Site icon Vistara News

Missing Case | ಪ್ರಕರಣದ ಗಂಭೀರ ತನಿಖೆಯಾಗಲಿ ಎಂದ ಈಶ್ವರಪ್ಪ; ತನಿಖೆ ಬಳಿಕವೇ ಹೇಳುವೆ: ಅಲೋಕ್‌ ಕುಮಾರ್‌

chandrashekhara missing case 5

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್‌ (Missing Case death mystery) ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಸ್ವತಃ ರೇಣುಕಾಚಾರ್ಯ ಅವರೇ ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಹೀಗಾಗಿ ಸೂಕ್ತ ತನಿಖೆ ಆಗಬೇಕಿದೆ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಆಗ್ರಹಿಸಿದರು.

ರೇಣುಕಾಚಾರ್ಯ ಅವರ ಸ್ವಗ್ರಾಮ ಕುಂದೂರಿನ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದ ಅವರು, ಚಂದ್ರಶೇಖರ್‌ ಅವರ ಸಾವು ಬೇಸರದ ಸಂಗತಿ. ನಾಲ್ಕು ದಿನದಿಂದ ಅವರ ಕುಟುಂಬದ ಸಂಕಟವನ್ನು ನೋಡಲು ಸಾಧ್ಯವಾಗುತ್ತಿಲ್ಲ. ರೇಣುಕಾಚಾರ್ಯ ಸಹ ಇದು ಷಡ್ಯಂತ್ರ ಎಂದು ಹೇಳಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. ಬಳಿಕ ರೇಣುಕಾಚಾರ್ಯ ಅವರಿಗೆ ಸಾಂತ್ವನ ಹೇಳಿದರು.

ತನಿಖೆ ಹಂತದಲ್ಲಿದೆ ಈಗಲೇ ಹೇಳಲಾಗದು- ಎಡಿಜಿಪಿ ಅಲೋಕ್ ಕುಮಾರ್
ಹೊನ್ನಾಳಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದು, ಚಂದ್ರಶೇಖರ್ ಮೃತದೇಹ ಸಿಕ್ಕ‌ ಸ್ಥಳವನ್ನು ವೀಕ್ಷಣೆ ಮಾಡಿದ್ದಾರೆ. ಬಳಿಕ ಅಲ್ಲಿಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ | Missing Case | ಚಂದ್ರಶೇಖರ್‌ ಸಾವಿನ ತನಿಖೆಗೆ ಡಯಾಟಮ್ ಟೆಸ್ಟ್ ಮೊರೆ ಹೋದ ಎಫ್‌ಎಸ್‌ಎಲ್ ಟೀಂ!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್‌ ಕುಮಾರ್‌, ಚಂದ್ರಶೇಖರ್ ತಂದೆ ದೂರು ಕೊಟ್ಟಿದ್ದು, ದಾವಣಗೆರೆ ಎಸ್‌ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ಮಾಡುತ್ತಿದೆ. ಸ್ಥಳಕ್ಕೆ ಹುಬ್ಬಳ್ಳಿ, ದಾವಣಗೆರೆ ಎಫ್‌ಎಸ್‌ಎಲ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ, ಭೌತಿಕ ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಗುರುವಾರ ರಾತ್ರಿಯೇ ಮರಣೋತ್ತರ ಪರೀಕ್ಷೆ ಆಗಿದೆ. ಇನ್ನು 2-3 ದಿನದಲ್ಲಿ ವರದಿ ಸಿಗಲಿದೆ ಎಂದು ಹೇಳಿದರು.

