Site icon Vistara News

Missing Case | ಚಂದ್ರಶೇಖರ್‌ ಸಾವಿನ ತನಿಖೆಗೆ ಡಯಾಟಮ್ ಟೆಸ್ಟ್ ಮೊರೆ ಹೋದ ಎಫ್‌ಎಸ್‌ಎಲ್ ಟೀಂ!

chandrashekhara missing case 2

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್‌ (Missing Case death mystery) ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ಸೂಚಿಸಿದೆ. ಇದರ ಬೆನ್ನಲ್ಲೇ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ವೈದ್ಯರ ತಂಡವು ಡಯಾಟಮ್‌ ಪರೀಕ್ಷೆಗೆ ಮುಂದಾಗಿದೆ.

ಕಾರು ನಾಲೆಗೆ ಬೀಳುವ ಮೊದಲೇ ಚಂದ್ರಶೇಖರ್ ಮೃತಪಟ್ಟಿದ್ದರೇ ಅಥವಾ ನಾಲೆಗೆ ಕಾರು ಬಿದ್ದ ಬಳಿಕ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಎಂಬುದನ್ನು ತಿಳಿಯುವ ಉದ್ದೇಶದಿಂದ ವೈದ್ಯರ ಸಲಹೆ ಮೇರೆಗೆ ಈ ಡಯಾಟಮ್ ಪರೀಕ್ಷೆಯನ್ನು ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ಈ ಮೂಲಕ ಇದು ಕೊಲೆಯೇ? ಅಪಘಾತವೇ ಎಂಬ ಸಂಶಯಕ್ಕೆ ಉತ್ತರವನ್ನು ಕಂಡುಕೊಳ್ಳಲಾಗುವುದು.

ಫೋರೆನ್ಸಿಕ್ ಮೆಡಿಸಿನ್ (ನ್ಯಾಯ ವೈದ್ಯ ಶಾಸ್ತ್ರ) ತಂಡದಿಂದ ಡಯಾಟಮ್ ಟೆಸ್ಟ್ ನಡೆಯಲಿದೆ. ಈ ಮೂಲಕ ಬಹುಮುಖ್ಯವಾಗಿ ಶ್ವಾಸಕೋಶವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಚಂದ್ರಶೇಖರ್ ಕಾರಿನ ಸಮೇತ ನೀರಿಗೆ ಬಿದ್ದು ಮೃತಪಟ್ಟಿದ್ದರೆ ಅವರ ಶ್ವಾಸಕೋಶದ ಒಳಗೆ ನೀರು ತುಂಬಿಕೊಳ್ಳಲೇಬೇಕು. ನೀರಿನಲ್ಲಿದ್ದ ಕಾರಣ ಶವ ಕೊಳೆತು ಶ್ವಾಸಕೋಶದಲ್ಲಿರುವ ನೀರು ಒಂದು ವೇಳೆ ಹೊರಗೆ ಹೋದರೂ ಕಲ್ಮಶವು ಅಲ್ಲಿಯೇ ಉಳಿದಿರುತ್ತದೆ. ಹೀಗಾಗಿ ಈ ಆಯಾಮದಲ್ಲಿ ತನಿಖೆಗೆ ಮುಂದಾಗಲಾಗಿದ್ದು, ಡಯಾಟಮ್‌ ಪರೀಕ್ಷೆಯಲ್ಲಿ ಶ್ವಾಸಕೋಶದಲ್ಲಿ ಕಲ್ಮಶ ಇರುವುದು ಪತ್ತೆಯಾದಲ್ಲಿ ಚಂದ್ರಶೇಖರ್ ನೀರಿಗೆ ಬಿದ್ದು ಮೃತಪಟ್ಟಿದ್ದಾರೆಂಬ ವಿಷಯ ಸ್ಪಷ್ಟವಾಗಲಿದೆ.

