ಬೆಂಗಳೂರು: ಮುಂದಿನ ವರ್ಷ ವಿಧಾನಸಭೆ ಚುನಾವಣೆಯನ್ನು ಯಾರ ನೇತೃತ್ವದಲ್ಲಿ ನಡೆಸಬೇಕು ಎಂಬ ವಿಚಾರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟತೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೆ ನಡೆಯುತ್ತದೆ ಎಂಬ ಸ್ಪಷ್ಟ ಸಂಕೇತವನ್ನು ಮೋದಿ ಸೋಮವಾರ ನೀಡಿದ್ದಾರೆ.
ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು NHAI ಯೋಜನೆಗಳ ಪ್ರದರ್ಶನವನ್ನು ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಮೋದಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ, ಸಬ್ ಅರ್ಬನ್ ರೈಲು, ಸ್ಟಾರ್ಟಪ್, ಖಾಸಗಿ ಕ್ಷೇತ್ರ ಸೇರಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದರು. ಬೆಂಗಳೂರು ಅನುಭವಿಸುತ್ತಿರುವ ಇಂದಿನ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಟೀಕಿಸಿದರು. ಅಂತಿಮವಾಗಿ ಮೋದಿ ಆಡಿದ ಮಾತುಗಳು ಇದೀಗ ಕರ್ನಾಟಕದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಭಾಷಣದ ಕೊನೆಯಲ್ಲಿ ಮೋದಿ “ಇಷ್ಟೊಂದು ಅಭಿವೃದ್ಧಿ ಯೋಜನೆಗಳಿಗಾಗಿ ಕರ್ನಾಟಕದ ಜನತೆಗೆ ಅಭಿನಂದನೆಗಳು. ಬಸವರಾಜ್‌ಜಿ (ಬೊಮ್ಮಾಯಿ) ನೇತೃತ್ವದಲ್ಲಿ ನಮ್ಮ ಕರ್ನಾಟಕ ಮತ್ತಷ್ಟು ವೇಗವಾಗಿ ಮುನ್ನಡೆಯಲು ಕರ್ನಾಟಕ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ನಾವು ಕಟಿಬದ್ಧರಾಗಿದ್ದೇವೆ. ನಿಮ್ಮೊಂದಿಗೆ ಇರಲಿದ್ದೇವೆ, ತಮ್ಮೆಲ್ಲರಿಗೂ ಧನ್ಯವಾದ. ನಮಸ್ಕಾರ” ಎಂದು ಮಾತು ಮುಗಿಸಿದರು.
ಪ್ರಧಾನಿ ಮೋದಿ ಆಡುವ ಪ್ರತಿ ಮಾತಿಗೂ ಅರ್ಥವಿರುತ್ತದೆ, ಉದ್ದೇಶವಿರುತ್ತದೆ. ಅವರು ಯಾವುದೇ ಮಾತನ್ನು ಸುಖಾಸುಮ್ಮನೆ ಆಡುವವರಲ್ಲ. ಅದರಲ್ಲೂ ಇಡೀ ರಾಜ್ಯ, ದೇಶ ಕಣ್ಣರಳಿಸಿ ನೋಡುತ್ತಿರುವ ಪ್ರಮುಖ ಕಾರ್ಯಕ್ರಮದಲ್ಲಿ ಮೋದಿ ಆಡಿದ ಮಾತಿಗೆ ತೂಕ ಇದ್ದೇ ಇರುತ್ತದೆ. ಕರ್ನಾಟಕದಲ್ಲಿ ಆಗಿಂದಾಗ ʼಸಿಎಂ ಬದಲಾವಣೆʼ ಹಾಗೂ ಯಾರ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂಬ ವಿಚಾರವೂ ಚರ್ಚೆ ಆಗುತ್ತಲೇ ಇರುತ್ತದೆ.
ಇತ್ತೀಚೆಗಷ್ಟೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಚ್ಚರಿಯೆಂಬ ರೀತಿಯಲ್ಲಿ ಒಂದು ಸ್ಥಾನ ಹೆಚ್ಚುವರಿಯಾಗಿ ಗೆಲ್ಲಿಸಿ ಕೇಂದ್ರದಲ್ಲಿ ತಮ್ಮ ವರ್ಚಸ್ಸನ್ನು ಸಿಎಂ ಬೊಮ್ಮಾಯಿ ಹೆಚ್ಚಿಸಿಕೊಂಡಿದ್ದರು. ಆದರೆ ಒಂದೇ ವಾರದಲ್ಲಿ ಹೊರಬಂದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಕಟ್ಟಾಳುಗಳು ಸೋಲುಂಡು ಹಿನ್ನಡೆ ಅನುಭವಿಸಿದ್ದರು. ಮಾರನೆಯ ದಿನವೇ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪ್ರವಾಸ ಕರ್ನಾಟಕದಲ್ಲಿ ಇದ್ದದ್ದರಿಂದ ಬೊಮ್ಮಾಯಿಯವರಿಗೆ ಸಂಕಷ್ಟದ ಮುನ್ಸೂಚನೆ ಕಾಣಿಸಿತ್ತು. ಸಮಸ್ಯೆ ಎದುರಾಗುವುದಕ್ಕೂ ಮೊದಲೆ ಎಲ್ಲವನ್ನೂ ಸರಿಪಡಿಸಿಕೊಳ್ಳೋಣ ಎಂದು ನವದೆಹಲಿಗೆ ದೌಡಾಯಿಸಿದ್ದರು.