ಭಾನುವಾರ ರಾತ್ರಿ 11.58ಕ್ಕೆ ನ್ಯಾಮತಿ ಬಳಿ ಕಾರು ಟ್ರೇಸ್ ಆಗಿತ್ತು. 12.06ಕ್ಕೆ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ. ಕಾರು 100 ಕಿ.ಮೀ. ವೇಗದಲ್ಲಿತ್ತು ಎಂದು ಅಂದಾಜಿಸಲಾಗಿದೆ. ಕಾಲ್ ಹಿಸ್ಟರಿ, ಸಿಡಿಆರ್ ಎಲ್ಲವವನ್ನೂ ತನಿಖೆ ಮಾಡಲಾಗುತ್ತಿದೆ. ದಾವಣಗೆರೆ, ಶಿವಮೊಗ್ಗ ಎಸ್‌ಪಿ ಸೇರಿ ತನಿಖೆ ಮಾಡುತ್ತಿದ್ದಾರೆ. ಪ್ರಕರಣವು ತನಿಖೆ ಹಂತದಲ್ಲಿರುವುದರಿಂದ ಬಹಿರಂಗವಾಗಿ ಏನ್ನನ್ನೂ ಹೇಳಲಾಗುವುದಿಲ್ಲ. ಮರಣೋತ್ತರ ಪರೀಕ್ಷೆ ವರದಿಯನ್ನು ಆದಷ್ಟು ಬೇಗ ಕೊಡುವಂತೆ ಕೇಳಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | Chandru death | ಜಾಲ ತಾಣಗಳಲ್ಲಿ ಚಂದ್ರಶೇಖರ್‌ ಚಿತ್ರ, ವಿಡಿಯೊ ಹಂಚಿಕೊಂಡು ಕಣ್ಣೀರಿಟ್ಟ ರೇಣುಕಾಚಾರ್ಯ

ಚಂದ್ರಶೇಖರ್ ಸಾವು ಪ್ರಕರಣ ಸಿಒಡಿಗೆ ಇಲ್ಲವೆಂದ ಸರ್ಕಾರ
ಚಂದ್ರಶೇಖರ್‌ (Missing Case‌ death mystery) ಸಾವು ಪ್ರಕರಣವನ್ನು ಸಿಒಡಿಗೆ ವಹಿಸುವುದಿಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಅವರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತೇವೆ. ನಮ್ಮ ಪೊಲೀಸರು ಉತ್ತಮವಾಗಿ ತನಿಖೆ ನಡೆಸುತ್ತಿರುವುದರಿಂದ ಸಿಒಡಿಗೆ ತನಿಖೆಯನ್ನು ವಹಿಸುವುದಿಲ್ಲ ಎಂದು ಹೇಳಿದರು.

ನಮ್ಮ ಪೊಲೀಸರು ಎಲ್ಲ ಆಯಾಮಗಳಲ್ಲೂ ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಅವರೇ ಈ ಪ್ರಕರಣವನ್ನು ಸಂಪೂರ್ಣವಾಗಿ ನಿಭಾಯಿಸುತ್ತಾರೆ. ನಾನೊಬ್ಬ ಗೃಹ ಮಂತ್ರಿಯಾಗಿ ತನಿಖೆ ಹಂತದಲ್ಲಿರುವ ಪ್ರಕರಣದ ಬಗ್ಗೆ ಮಾತನಾಡಿದರೆ ಅದಕ್ಕೆ ಮತ್ತೊಂದು ಅರ್ಥ ಹಾಗೂ ಆಯಾಮವನ್ನು ಕಲ್ಪಿಸಲಾಗುತ್ತದೆ. ಹಾಗಾಗಿ ತನಿಖೆ ನಡೆದ ಬಳಿಕವೇ ನಾವು ಉತ್ತರ ನೀಡುತ್ತೇವೆ ಎಂದು ಆರಗ ಹೇಳಿದರು.

ಮೇಲ್ನೋಟಕ್ಕೆ ಕೊಲೆ ಎಂದೆನಿಸುತ್ತದೆ: ಬಿ.ಎಸ್.‌ ಯಡಿಯೂರಪ್ಪ
ರೇಣುಕಾಚಾರ್ಯ ಅವರ ಸಹೋದರನ ಸಾವಿನ ಪ್ರಕರಣವು ಅತ್ಯಂತ ದುಃಖ ತಂದಿದೆ. ಸಾವಿನ ಬಗ್ಗೆ ವಾಸ್ತವಾಂಶ ತಿಳಿದು ತನಿಖೆ ನಡೆಸಲಾಗುವುದು. ಮೇಲ್ನೋಟಕ್ಕೆ ಕೊಲೆ ಎಂದು ಅನ್ನಿಸುತ್ತದೆ. ತನಿಖೆ ಮಾಡಿದಾಗ ಸತ್ಯ ಹೊರಬರಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಯೂ ಚರ್ಚಿಸಿದ್ದೇನೆ. ಅವರು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಅಂತಿಮ ದರ್ಶನ ಪಡೆದ ಬಿಎಸ್‌ವೈ
ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್‌ ಸಾವಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಬಿಎಸ್‌ವೈ ರೇಣುಕಾಚಾರ್ಯ ಅವರ ಸ್ವಗ್ರಾಮ ಕುಂದೂರಿನ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಬಳಿಕ ರೇಣುಕಾಚಾರ್ಯಗೆ ಸಾಂತ್ವನ ಹೇಳಿದ ಬಿಎಸ್‌ವೈ, ಮಾನಸಿಕ ಸ್ಥೈರ್ಯ ತುಂಬಿದರು.

