Site icon Vistara News

Medical Expense | ಎಂಎಲ್‌ಸಿಗಳ ಆರೋಗ್ಯಕ್ಕಾಗಿ ಮೂರು ವರ್ಷದಲ್ಲಿ ₹88 ಲಕ್ಷ ಖರ್ಚು!

Karnataka Election Results- 217 Crorepatis In 224 Member Karnataka Assembly

ವಿವೇಕ ಮಹಾಲೆ, ಶಿವಮೊಗ್ಗ
ನೆರೆ, ಪ್ರವಾಹದ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಲೆಕ್ಕಾಚಾರದ ಕುಂಟು ನೆಪ ಹೇಳುವ ರಾಜ್ಯ ಸರ್ಕಾರ, ಅದೇ ವಿಧಾನ ಪರಿಷತ್‌ ಸದಸ್ಯರ ವೈದ್ಯಕೀಯ ವೆಚ್ಚದ (Medical Expense) ವಿಚಾರಕ್ಕೆ ಬಂದಾಗ ಯಾವುದೇ ತಕರಾರಿಲ್ಲದೆ, ಸಮಸ್ಯೆಯೂ ಇಲ್ಲದೆ ಹಣ ಬಿಡುಗಡೆಯಾಗುತ್ತದೆ. ಇಂತಹದ್ದೊಂದು ಮಹತ್ವದ ಮಾಹಿತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ವರ್ಷ ನೆರೆ, ಪ್ರವಾಹದಿಂದ ಮನೆ ಕಳದುಕೊಂಡವರಿಗೆ ಇನ್ನೂ ಪರಿಹಾರ ಸಿಗದ ಕೂಗು ಕೇಳಿ ಬರುತ್ತಿದೆ. ಅನೇಕ ನೌಕರ ವರ್ಗದವರಿಗೆ ಈಗಲೂ ನಿಯಮಿತ ಸಂಬಳ ದೊರಕುತ್ತಿಲ್ಲ. ಇದ್ಯಾವುದೇ ಕಾಳಜಿ ತೋರಿಸದ ರಾಜ್ಯ ಸರ್ಕಾರ ಮೇಲ್ಮನೆಯ ವಿವಿಧ ಪಕ್ಷಗಳ ಸದಸ್ಯರಿಗೆ ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಿದೆ. 

ಮರುಪಾವತಿಗಿಲ್ಲ ಬೊಕ್ಕಸದ ಕೊರತೆ

ವಿಧಾನ ಪರಿಷತ್ ಸದಸ್ಯರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ಸರ್ಕಾರದ ಬೊಕ್ಕಸಕ್ಕೆ ಯಾವುದೇ ಕೊರತೆಯಿಲ್ಲ. ಕಳೆದ ಮೂರು ವರ್ಷಗಳಲ್ಲಿ ವೈದ್ಯಕೀಯ ವೆಚ್ಚ ₹ 88,53,343 ಭರಿಸಲಾಗಿದೆ. 2022ರ ಆ.17ರಿಂದ ಕಳೆದ ಜು.2ರವರೆಗೆ 77 ಎಂಎಲ್‌ಸಿಗಳು ವೈದ್ಯಕೀಯ ಬಿಲ್ ಸಲ್ಲಿಸಿದ್ದು ಅವರಿಗೆಲ್ಲ ಹಣ ಮರುಪಾವತಿ ಮಾಡಲಾಗಿದೆ.

2022ರಲ್ಲಿ 17 ಸದಸ್ಯರಿಗೆ ₹ 26,34,844 ಪಾವತಿಸಲಾಗಿದ್ದು, 2021ರಲ್ಲಿ 33 ಸದಸ್ಯರಿಗೆ ₹ 44,81,544 ಮತ್ತು ಪ್ರಸಕ್ತ ವರ್ಷ 27 ಸದಸ್ಯರು ₹ 17,36,955 ಬಿಲ್ ಪಾವತಿಸಿ ಹಣ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಮಾಹಿತಿ ಹಕ್ಕಿನಡಿ (RTI) ಪಡೆದ ದಾಖಲೆಗಳಿಂದ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ | State Highway Scam | ₹224 ಕೋಟಿ ವೆಚ್ಚದ ಹೆದ್ದಾರಿ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ!‌

