ರಂಗಸ್ವಾಮಿ ಎಂ. ಮೈಸೂರು
ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿ (MLC election)ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮತ್ತೊಂದು ಸುತ್ತಿನ ಹಣಾಹಣಿ ಏರ್ಪಟ್ಟಿದೆ. ಒಕ್ಕಲಿಗ ಮತಗಳ ವಿಭಜನೆ ಮತ್ತು ರಾಜಕೀಯ ಸ್ಥಿತ್ಯಂತರಗಳ ಪರಿಣಾಮ ಬಿಜೆಪಿ ಗೆಲುವಿಗೆ ಪೂರಕ ವಾತಾವರಣ ನಿರ್ಮಾಣವಾಗಿರುವಂತೆ ಕಂಡುಬರುತ್ತಿದೆ.
1992ರಿಂದ ಇದುವರೆಗೆ ಕ್ಷೇತ್ರಕ್ಕೆ ಒಂದು ಉಪಚುನಾವಣೆ (1997) ಸೇರಿ ಒಟ್ಟು ಆರು ಚುನಾವಣೆ ನಡೆದಿವೆ. ಬಿಜೆಪಿ ನಾಲ್ಕು ಹಾಗೂ ಜೆಡಿಎಸ್ ಎರಡು ಬಾರಿ ಗೆಲುವು ಸಾಧಿಸಿವೆ. ಮತದಾರರನ್ನು ಸೆಳೆಯಲು ಅಂತಿಮ ಕಸರತ್ತುಗಳು ನಡೆಯುತ್ತಿವೆ.
ಕ್ಷೇತ್ರವು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹೀಗೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಪರಿಣಾಮ ಯಾವುದೇ ಪಕ್ಷದ ಅಭ್ಯರ್ಥಿ ಖುದ್ದಾಗಿ ಮತಯಾಚನೆ ಮಾಡುವುದು ಅಸಾಧ್ಯ. ತಳಮಟ್ಟದಲ್ಲಿ ಬಲಿಷ್ಠ ಬೇರುಗಳನ್ನು ಹೊಂದಿರುವ ಪಕ್ಷ ಸಹಜವಾಗಿಯೇ ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ. ಚಾಮರಾಜನಗರದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್ ನಾಲ್ಕೂ ಜಿಲ್ಲೆಗಳಲ್ಲೂ ತನ್ನದೇ ಮತದಾರರನ್ನು ಹೊಂದಿದೆ. ಆದರೆ ಶಾಸಕರು, ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ಸಮರ್ಥವಾಗಿ ಪ್ರಚಾರಕ್ಕೆ ಬಳಸಿಕೊಂಡ ಪಕ್ಷ ಬಿಜೆಪಿ.
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ, ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಮತ್ತು ರೈತ ಸಂಘದ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಗೆಲುವಿಗೆ ಶಕ್ತಿಮೀರಿ ಶ್ರಮ ಹಾಕಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ಎನ್.ಎಸ್. ವಿನಯ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದು, ʼಸೋಲಿಸುವ ಸ್ಪರ್ಧೆʼಗೆ ಸೀಮಿತವಾಗಿದ್ದಾರೆ. ಉಳಿದಂತೆ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಎಸ್‌ಡಿಪಿಐ ಅಭ್ಯರ್ಥಿ ರಫತ್ ಉಲ್ಲಾ ಖಾನ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಎನ್. ವೀರಭದ್ರಸ್ವಾಮಿ, ಡಾ.ಬಿ.ಎಚ್. ಚನ್ನಕೇಶವಮೂರ್ತಿ ಸೇರಿದಂತೆ 19 ಹುರಿಯಾಳುಗಳು ಕಣದಲ್ಲಿದ್ದಾರೆ.