ಇದನ್ನೂ ಓದಿ | ಚಂದ್ರು ಸಾವು ಸಹಜವಲ್ಲ, ಕೊಲೆ ಎಂದ ರೇಣುಕಾಚಾರ್ಯ

ಎಫ್‌ಎಸ್‌ಎಲ್‌ ತಂಡದಿಂದ ಸತತ ಶೋಧ
ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಂಡದ ಏಳು ಅಧಿಕಾರಿಗಳಿಂದ ಕೆಲವು ಗಂಟೆಯಿಂದ ಸತತ ಪರಿಶೀಲನೆ ನಡೆದಿದೆ. ಕಾರು ಪತ್ತೆಯಾಗಿರುವ ತುಂಗಾ ಮೇಲ್ದಂಡೆ ನಾಲಾ ಸೇತುವೆ ಬಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆದಿದ್ದು, ಕಾರು ಅಪಘಾತಕ್ಕೊಳಗಾಗಿದೆಯೇ? ಅಥವಾ ಇನ್ಯಾವುದೋ ಕಾರಣವಿದೆಯೇ? ಯಾರೋ ಕೊಲೆ ಮಾಡಿ ಅಪಘಾತ ಎಂಬಂತೆ ಸೃಷ್ಟಿ ಮಾಡಿದ್ದಾರೆಯೇ ಎಂಬಿತ್ಯಾದಿ ಅಂಶಗಳನ್ನೊಳಗೊಂಡಂತೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡವು ಪರಿಶೀಲನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.

ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್‌ಪಿ ರಿಷ್ಯಂತ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತನಿಖೆಯ ಪ್ರತಿ ಸಂಗತಿಗಳನ್ನೂ ಗಮನಿಸುತ್ತಿದ್ದಾರೆ. ಈ ವೇಳೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಶವ ದೊರೆತ ಸ್ಥಳದಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮೂಲಕ ವಿಧಿವಿಜ್ಞಾನ ತಂಡಕ್ಕೆ ಸಹಕಾರ ನೀಡುತ್ತಿದ್ದಾರೆ.

ಏನಿದು ಪ್ರಕರಣ?
ಕಳೆದ ಭಾನುವಾರ (ಅ. ೩೦) ರಾತ್ರಿ ಗೌರಿಗದ್ದೆಗೆ ಹೋಗಿ ಬಂದಿದ್ದ ಚಂದ್ರಶೇಖರ್‌ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದರು. ಆದರೆ, ಗುರುವಾರ (ನ.೩) ಮಧ್ಯಾಹ್ನ ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಕಾರಿನ ಬಿಡಿಭಾಗಗಳು ಬಿದ್ದಿರುವ ಬಗ್ಗೆ ಸುದ್ದಿ ಬಂದಿತ್ತು. ಪರಿಶೀಲನೆ ನಡೆಸಿದಾಗ ಕಾರು ನಾಲೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕಾರನ್ನು ಮೇಲೆತ್ತಿದಾಗ ಚಂದ್ರಶೇಖರ್‌ ಮೃತಪಟ್ಟಿರುವುದು ತಿಳಿದುಬಂದಿದೆ.

ಇದನ್ನೂ ಓದಿ | ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಅಂತ್ಯಸಂಸ್ಕಾರ ಇಂದು ಕುಂದೂರಿನಲ್ಲಿ

Exit mobile version