ಮಂಡ್ಯ: ಶಿವಮೊಗ್ಗ ಉಸ್ತುವಾರಿ ಹೊಣೆ ಹೊತ್ತಿರುವ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಆ ಜಿಲ್ಲೆಯಲ್ಲಿ ತಾವು ನಿಮಿತ್ತ ಮಾತ್ರ, ಎಲ್ಲ ಕೆಲಸಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬುಗರಿಯಂತೆ ಹಿಡಿದು ಕುಳಿತಿದ್ದಾರೆ. ಮಂಡ್ಯ ಉಸ್ತುವಾರಿ ಸಚಿವನಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಈಗ ನನ್ನ ಕೈ ಕಟ್ಟಿಹಾಕಲಾಗಿದೆ ಎಂದು ಅಸಮಾಧಾನ ಹೊರಹಾಕುವ ಮೂಲಕ ಮಂಡ್ಯ ಉಸ್ತುವಾರಿಗೆ ಪರೋಕ್ಷ ಬೇಡಿಕೆ ಇಟ್ಟಿದ್ದಾರೆ.
ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಜಾಗೃತಿ ಸಮಾವೇಶವೊಂದರಲ್ಲಿ ಮಾತನಾಡಿದ ಕೆ.ಸಿ. ನಾರಾಯಣ ಗೌಡ, “ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ನನ್ನನ್ನು ಕಟ್ಟಿಹಾಕಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಉತ್ತಮ ಕೆಲಸ ಮಾಡುತ್ತಿದ್ದೆ. ಶಿವಮೊಗ್ಗ ಉಸ್ತುವಾರಿಯನ್ನಾಗಿ ಮಾಡುವ ಮೂಲಕ ನನ್ನನ್ನು ಕಟ್ಟಿಹಾಕಲಾಗಿದೆ ಎಂದು ತಮ್ಮ ಬೇಸರ ಹೊರಹಾಕಿದರು.
ಶಿವಮೊಗ್ಗದಲ್ಲಿ ದೊಡ್ಡ ದೊಡ್ಡ ಹುಲಿಗಳಿವೆ. ಅಲ್ಲಿ ನಾನು ಚಿಕ್ಕವನಾಗಿ ಕೆಲಸ ಮಾಡೋದು ಸುಲಭವಲ್ಲ. ಕೆ.ಆರ್. ಪೇಟೆಯವನಾದ ನನ್ನನ್ನು ಶಿವಮೊಗ್ಗ ಉಸ್ತುವಾರಿ ಸಚಿವನನ್ನಾಗಿ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಾನು ಸಾಷ್ಟಾಂಗ ನಮಸ್ಕಾರ ಹೇಳಬೇಕಾಗುತ್ತದೆ ಎಂದು ಹೇಳಿದರು.
ಅಲ್ಲಿ ಮಾಡಲು ನನಗೇನೂ ಇಲ್ಲ
ಶಿವಮೊಗ್ಗ ಜಿಲ್ಲೆಯಲ್ಲಿ ನನಗೆ ಮಾಡಲು ಏನೂ ಇರುವುದಿಲ್ಲ. ಎಲ್ಲ ಕೆಲಸಗಳನ್ನೂ ಬುಗುರಿಯ ರೀತಿ ಯಡ್ಡಿಯೂರಪ್ಪ ಹಾಗೂ ಈಶ್ವರಪ್ಪ ಹಿಡಿದುಕೊಂಡು ಕುಳಿತಿದ್ದಾರೆ. ನಾರಾಯಣಗೌಡ ಹೋಗೋದು ಸುಮ್ಮನೆ ಆಗಿದೆ. ಅಲ್ಲಿ ಉದ್ಘಾಟನೆ ಮಾಡುವುದು, ಒಳ್ಳೆಯ ಊಟ ಕೊಡುತ್ತಾರೆ, ತಿಂದುಕೊಂಡು ವಾಪಸ್ ಬರೋದು ಅಷ್ಟೇ ಎಂದು ಹೇಳುವ ಮೂಲಕ ತಮಗೆ ಮಂಡ್ಯ ಉಸ್ತುವಾರಿ ಸಿಕ್ಕಿದರೆ ಜಿಲ್ಲೆಯ ಅಭಿವೃದ್ಧಿ ಮಾಡಬಹುದು ಎಂದು ಪರೋಕ್ಷ ಬೇಡಿಕೆಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ | PFI Banned | ಮಾಜಿ ಸಿಎಂ ಸಿದ್ದರಾಮಯ್ಯ ತಲೆತಿರುಕನಂತೆ ಮಾತನಾಡೋದು ಸ್ವಾಭಾವಿಕ: ಬಿ.ಎಸ್.ಯಡಿಯೂರಪ್ಪ