ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಪ್ರವಾಸಕ್ಕೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಅನೇಕ ಕಾರ್ಯಕ್ರಮಗಳಲ್ಲಿ, ಮುಖ್ಯವಾಗಿ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದಾರೆ. ಆದರೆ ಇಲ್ಲಿ ಕ್ರೆಡಿಟ್ ವಾರ್ ಆರಂಭಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಮೋದಿ ಆಗಮನಕ್ಕೂ ಮುನ್ನವೇ ಸಿದ್ದರಾಮಯ್ಯ ಐದು ಟ್ವೀಟ್‌ಗಳನ್ನು ಮಾಡಿದ್ದಾರೆ. “ಐದು ವರ್ಷಗಳ ಹಿಂದೆ (4-10-2017)ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಂಗಳೂರಿಗೆ ಬಂದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆಯಾದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಉದ್ಘಾಟಿಸಿದ್ದು, ನಾನು ಮುಖ್ಯಮಂತ್ರಿಯಾಗಿದ್ದ ಕಾಲದ ಮಧುರ ಮತ್ತು ಸಾರ್ಥಕ ನೆನಪುʼ ಎಂದು ಮೊದಲ ಟ್ವೀಟ್ ಮಾಡಿದ್ದಾರೆ. ನಂತರ ಇದೇ ವಿಚಾರದಲ್ಲಿ ನಾಲ್ಕು ಟ್ವೀಟ್ ಮಾಡಿದ್ದಾರೆ.
“ವಿಶ್ವಕಂಡ ಅಪ್ರತಿಮ ಆರ್ಥಿಕ ತಜ್ಞ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕ ರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ನಮ್ಮ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್”.
“ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಸ್ಥಾಪನೆಗೆ 2017ರಲ್ಲಿಯೇ 43.45 ಎಕರೆ ಜಮೀನು ಮತ್ತು ಹೊಸ ಕಟ್ಟಡ ಸಹಿತ ಮೂಲಸೌಕರ್ಯ ನಿರ್ಮಾಣಕ್ಕೆ 350 ಕೋಟಿ ರೂಪಾಯಿ ಮಂಜೂರು ಮಾಡಿದ್ದ ನಮ್ಮ ಸರ್ಕಾರ ಬದ್ಧತೆಯಿಂದ ಈ ಯೋಜನೆಯನ್ನು ಸಾಕಾರಗೊಳಿಸಿತ್ತು.”
“BASE ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಈ ಕಟ್ಟಡವನ್ನು 6 ತಿಂಗಳಲ್ಲಿ ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಹೆಮ್ಮೆಯ ಸಾಧನೆ. ಜ್ಞಾನಭಾರತಿ ಕ್ಯಾಂಪಸ್‌ನಲ್ಲಿಯೇ ಇದ್ದ ಕಟ್ಟಡದಲ್ಲಿಯೇ 2017ರ ಜೂನ್ ನಲ್ಲಿ B.Sc (Honours) Economics ತರಗತಿಗಳು ಪ್ರಾರಂಭವಾಗಿದ್ದವು”.
“ಪ್ರಧಾನಿ ಮೋದಿ ಅವರು ಇಂದು ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ನ ನೂತನ ಆವರಣವನ್ನು ಉದ್ಘಾಟಿಸುತ್ತಿದ್ದಾರೆ. ಈ ಸಮಾರಂಭಕ್ಕೆ ಶುಭ ಹಾರೈಸುವೆ” ಎಂದಿದ್ದಾರೆ ಸಿದ್ದರಾಮಯ್ಯ. ಜತೆಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿ ಸೇರಿ ಅನೇಕರೊಂದಿಗೆ ಇರುವ ಫೋಟೊಗಳನ್ನೂ ಸಿದ್ದರಾಮಯ್ಯ ಅಪ್‌ಲೋಡ್ ಮಾಡಿದ್ದಾರೆ.