ಜೆಡಿಎಸ್‌ಗೆ ಒಳೇಟುಗಳ ಭೀತಿ: ಹಾಲಿ ಎಂಎಲ್‌ಸಿ ಶ್ರೀಕಂಠೇಗೌಡ ವಿಧಾನಸಭೆಯತ್ತ ಮುಖ ಮಾಡಿರುವ ಪರಿಣಾಮ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ರಾಮುಗೆ ಜೆಡಿಎಸ್ ವರಿಷ್ಠರು ಮಣೆ ಹಾಕಿದ್ದಾರೆ. ಒಂದೂವರೆ ವರ್ಷದಿಂದಲೂ ರಾಮು ತಮ್ಮದೇ ವಲಯದಲ್ಲಿ ಪೂರ್ವತಯಾರಿ ನಡೆಸಿಕೊಂಡಿದ್ದರು. ಸರಕಾರಿ ನೌಕರರು, ಶಿಕ್ಷಕರು ಮತ್ತು ಕುಟುಂಬಸ್ಥರೊಂದಿಗೆ ನಿಕಟ ಸಂಪರ್ಕ ಸಾಧಿಸಿದ್ದಾರೆ. ಪ್ರಾರಂಭಿಕ ಹಂತದಲ್ಲಿ ರಾಮು ಪರವಾದ ಅಲೆ ಇತ್ತು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ʼಜೋಶ್ʼ ಕಡಿಮೆಯಾಗಿದೆ. ಶಾಸಕ ಸಾ.ರಾ. ಮಹೇಶ್ ತಮ್ಮ ಇತಿಮಿತಿಯಲ್ಲಿ ಶಕ್ತಿಮೀರಿ ಶ್ರಮ ಹಾಕುತ್ತಿದ್ದಾರೆ. ಆದರೆ ಪ್ರಭಾವಿ ಶಾಸಕ ಜಿ.ಟಿ. ದೇವೇಗೌಡ ತಟಸ್ಥವಾಗಿದ್ದಾರೆ. ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಮರಿತಿಬ್ಬೇಗೌಡ ಬಹಿರಂಗವಾಗಿಯೇ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಕೀಲಾರ ಜಯರಾಂ ಜೆಡಿಎಸ್‌ಗೆ ಮತ ಹಾಕಬೇಡಿ ಅಂತ ಸಾರಿ ಹೇಳುತ್ತಿದ್ದಾರೆ. ಇಂತಹ ʼಹರ್ಡಲ್ʼಗಳನ್ನು ದಾಟಿ ಗುರಿ ಮುಟ್ಟಲು ಹೆಚ್ಚಿನ ಶ್ರಮ ವಹಿಸಬೇಕಿದೆ. ಇಷ್ಟೆಲ್ಲ ತೊಡಕುಗಳ ನಡುವೆಯೂ ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಪಕ್ಷದ ಸಾಂಪ್ರದಾಯಿಕ ಮತಗಳು ಪಕ್ಷಕ್ಕೆ ಆಸರೆಯಾಗಿವೆ.
ಇದನ್ನೂ ಓದಿ: MLC Election | ರಂಗೇರಿದೆ ಪಶ್ಚಿಮ ಶಿಕ್ಷಕರ ಕ್ಷೇತ್ರ: ಹೊರಟ್ಟಿ ಮೂಲಕ ಖಾತೆ ತೆರೆಯುವುದೆ ಬಿಜೆಪಿ?
ಬಿಜೆಪಿಗೆ ಕಾರ್ಯಕರ್ತರ ಬಲ: ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಕಳೆದ ಚುನಾವಣೆಯಲ್ಲಿ 146 ಮತಗಳ ಅತ್ಯಲ್ಪ ಅಂತರದಿಂದ ಸೋಲು ಅನುಭವಿಸಿದವರು. ಅಂದರೆ ಕ್ಷೇತ್ರದಲ್ಲಿ ʼರೀಚ್ʼ ಇದೆ. ಆದರೆ ʼಅನುಕಂಪʼದ ಕಾರಣಕ್ಕಾಗಿಯೇ ಮತ ಹಾಕುವವರ ಸಂಖ್ಯೆ ವಿರಳ. ಶಿಕ್ಷಣ, ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ವೃತ್ತಿ ಮತ್ತು ಜಾತಿ ಆಧಾರದ ಮೇಲೆ ಗುಂಪುಗಳನ್ನು ಕಟ್ಟಿಕೊಂಡು ಪ್ರಚಾರ ನಡೆಸಲಾಗಿದೆ. ಬಿಜೆಪಿ ಗೆಲುವು ಸರ್ಕಾರದ ಪಾಲಿಗೆ ʼಮರ್ಯಾದೆʼ ಪ್ರಶ್ನೆಯಾಗಿದೆ. ಆದ್ದರಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಸಿ.ಎನ್.ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಸುನೀಲ್ ಕುಮಾರ್ ಸೇರಿದಂತೆ ಅನೇಕರು ಬಂದು ಪ್ರಚಾರ ನಡೆಸಿದ್ದಾರೆ. ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎಂಎಲ್‌ಸಿ ಟಿಕೆಟ್ ಸಿಗದ ಪರಿಣಾಮ ಪಕ್ಷಕ್ಕೆ ಮತ ಹಾಕುತ್ತಿದ್ದ ವೀರಶೈವ- ಲಿಂಗಾಯತ ಮತದಾರರು ಮುನಿಸಿಕೊಂಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವಿ.ಸೋಮಣ್ಣ ಎದುರೇ ʼಮುಂದಿನ ಮುಖ್ಯಮಂತ್ರಿ ವಿಜಯೇಂದ್ರʼ ಎಂದು ಘೋಷಣೆ ಕೂಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ವೀರಶೈವ- ಲಿಂಗಾಯತ ಸಿಟ್ಟಿನ ಮತಗಳು ಬಂಡಾಯ ಅಭ್ಯರ್ಥಿ ಎನ್.ಎಸ್. ವಿನಯ್ ಬುಟ್ಟಿಗೆ ಸೇರಬಹುದು. ಸಂಘಟಿತ ಹೋರಾಟ ಬಿಜೆಪಿಗೆ ಶಕ್ತಿ ತುಂಬಬಹುದು.
ಲಾಭದ ನಿರೀಕ್ಷೆಯಲ್ಲಿ ಕಾಂಗ್ರೆಸ್: ಕಾಂಗ್ರೆಸ್ ಇದುವರೆಗೂ ದಕ್ಷಿಣ ಪದವೀಧರರ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಸಿದ್ದರಾಮಯ್ಯ ಹಳೇ ಮೈಸೂರು ಭಾಗದ ಪ್ರಶ್ನಾತೀತ ನಾಯಕ. ಅವರ ಆಣತಿಯಂತೆ ಮಧು ಜಿ. ಮಾದೇಗೌಡರಿಗೆ ಟಿಕೆಟ್ ನೀಡಲಾಗಿದ್ದು, ಕಾಂಗ್ರೆಸ್ ನಾಯಕರೂ ಉತ್ಸಾಹದಿಂದ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಬ್ಬರ ಮಾಡಿದರೆ ಕಾಂಗ್ರೆಸ್ ʼಸೈಲೆಂಟ್ ಸ್ಟ್ರ್ಯಾಟರ್ಜಿʼ ಮಾಡಿಕೊಂಡಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಶಿಕ್ಷಿತ ಮತ್ತು ಉದ್ಯೋಗಸ್ಥ ಸಮುದಾಯಕ್ಕೆ ತೊಂದರೆ ಉಂಟು ಮಾಡಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧದ ಆಡಳಿತ ವಿರೋಧ ಅಲೆ ಲಾಭ ಪಡೆದುಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಅಭ್ಯರ್ಥಿ ಮಧು ಜಿ. ಮಾದೇಗೌಡ ಮಂಡ್ಯದಲ್ಲಿ ಹಿಡಿತ ಸಾಧಿಸಿದ್ದಾರೆ. ಮೈಸೂರಲ್ಲೂ ಪರವಾಗಿಲ್ಲ. ಆದರೆ ಹಾಸನ ಮತ್ತು ಚಾಮರಾಜನಗರದಲ್ಲಿ ಪಕ್ಷದ ಮುಖಂಡರಿಂದ ನಿರೀಕ್ಷಿತ ಸಹಕಾರ ಸಿಕ್ಕಿಲ್ಲ. ರೈತ ಸಂಘ, ಆಮ್ ಆದ್ಮಿ ಪಕ್ಷ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ಪರ್ಧಿಸಿರುವ ಪ್ರಸನ್ನ ಎನ್. ಗೌಡ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಅವರು ಕೈ ಹಾಕಿರುವುದು ಕಾಂಗ್ರೆಸ್ ಬುಟ್ಟಿಯ ಹಣ್ಣುಗಳಿಗೆ. ಇದೆಲ್ಲದರ ಆಚೆಗೆ ಕಾಂಗ್ರೆಸ್ ಸಾರ್ವತ್ರಿಕ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಿಗೆ ವೋಟು ಹಾಕಿಸುವ ʼಟಾರ್ಗೆಟ್ʼ ಕೊಟ್ಟಿರುವುದರಿಂದ ರಾಜಕೀಯ ಆಕಾಂಕ್ಷೆಯುಳ್ಳವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ: MLC Election | ವಾಯವ್ಯ ಪದವೀಧರ ಕ್ಷೇತ್ರದಲ್ಲಿ ನಿರಾಣಿಗೆ ಪೈಪೋಟಿ ನೀಡಬಹುದೆ ಸಂಕ?
