Site icon Vistara News

ಸಚಿವ ಮಾಧುಸ್ವಾಮಿ ಹೇಳಿಕೆ ವೈರಲ್‌: ಸಚಿವ ಸೋಮಶೇಖರ್‌ ಫುಲ್‌ ಗರಂ

ಎಸ್‌.ಟಿ. ಸೋಮಶೇಖರ್‌

ಮೈಸೂರು: ಸರ್ಕಾರ ಎಲ್ಲವನ್ನೂ ಮ್ಯಾನೇಜ್‌ ಮಾಡುತ್ತಿದೆ, ಸಹಕಾರ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಗರಂ ಆಗಿದ್ದಾರೆ.

ಸಾಮಾಜಿಕ ಕಾರ್ಯಕರ್ತರೊಬ್ಬರ ಜತೆಗೆ ಮಾಧುಸ್ವಾಮಿ ಮಾತನಾಡಿರುವ ಆಡಿಯೊ ವೈರಲ್‌ ಆಗಿದೆ. ಸಹಕಾರ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಸಹಕಾರ ಸಚಿವರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದರು. ಈ ಸರ್ಕಾರದಲ್ಲಿ ಏನು ಕೆಲಸ ಆಗುತ್ತಿಲ್ಲ, ಎಲ್ಲವನ್ನೂ ಮ್ಯಾನೇಜ್‌ ಮಾಡಲಾಗುತ್ತಿದೆ ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದ್ದರು.

ಇದನ್ನೂ ಓದಿ | Audio Viral | ಸರ್ಕಾರ ನಡೀತಾ ಇಲ್ಲ, ಕಾಲ ತಳ್ತಾ ಇದ್ದೀವಿ ಅಷ್ಟೆ: ಮುಜುಗರ ತಂದ ಸಚಿವ ಮಾಧುಸ್ವಾಮಿ ಮಾತು

ಈ ಕುರಿತು ಮೈಸೂರಿನಲ್ಲಿ ಸಚಿವ ಸೋಮಶೇಖರ್‌ ಪ್ರತಿಕ್ರಿಯಿಸಿದ್ದು, “ತನಗಿಂತ ಮೇಧಾವಿ ಈ ರಾಜ್ಯದಲ್ಲಿ ಬೇರೆ ಯಾರೂ ಇಲ್ಲ ಎಂದು ಮಾಧುಸ್ವಾಮಿ ತಿಳಿದುಕೊಂಡಿದ್ದಾರೆ. ನಾನೇ ಮೇಧಾವಿ, ನಾನೇ ಎಲ್ಲ ತಿಳಿದಿರುವವನು ಅಂದು ಕೊಂಡಿದ್ದಾರೆ. ಮೊದಲು ಅವರು ಇದನ್ನು ತಲೆಯಿಂದ ತೆಗೆದುಹಾಕಬೇಕುʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕುಂಟುತ್ತಿದೆ ಎಂಬ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮೇಧಾವಿ ಸಚಿವರು ಹೇಳಿದಂತೆ ಸರ್ಕಾರ ಕುಂಟುತ್ತಿಲ್ಲ. ಬಹುಶಃ ಅವರ ಇಲಾಖೆಯ ಬಗ್ಗೆ ಅವರು ಹೇಳಿರಬಹುದು. ಅವರ ಇಲಾಖೆ ಕುಂಟುತ್ತಿರಬಹುದು, ತೆವಳುತ್ತಿರಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ. ಸರ್ಕಾರದ ಎಲ್ಲ ಇಲಾಖೆಯ ಬಗ್ಗೆ ಮಾಧ್ಯಮಕ್ಕೆ ಅವರೇ ಮಾಹಿತಿ ನೀಡುತ್ತಾರೆ, ಆಗ ಇವರಿಗೆ ಗೊತ್ತಾಗಲಿಲ್ಲವೇ? ಅದು ಅವರದೇ ಧ್ವನಿಯಾಗಿದ್ದರೆ, ಮಾತನಾಡಿರುವುದು ತಪ್ಪು ಎಂದಿದ್ದಾರೆ.

ಆಗಸ್ಟ್‌ 28ಕ್ಕೆ ಒಂದು ವರ್ಷದ ಸಾಧನೆಯ ಕಾರ್ಯಕ್ರಮ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲೂ ಸರ್ಕಾರದಲ್ಲಿ ಕೆಲಸವಾಗಿದೆ, ಬಸವರಾಜ ಬೊಮ್ಮಾಯಿ ಅವರ ಸಮಯದಲ್ಲೂ ಉತ್ತಮ ಕೆಲಸವಾಗುತ್ತಿದೆ ಎಂದರು.

ತಾವು ಹೇಳಿದ ಕೆಲಸ ಮಾಡಿಲ್ಲ ಎಂಬುದರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ. ಸೋಮಶೇಖರ್, ಮಂತ್ರಿ ಹೇಳಿದರು ಎಂದು ಕಾನೂನು ಬಾಹಿರವಾಗಿ ನೋಟಿಸ್ ಕೊಡಲು ಸಾಧ್ಯವಿಲ್ಲ. ಸಹಕಾರ ಬ್ಯಾಂಕ್ ರೈತರ ಆಸ್ತಿ, ಅದು ರೈತರಿಗೆ ಸೇರಿದ್ದು. ಮಾಧುಸ್ವಾಮಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಒಬ್ಬರನ್ನು ಈ ರೀತಿ ಟಾರ್ಗೆಟ್ ಮಾಡುವುದು ಸರಿಯಲ್ಲ. ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಬಹುದು. ಸಚಿವರು ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಮೋದಿಯ ನಾಲ್ಕು ಡೈಲಾಗ್‌ ಮೂಲಕವೇ ಬಿಜೆಪಿ ಸರ್ಕಾರಗಳನ್ನು ಮೂದಲಿಸಿದ ಸಿದ್ದರಾಮಯ್ಯ

Exit mobile version