ಮಂಗಳೂರು: ರಾಜ್ಯ ಕರಾವಳಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚುನಾವಣಾ (Karnataka Election 2023) ಪ್ರಚಾರ ಓಡಾಟ ನಡೆಸಲಿದ್ದಾರೆ.
ಕರಾವಳಿಯ ಗ್ರಾಮೀಣ ಭಾಗದಲ್ಲಿ ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೋದಿ ಚುನಾವಣಾ ಪ್ರಚಾರದ ಮೋಡಿ ನಡೆಯಲಿದೆ. ಮಂಗಳೂರು ನಗರ ಹೊರವಲಯದ ಮುಲ್ಕಿಯ ಕೊಲ್ನಾಡು ಎಂಬಲ್ಲಿ 40 ಎಕರೆ ಪ್ರದೇಶದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಬಂದಿಳಿಯಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೊಲ್ನಾಡಿಗೆ ಆಗಮಿಸಲಿದ್ದಾರೆ. 10:30 ಗಂಟೆಗೆ ಬೃಹತ್ ಸಮಾವೇಶ ಆರಂಭವಾಗಲಿದೆ. ಸಮಾವೇಶದಲ್ಲಿ ಸುಮಾರು 2 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಕರಾವಳಿ ಭಾಗದ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಮಂಗಳೂರು ಕಾರ್ಯಕ್ರಮದ ಬಳಿಕ ಉತ್ತರ ಕನ್ನಡದ ಅಂಕೋಲಕ್ಕೆ ಮೋದಿ ತೆರಳಲಿದ್ದಾರೆ.
ಕರ್ನಾಟಕದ ಕರಾವಳಿ ಭಾಗ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಒಂದೆರಡು ಕ್ಷೇತ್ರಗಳಲ್ಲಿ ಆಂತರಿಕ ಬಂಡಾಯದಿಂದಾಗಿ ನಲುಗತ್ತಿದೆ. ಕೆಲವು ಕಡೆ ಪಕ್ಷನಿಷ್ಠರು ಬಂಡಾಯ ಎದ್ದಿದ್ದರೆ, ಇನ್ನು ಕೆಲವು ಕಡೆ ಟಿಕೆಟ್ ತಪ್ಪಿಸಿಕೊಂಡವರು ಸೈಲೆಂಟ್ ಆಗಿದ್ದಾರೆ. ಇದು ಪಕ್ಷದ ಮೇಲೆ ಮಾಡುತ್ತಿರುವ ನೆಗೆಟಿವ್ ಪರಿಣಾಮವನ್ನು ಮೋದಿ ಹವಾ ತೊಡೆದುಹಾಕಿ ಬೂಸ್ಟರ್ ಡೋಸ್ ನೀಡಲಿದೆ ಎಂದು ಪಕ್ಷ ನಿರೀಕ್ಷಿಸಿದೆ.