾಕಿ ಇರುವುದನ್ನು ಈಗ ಮಾಡಲಾಗುತ್ತಿದೆ. ಬಡವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೇ ಹೀಗೆ ಮಾಡಲಾಗುತ್ತಿದೆ. ಟೆಂಡರ್ ಪಾರದರ್ಶಕವಾಗಿದೆಯೇ? ಈ ಟೆಂಡರ್ ತೆಗೆದುಕೊಂಡವರಿಗೆ ಅದರ ಸಾಮರ್ಥ್ಯವಿದೆಯೇ? ಎಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕು.
ಆದರೆ ಟರ್ನ್‌ಕೀ ಮಾಡಿದರೆ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ, ಮೂರನೇ ವ್ಯಕ್ತಿ ಪರಿಶೀಲನೆ ಮಾಡಿದರೆ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಕೆಲವು ಗುತ್ತಿಗೆದಾರರಿದ್ದಾರೆ, ಯಾವುದೇ ಸರ್ಕಾರ ಬಂದರೂ ಅವರಿಗೇ ಸಿಗಬೇಕು ಎನ್ನುವುದು ಅವರ ನಿರೀಕ್ಷೆ. ಕೊರೆಯುವವರೊಬ್ಬರು, ವಿದ್ಯುತ್ ನೀಡುವವರೊಬ್ಬರು, ಪಂಪ್ ನೀಡುವವರೊಬ್ಬರು ಇದ್ದರು. ಈಗ ಎಲ್ಲವನ್ನೂ ಒಬ್ಬರೇ ಮಾಡಬೇಕು ಎಂದು ತೀರ್ಮಾನಿಸಿದ ಮೇಲೆ ಕೆಲವರಿಗೆ ಗುತ್ತಿಗೆ ಸಿಕ್ಕಿಲ್ಲ, ಅದಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಈಗ ಯಾವ ಗುತ್ತಿಗೆದಾರರ ಸಮಸ್ಯೆ ಇಲ್ಲ. ಕೊರೆದ ನಂತರ ಅಷ್ಟೂ ಹಣವನ್ನು ಫಲಾನುಭವಿ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದರು.
ಈ ಸಮಯದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ, ವಿವಿಧ ಇಲಾಖೆಗಳಲ್ಲಿ ಬೋರ್‌ವೆಲ್ ಕೊರೆಯಲು ಬೇರೆ ಬೇರೆ ದರ ನೀಡಲಾಗುತ್ತಿದೆ. ಮೊದಲು ಕನ್ಸಾರ್ಷಿಯಂ ಇತ್ತು, ಈಗ ಟರ್ನ್‌ಕೀ ಪದ್ಧತಿ ಮಾಡಿದ್ದಾರೆ. ಇದನ್ನು ಏಕೆ ಮಾಡಿದ್ದಾರೆ ಎಂದು ತಿಳಿಸಬೇಕು. ಅನೇಕ ಗುತ್ತಿಗೆದಾರರು ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ ಎಂದರು. ಈ ನಡುವೆ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿದರು.
ಕಳೆದ 25 ವರ್ಷಗಳಿಂದಲೂ ಈ ವಿಚಾರ ಚರ್ಚೆಯಲ್ಲಿದೆ. ಯಾವ ವರ್ಷವೂ ಬೋರ್‌ವೆಲ್ ಕೊರೆಯುವ ಗುರಿ ಮುಟ್ಟಿದ ಉದಾಹರಣೆಯೇ ಇಲ್ಲ. ಒಂದು ವರ್ಷ ಬೋರ್‌ವೆಲ್ ಕೊರೆದು ಅದಕ್ಕೆ ಮೂರ್ನಾಲ್ಕು ವರ್ಷದ ನಂತರ ವಿದ್ಯುತ್ ನೀಡಲು ಹೋಗುತ್ತಾರೆ. ಅಷ್ಟುಹೊತ್ತಿಗೆ ಆ ಬೋರ್‌ವೆಲ್‌ಗಳು ಮುಚ್ಚಿಹೋಗಿರುತ್ತವೆ. ಹೀಗಾಗಿ ಯಾವ ವರ್ಗಕ್ಕೆ ಗುರಿಯಾಗಿ ಯೋಜನೆ ರೂಪಿಸಲಾಗಿದೆಯೋ ಆ ಉದ್ದೇಶ ಈಡೇರಿಲ್ಲ. ಹೀಗಾಗಿ ಬೋರ್‌ವೆಲ್ ಕೊರೆದರೆ ಅದೇ ವರ್ಷ ವಿದ್ಯುತ್ ಸಂಪರ್ಕವನ್ನು ಕೊಡಬೇಕು ಎಂದು ಕಾರ್ಯ ಮಾಡಲಾಗುತ್ತಿದೆ.
ಕೆಲವರಿಗೆ ಹಿಂದಿನ ಪದ್ಧತಿ ಅನುಕೂಲವಾಗಿತ್ತು. ಹೊಸ ಪದ್ಧತಿಯಲ್ಲಿ ಕೆಲವರಿಗೆ ಅರ್ಹತೆ ಸಿಕ್ಕಿಲ್ಲ. ಅದಕ್ಕಾಗಿ ಇವರು ಕೋರ್ಟ್‌ಗೆ ಹೋಗಿದ್ದಾರೆ. ಇದೇ ವರ್ಷ ಎಲ್ಲ ಬೋರ್‌ವೆಲ್‌ಗಳನ್ನೂ ಪೂರೈಸಲು ಆದೇಶಿಸುತ್ತೇನೆ. ಈ ಕುರಿತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಶಾಸಕರ ಸಭೆ ನಡೆಸಲಾಗುತ್ತದೆ ಎಂದರು.
ಮತ್ತೂ ಕೆಲಸ ಸದಸ್ಯರು ಗದ್ದಲ ಮುಂದುವರಿಸಿದಾಗ ಉತ್ತರಿಸಿದ ಸಿಎಂ ಬೊಮ್ಮಾಯಿ, ಹಿಂದಿನ ಎಲ್ಲ ಕಾಮಗಾರಿಗಳ ಕುರಿತು ತನಿಖೆಗೆ ಆದೇಶ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ | ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಈ ಅಧಿವೇಶನದಲ್ಲೇ ಸಿಹಿ ಸುದ್ದಿ: ಸಿಎಂ ಬೊಮ್ಮಾಯಿ ಹೇಳಿದ್ದೇನು?