ಪ್ರಾಶಸ್ತ್ಯ ಮತಗಳ ಲೆಕ್ಕಾಚಾರ
ದಕ್ಷಿಣ ಪದವೀಧರರ ಚುನಾವಣೆ ಪ್ರಾಶಸ್ತ್ಯ ಮತಗಳ ಆಧಾರದ ಮೇಲೆ ನಡೆಯಲಿದೆ. ಮೊದಲ ಪ್ರಶಸ್ತ್ಯ ಮತಗಳೇ ಎಲ್ಲ ಪಕ್ಷಗಳ ಆದ್ಯತೆ. ಆದರೆ ʼನಿರ್ಣಾಯಕʼ ಪಾತ್ರ ವಹಿಸೋದು ಎರಡನೇ ಪ್ರಾಶಸ್ತ್ಯದ ಮತಗಳು!
ಕ್ಷೇತ್ರದಲ್ಲಿ ಒಟ್ಟು 1,33,073 ಮತದಾರರಿದ್ದಾರೆ. ಈ ಪೈಕಿ ಶೇ.50ರಷ್ಟು ಮೊದಲನೇ ಪ್ರಾಶಸ್ತ್ಯ ಮತಗಳನ್ನು ಪಡೆಯುವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಒಂದು ವೇಳೆ ಕೋಟಾ ಭರ್ತಿ ಆಗದೇ ಇದ್ದರೆ ʼಎಲಿಮಿನೇಷನ್ʼ ಸುತ್ತು ನಡೆಯಲಿದೆ. ಅತಿಹೆಚ್ಚು ಎರಡನೇ ಪ್ರಾಶಸ್ತ್ಯದ ಮತ ಪಡೆಯುವವರು ಗೆಲುವು ಸಾಧಿಸಲಿದ್ದಾರೆ.
ಸಾಮಾನ್ಯವಾಗಿ ʼಪಕ್ಷ ನಿಷ್ಠʼ ಮತದಾರರ ಮೊದಲನೇ ಪ್ರಾಶಸ್ತ್ಯದ ಮತವನ್ನು ಪಕ್ಷ ಅಥವಾ ಇಷ್ಟದ ಅಭ್ಯರ್ಥಿಗೆ ನೀಡುತ್ತಾನೆ. ಎರಡನೇ ಪ್ರಾಶಸ್ತ್ಯದ ಮತ ಹಾಕುವಾಗ ʼಜಾತಿʼ ಪ್ರಮುಖ ಪಾತ್ರ ವಹಿಸಲಿದೆ. ಅದರಲ್ಲೂ ಒಕ್ಕಲಿಗ ಮತದಾರರೇ ಈ ಬಾರಿಯ ದಿಕ್ಕು ಬದಲಿಸುವವರು. ಎಚ್.ಕೆ. ರಾಮು, ಮಧು ಜಿ. ಮಾದೇಗೌಡ, ಪ್ರಸನ್ನ ಗೌಡ ನಡುವೆ ಒಕ್ಕಲಿಗ ಮತ ವಿಭಜನೆಯಾಗಲಿದ್ದು, ಅದರ ಪರಿಣಾಮ ಮಹತ್ವದ್ದು. ಮೈ.ವಿ. ರವಿಶಂಕರ್ ಬ್ರಾಹ್ಮಣ ಸಮುದಾಯದವರು.
ಮತದಾರರ ಪಟ್ಟಿ
ಮೈಸೂರು | 54,039 |
ಮಂಡ್ಯ | 44,370 |
ಹಾಸನ | 23,038 |
ಚಾ.ನಗರ | 11,626 |
ಒಟ್ಟು | 1,33,073 |