ಕರ್ನಾಟಕಕ್ಕೆ ಆಗಮಿಸಿದ ಜೆ.ಪಿ. ನಡ್ಡಾ, ʼರಾಜಕೀಯ ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ; ವಾತಾವರಣ ಹೇಗಿದೆ; ವಿಪಕ್ಷಗಳ ಬಗ್ಗೆ ಏನು ಮಾಹಿತಿ ಇದೆ ಎಂಬುದನ್ನು ಅರಿತಿರಬೇಕಾದ ಕುತೂಹಲ ಪ್ರವೃತ್ತಿ ಮತ್ತು ಜವಾಬ್ದಾರಿ ಇರಲೇಬೇಕುʼ ಎಂದು ಬೊಮ್ಮಾಯಿ ಅವರ ಮಾತನ್ನು ಉಲ್ಲೇಖಿಸಿದ್ದರು. “ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ರಾಜಕೀಯ ಕಾರ್ಯಕರ್ತರ ಜೀವನವೇ ಪಕ್ಷವಾಗಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು” ಎಂದು ಹೊಗಳಿಕೆಯ ಸುರಿಮಳೆಗೈದಿದ್ದರು. ಇದೆಲ್ಲದರಿಂದಾಗಿ, ತಮ್ಮ ಡೆಲ್ಲಿ ಟೂರ್ ಸಕ್ಸೆಸ್ ಆಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು.
ನಡ್ಡಾ ಅವರನ್ನು ಸಮಾಧಾನಪಡಿಸಿದ್ದಾಯಿತು, ಆದರೆ ಮೋದಿಯವರನ್ನು ಮೆಚ್ಚಿಸುವ ಬಹುದೊಡ್ಡ ಸವಾಲು ಸಿಎಂ ಮುಂದಿತ್ತು. ಎರಡು ದಿನಗಳ ಪ್ರವಾಸಕ್ಕೆ ಸೋಮವಾರ ಕರ್ನಾಟಕ್ಕೆ ಆಗಮಿಸಿರುವ ಮೋದಿ ಮೊದಲ ದಿನವೇ ಸಿಎಂಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಸಾಗುತ್ತದೆ ಎಂದು ಮೋದಿ ಹೇಳಿದ್ದಾರಾದರೂ, ಚುನಾವಣಾ ವರ್ಷದಲ್ಲಿ ಇಂತಹ ಮಾತುಗಳು ಅನೇಕ ಸಂದೇಶಗಳನ್ನು ನೀಡುತ್ತವೆ.
ಬೊಮ್ಮಾಯಿ ಅವರ ಬದಲಾವಣೆ ವಿಚಾರವನ್ನು ಮತ್ತೆ ಪ್ರಸ್ತಾಪಿಸಬೇಡಿ, ಅವರ ನೇತೃತ್ವದಲ್ಲೆ ಚುನಾವಣೆ ನಡೆಯುತ್ತದೆ ಎಂದು ಪಕ್ಷದ ಒಳಗಿರುವವರಿಗೆ ಹಾಗೂ ಹೊರಗಿರುವವರಿಗೆ ಮೋದಿ ಈ ಸಂದೇಶ ನೀಡಿರುವ ಸಾಧ್ಯತೆಯಿದೆ. ಸೋಮವಾರ ಯೋಗ ದಿನದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ಅಲ್ಲೇನಿದ್ದರೂ ಯೋಗದ ಕುರಿತೇ ಭಾಷಣವಿರುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರದ ಮಾತೇ ಸಿಎಂಗೆ ಅಭಯ ನೀಡಿದೆ ಎಂದು ಬಿಜೆಪಿ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ | Modi In Karnataka | ಸರ್‌ಎಂವಿ ಟರ್ಮಿನಲ್ ಉದ್ಘಾಟನೆ, ಸಬ್‌ಅರ್ಬನ್ ಶಂಕು ಸ್ಥಾಪಿಸಿದ ಮೋದಿ