ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಬೆಂಗಳೂರಿನಲ್ಲಿ ಮೇ 6 ಮತ್ತು 7ರಂದು ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ (Narendra Modi Road show) ತಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (Karnataka High court), ರೋಡ್ ಶೋ ತಡೆಯಲು ನಿರಾಕರಿಸಿದೆ. ಈ ಮೂಲಕ ಯಥಾವತ್ತಾಗಿ ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡಿದೆ.
ನಗರದಲ್ಲಿ ಎರಡು ದಿನ 36 ಕಿ.ಮೀ ರೋಡ್ ಶೋ ನಡೆಯಲಿರುವ ರೋಡ್ ಶೋನಿಂದ ಸಾರ್ವಜನಿಕರಿಗೆ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಇದನ್ನು ಪರಿಗಣಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಬೇಕು ಎಂದು ಹಿರಿಯ ವಕೀಲ ಜಿ.ಆರ್ ಮೋಹನ್ ಅವರು ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು. ಜತೆಗೆ ವಕೀಲ ಅಮೃತೇಶ್ ಅವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ವಿಜಯಕುಮಾರ್ ಪಾಟೀಲ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು.
ಪೀಠವು ದೇಶಾದ್ಯಂತ ನಡೆದಿರುವ ರಾಜಕೀಯ ರ‍್ಯಾಲಿಗಳು, ಅಲ್ಲೇನಾದರೂ ಅವಘಡಗಳು ನಡೆದಿವೆಯಾ? ರಾಜ್ಯದಲ್ಲಿ ಬೇರೆ ಯಾರೂ ರ‍್ಯಾಲಿ ಮಾಡಿಲ್ಲವೇ? ರ‍್ಯಾಲಿಗೆ ಏನೇನು ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ವಿವರ ಪಡೆದ ಕೋರ್ಟ್ ರೋಡ್ ಶೋಗೆ ತಡೆ ನೀಡಲು ನಿರಾಕರಿಸಿತು.
ಈ ನಡುವೆ, ಅರ್ಜಿಯನ್ನು ಇತ್ಯರ್ಥಪಡಿಸಿದ ಕೋರ್ಟ್ ಕೆಲವು ಷರತ್ತು, ಸೂಚನೆಗಳನ್ನು ನೀಡಿದರು.
1. ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು.
2. ಅನಾಹುತವಾದ ಮೇಲೆ ಕ್ರಮ ಕೈಗೊಳ್ಳುವ ಬದಲು ಆಯೋಜಕರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು.
3. NEET ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಬೇಕು.
4. ಹಿರಿಯ ನಾಗರೀಕರು ಹಾಗೂ ರೋಗಿಗಳ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ.
ತುರ್ತು ಅರ್ಜಿ ಸಲ್ಲಿಕೆ, ತುರ್ತು ವಿಚಾರಣೆ
ಮೋದಿ ಅವರ ರೋಡ್‌ಶೋಗೆ ಸಂಬಂಧಿಸಿ ಹೈಕೋರ್ಟ್‌ಗೆ ಪತ್ರ ಬರೆದದ್ದು, ಅರ್ಜಿ ಸಲ್ಲಿಸಿದ್ದು ಮತ್ತು ವಿಚಾರಣೆ ನಡೆಸಿದ್ದು ಎಲ್ಲವೂ ತುರ್ತಾಗಿಯೇ ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಅರ್ಜಿ ಸಲ್ಲಿಕೆಯಾಗಿ 2.30ಕ್ಕೆ ವಿಚಾರಣೆ ಆರಂಭವಾಯಿತು.
ಬಿಬಿಎಂಪಿ ಮುಖ್ಯ ಆಯುಕ್ತರು, ಟ್ರಾಫಿಕ್ ಪೊಲೀಸ್ ವತಿಯಿಂದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೂಡ ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು.