ಇದನ್ನೂ ಓದಿ | Missing Case | ಚಂದ್ರು ಸಾವು ಸಹಜ ಅಲ್ಲ, ಕಿಡ್ನ್ಯಾಪ್‌ ಆಗಿದೆ, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿ ಎಂದ ರೇಣುಕಾಚಾರ್ಯ

ಕಲ್ಮಶ ಇರದಿದ್ದರೆ?
ಈ ಡಯಾಟಮ್‌ ಪರೀಕ್ಷೆ ವೇಳೆ ಚಂದ್ರಶೇಖರ್ ಶ್ವಾಸಕೋಶದಲ್ಲಿ ಕಲ್ಮಶ ಕಂಡುಬಾರದೆ ಇದ್ದಲ್ಲಿ ಚಂದ್ರಶೇಖರ್ ನೀರಿಗೆ ಬೀಳುವ ಮೊದಲೇ ಮೃತಪಟ್ಟಿದ್ದರು ಎಂಬ ವಿಷಯವು ತಿಳಿಯುತ್ತದೆ. ಆಗ ಇದು ಕೊಲೆ ಎಂದು ದೃಢವಾಗಿ ಆ ನಿಟ್ಟಿನಲ್ಲಿ ತನಿಖೆ ನಡೆಸಲು ಸುಲಭವಾಗುತ್ತದೆ. ಅಂದರೆ ಚಂದ್ರಶೇಖರ್ ಅವರನ್ನು ಎಲ್ಲಿಯಾದರೂ ಕೊಲೆ ಮಾಡಿ ಕಾರಿನ ಸಮೇತ ನಾಲೆಗೆ ತಂದು ಹಾಕಿರಬಹುದು ಎಂಬ ಅಂದಾಜಿನ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸುತ್ತಾರೆ. ಇದೀಗ ಡಯಾಟಮ್ ಟೆಸ್ಟ್ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಬಂದ ಬಳಕವಷ್ಟೇ ಚಂದ್ರಶೇಖರ್ ಸಾವಿಗೆ ಒಂದಷ್ಟು ಪೂರಕ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

ಏನಿದು ಡಯಾಟಮ್‌ ಹಾಗೂ ಟೆಸ್ಟ್‌?
ಡಯಾಟಮ್ ಎಂಬುದು ದ್ಯುತಿಸಂಶ್ಲೇಷಕ ಪಾಚಿಗಳಾಗಿವೆ. ಅವು ಸಿಲಿಸಿಯಸ್ ಅಸ್ಥಿಪಂಜರವನ್ನು (ಫ್ರುಸ್ಟುಲ್) ಹೊಂದಿವೆ. ಅಲ್ಲದೆ, ಇದು ಏಕಕೋಶೀಯ, ದ್ಯುತಿಸಂಶ್ಲೇಷಕ ಮತ್ತು ಸ್ವಯಂಪೋಷಕ ಜೀವಿಗಳಾಗಿವೆ. ಇವು ಸಿಹಿ ನೀರು ಮತ್ತು ಉಪ್ಪುನೀರು ಎರಡರಲ್ಲೂ ವಾಸಿಸುತ್ತವೆ. ಹೀಗಾಗಿ ಇವು ತಾಜಾ, ಸಮುದ್ರದ ನೀರು, ಮಣ್ಣು ಸೇರಿದಂತೆ ಬಹುತೇಕ ಎಲ್ಲ ಜಲಚರ ಪರಿಸರಗಳಲ್ಲಿ ಕಂಡುಬರುತ್ತವೆ. ಅಲ್ಲದೆ, ತೇವಾಂಶದಿಂದ ಕೂಡಿರುತ್ತವೆ.

ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳಲ್ಲಿ ಕೊಲೆಯ ಅನುಮಾನಗಳಿದ್ದರೆ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆಗ ಮೃತರ ಬಟ್ಟೆಗಳು, ಬೂಟು ಇಲ್ಲವೇ ಚಪ್ಪಲಿ, ವಾಹನಗಳು ಇತ್ಯಾದಿಗಳಲ್ಲಿ ಸಿಲುಕಿರುವ ಮಣ್ಣು, ತ್ಯಾಜ್ಯವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಹಾಗೆಯೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶವದ ಅಂಗಾಂಗ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಆ ವ್ಯಕ್ತಿಯ ಶ್ವಾಸಕೋಶದೊಳಗೆ ಡಯಾಟಮ್‌ ಅಂಶವು ಪತ್ತೆಯಾದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢವಾಗುತ್ತದೆ. ಒಂದು ವೇಳೆ ಡಯಾಟಮ್‌ ಅಂಶಗಳು ಇಲ್ಲದೇ ಹೋದರೆ, ಆ ವ್ಯಕ್ತಿಯನ್ನು ಯಾರೋ ಸಾಯಿಸಿ ನೀರಿಗೆ ಹಾಕಿದ್ದಾರೆಂಬ ನಿರ್ಧಾರಕ್ಕೆ ಬರಲಾಗುತ್ತದೆ.