ಎಂಎಲ್‌ಸಿಗಳಿಗೆ ಹಣ ಬಿಡುಗಡೆಗಿಲ್ಲ ಕೋವಿಡ್ ಅಡ್ಡಿ

ಕೋವಿಡ್ ಕಾರಣದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಬಹುತೇಕ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಷ್ಟೇ ಅಲ್ಲ ನೌಕರರಿಗೆ ವೇತನ ಸಮರ್ಪಕವಾಗಿ ಬರುತ್ತಿರಲಿಲ್ಲ. ನಿರ್ಗತಿಕರಿಗೆ, ಬಡವರಿಗೆ ಮಾಸಾಶನಕ್ಕೂ ಕಷ್ಟಪಡುವ ಕಾಲವದು. ಆದರೆ, ಉಳ್ಳವರ ವೈದ್ಯಕೀಯ ವೆಚ್ಚ ಮರುಪಾವತಿಸಲು ಮಾತ್ರ ಯಾವುದೇ ಅಡ್ಡಿ ಬರಲಿಲ್ಲ. ಕೊರೊನಾ ಎರಡನೇ ಅಲೆ ಇದ್ದ 2021ರಲ್ಲಿಯೇ ಅತಿ ಹೆಚ್ಚು ಹಣ ಬಿಡುಗಡೆಯಾಗಿದೆ.

ಅತಿ ಹೆಚ್ಚು ಹಣ ಪಡೆದುಕೊಂಡ ಎಂಎಲ್‌ಸಿ ರುದ್ರೇಗೌಡ

ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳನ್ನು ಪರಿಶೀಲಿಸಿದಾಗ ಶಿವಮೊಗ್ಗ ಎಂಎಲ್‌ಸಿ ಎಸ್.ರುದ್ರೇಗೌಡ ಅವರಿಗೆ ಅತಿ ಹೆಚ್ಚು ₹ 22,50,158 ಸಂದಾಯವಾಗಿದೆ. 2020ರಲ್ಲಿಯೇ ಎರಡು ಬಾರಿ ಇವರಿಗೆ ಹಣ ಮರುಪಾವತಿ ಆಗಿದೆ. ಆ.17ರಲ್ಲಿ ₹ 5,73,175 ಮತ್ತು ನ‌.4ರಲ್ಲಿ ₹ 8,09,949 ಮಂಜೂರಾಗಿದೆ. ಇದಲ್ಲದೆ 2021ರ ಏ.19ರಂದು ₹ 8,67,034 ಬಿಡುಗಡೆಯಾಗಿದೆ. ಆರ್.ಧರ್ಮಸೇನ ಅವರಿಗೆ ಅತಿ ಕಡಿಮೆ ಹಣ ಮರುಪಾವತಿ ಆಗಿದ್ದು, ಕಳೆದ ವರ್ಷ ಮಾ.10ರಂದು ₹ 5,929 ಬಿಡುಗಡೆಯಾಗಿದೆ.

ಜನಪ್ರತಿನಿಧಿಗಳಿಗೆ ಗುಂಪು ವಿಮೆ

ಪ್ರತಿ ವರ್ಷ ಮಾಹಿತಿ ಹಕ್ಕಿನಡಿ ಈ ದಾಖಲೆ ಪಡೆದು ಬಹಿರಂಗ ಪಡಿಸುತ್ತಿರುವುದರಿಂದ ಜನಪ್ರತಿನಿಧಿಗಳು ಕ್ಲೇಮ್ ಮಾಡುವುದು ಕಡಿಮೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ತಿಳಿಸಿದ್ದಾರೆ. ಕೊರೊನಾ ಕಾಲದಲ್ಲಿ ಸುರಪುರ ಶಾಸಕ ರಾಜೂ ಗೌಡ ಸುಮಾರು 12 ಲಕ್ಷ ಮರಳಿಸಿದ್ದರು. ಕೋಟ್ಯಂತರ ರೂಪಾಯಿ ಆಸ್ತಿ ಘೋಷಣೆ ಮಾಡುವವರು ಒಂದು ರೂಪಾಯಿ ಕೂಡ ಬಿಡದೆ ತೆರಿಗೆ ಹಣವನ್ನು ಕಾನೂನು ಬದ್ಧವಾಗಿಯೇ ಲೂಟಿ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಗುಂಪು ವಿಮೆ ಮಾಡಿಸಿದರೆ ಸರ್ಕಾರದ ಹಣ ಉಳಿಯುತ್ತದೆ ಎಂದು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೆ. ಆದರೆ, ಈ ಮನವಿಗೆ ಸರ್ಕಾರ ಲಕ್ಷ್ಯ ವಹಿಸಿಲ್ಲ ಎಂದರು.

ಇದನ್ನೂ ಓದಿ | ಭ್ರಷ್ಟಾಚಾರದ ಚರ್ಚೆಗೆ ಟೈಮ್‌ ಕೊಡ್ತೇನೆ, ಹಿಂದೆ ಸರಿಯಲಾರೆ ಎಂದ ಡಿಕೆಶಿ

Exit mobile version