ವಕೀಲ ಅಮೃತೇಶ್ ಅವರು ವಾದ ಮಂಡಿಸಿದಾಗ ನ್ಯಾಯಮೂರ್ತಿಗಳು ಅವರಿಂದ ಕೆಲವು ಮಾಹಿತಿಗಳನ್ನು ಬಯಸಿತು. ಇಲ್ಲಿಯವರೆಗೆ ಯಾವ ಯಾವ ರಾಜಕೀಯ ಪಕ್ಷಗಳು ರ‍್ಯಾಲಿ ಮಾಡಿವೆ, ಯಾವ ಪಕ್ಷಗಳು ಮಾಡಿಲ್ಲ, ರಾಜ್ಯದಲ್ಲಿ ಎಷ್ಟು ಅಧಿಕೃತ ರಾಜಕೀಯ ಪಕ್ಷಗಳಿವೆ ಎಂಬ ಬಗ್ಗೆ ಮಾಹಿತಿ ಕೇಳಿದರು. ಜತೆಗೆ ನೀತಿ ಸಂಹಿತೆ ಜಾರಿಯಾದ ಮೇಲೆ ಎಷ್ಟು ಪಕ್ಷಗಳು ರ‍್ಯಾಲಿ ಮಾಡಿವೆ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ವಕೀಲ ಅಮೃತೇಶ್ ಅವರು, ನೀತಿ ಸಂಹಿತೆ ಜಾರಿಯಾದ ಬಳಿಕ ಕೆಲವು ಪಕ್ಷಗಳು ರೋಡ್ ಶೋ ಮಾಡಿದ್ದಾರೆ. ಅದು ಕೇವಲ ನಾಲ್ಕೈದು ಕಿಲೋ ಮೀಟರ್ ಗೆ ಸೀಮಿತವಾಗಿತ್ತು. ನಾನು ಕೇವಲ ಬಿಜೆಪಿ ರೋಡ್ ಶೋ ಬಗ್ಗೆ ಹೇಳುತ್ತಿಲ್ಲ. ನಾಳೆ ಬಿಜೆಪಿಯವ್ರು ಮಾಡ್ತಾರೆ. ನಾಳಿದ್ದು ಕಾಂಗ್ರೆಸ್, ಆಮೇಲೆ ಇನ್ನೊಂದು ಪಕ್ಷ ರ ರೋಡ್ ಶೋ ಮಾಡುತ್ತದೆ. ಇದರಿಂದ ದರಿಂದ ನಗರದ ಜನತೆಗೆ ಬಹಳ ತೊಂದರೆಯಾಗುತ್ತೆ. ಐದಾರು ಕಿಲೋ ಮೀ ಅಂದ್ರೆ ಓಕೆ. 26 ಕಿಲೋ ಮೀಟರ್ ಅಂದ್ರೆ ಅದರ ಪರಿಣಾಮ ಯಾವ ರೀತಿ ಇರುತ್ತದೆ? ಹಿರಿಯ ನಾಗರೀಕರಿಗೆ ತೊಂದರೆ, ಎಕ್ಸಾಂ ಇರೋದ್ರಿಂದ ಪರೀಕ್ಷಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷ ಕೇಂದ್ರಗಳಿಗೆ ತಲುಪಲು ಆಗುವುದಿಲ್ಲ ಎಂದು ಹೇಳಿದರು.
ರೋಡ್ ಶೋ ದಿನ ಯಾವುದಾದರೂ ಪರೀಕ್ಷೆ ಇದ್ಯಾ ಎಂದು ಕೇಳಿದಾಗ ನೀಟ್ ಪರೀಕ್ಷೆ ಇದೆ ಎಂಬ ಮಾಹಿತಿ ನೀಡಲಾಯಿತು.
ಶನಿವಾರ ಮತ್ತು ಭಾನುವಾರ ನಡೆಯಲಿರುವ ರೋಡ್ ಶೋ ಬಗ್ಗೆ ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ರೋಡ್ ಶೋಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಎಷ್ಟು ದೂರ ನಡೆಯುತ್ತದೆ. ರಸ್ತೆಗಳಲ್ಲಿ ಯಾವ ಕ್ರಮ ಕೈಗೊಂಡಿದ್ದೀರಾ ಎಂಬುದಾಗಿ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಎಲ್ಲದಕ್ಕೂ ಉತ್ತರ ಸಿಕ್ಕಿದ ಬಳಿಕ, ಈ ಹಿಂದಿನ ರ‍್ಯಾಲಿಗಳಲ್ಲಿ ಯಾವುದೇ ಸಮಸ್ಯೆಗಳು ಸಂಭವಿಸದೆ ಇರುವುದನ್ನು ಪರಿಗಣಿಸಲಾಗಿದೆ. ಕೆಲವೊಂದು ಷರತ್ತುಗಳಿಗೆ ಬದ್ಧವಾಗಿ ಅನುಮತಿಯನ್ನು ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಇದನ್ನೂ ಓದಿ : Karnataka Election 2023: ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ: ಮನೆ ಬಾಲ್ಕನಿ, ಟೆರೇಸ್ ಮೇಲೆ ನಿಂತು ನೋಡುವಂತಿಲ್ಲ!