ಇದನ್ನೂ ಓದಿ | Missing Case | ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ, ಬೇರೆ ಯಾರೂ ಕಾರಣ ಅಲ್ಲ; ಕಾರಿನ ಮುಂದೆ ಗೋಳಿಟ್ಟ ರೇಣುಕಾಚಾರ್ಯ

ಅಂತಿಮ ದರ್ಶನ ಪಡೆದ ಬಿಎಸ್‌ವೈ
ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್‌ ಸಾವಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಬಿಎಸ್‌ವೈ ರೇಣುಕಾಚಾರ್ಯ ಅವರ ಸ್ವಗ್ರಾಮ ಕುಂದೂರಿನ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಬಳಿಕ ರೇಣುಕಾಚಾರ್ಯಗೆ ಸಾಂತ್ವನ ಹೇಳಿದ ಬಿಎಸ್‌ವೈ, ಮಾನಸಿಕ ಸ್ಥೈರ್ಯ ತುಂಬಿದರು.

ಎಫ್‌ಎಸ್‌ಎಲ್‌ ತಂಡದಿಂದ ಸತತ ಶೋಧ
ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಂಡದ ಏಳು ಅಧಿಕಾರಿಗಳಿಂದ ಕೆಲವು ಗಂಟೆಯಿಂದ ಸತತ ಪರಿಶೀಲನೆ ನಡೆದಿದೆ. ಕಾರು ಪತ್ತೆಯಾಗಿರುವ ತುಂಗಾ ಮೇಲ್ದಂಡೆ ನಾಲಾ ಸೇತುವೆ ಬಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆದಿದ್ದು, ಕಾರು ಅಪಘಾತಕ್ಕೊಳಗಾಗಿದೆಯೇ? ಅಥವಾ ಇನ್ಯಾವುದೋ ಕಾರಣವಿದೆಯೇ? ಯಾರೋ ಕೊಲೆ ಮಾಡಿ ಅಪಘಾತ ಎಂಬಂತೆ ಸೃಷ್ಟಿ ಮಾಡಿದ್ದಾರೆಯೇ ಎಂಬಿತ್ಯಾದಿ ಅಂಶಗಳನ್ನೊಳಗೊಂಡಂತೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡವು ಪರಿಶೀಲನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.

ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್‌ಪಿ ರಿಷ್ಯಂತ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತನಿಖೆಯ ಪ್ರತಿ ಸಂಗತಿಗಳನ್ನೂ ಗಮನಿಸುತ್ತಿದ್ದಾರೆ. ಈ ವೇಳೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಶವ ದೊರೆತ ಸ್ಥಳದಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮೂಲಕ ವಿಧಿವಿಜ್ಞಾನ ತಂಡಕ್ಕೆ ಸಹಕಾರ ನೀಡುತ್ತಿದ್ದಾರೆ.

ಏನಿದು ಪ್ರಕರಣ?
ಕಳೆದ ಭಾನುವಾರ (ಅ. ೩೦) ರಾತ್ರಿ ಗೌರಿಗದ್ದೆಗೆ ಹೋಗಿ ಬಂದಿದ್ದ ಚಂದ್ರಶೇಖರ್‌ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದರು. ಆದರೆ, ಗುರುವಾರ (ನ.೩) ಮಧ್ಯಾಹ್ನ ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಕಾರಿನ ಬಿಡಿಭಾಗಗಳು ಬಿದ್ದಿರುವ ಬಗ್ಗೆ ಸುದ್ದಿ ಬಂದಿತ್ತು. ಪರಿಶೀಲನೆ ನಡೆಸಿದಾಗ ಕಾರು ನಾಲೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕಾರನ್ನು ಮೇಲೆತ್ತಿದಾಗ ಚಂದ್ರಶೇಖರ್‌ ಮೃತಪಟ್ಟಿರುವುದು ತಿಳಿದುಬಂದಿದೆ.

ಇದನ್ನೂ ಓದಿ | Missing Case | ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ, ಬೇರೆ ಯಾರೂ ಕಾರಣ ಅಲ್ಲ; ಕಾರಿನ ಮುಂದೆ ಗೋಳಿಟ್ಟ ರೇಣುಕಾಚಾರ್ಯ

Exit mobile version