ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬೆಂಗಳೂರಿನ ಜನರನ್ನು ಸೆಳೆಯುವುದಕ್ಕಾಗಿ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ರೋಡ್ ಶೋ ಒಂದು ದಿನದ ಬದಲಾಗಿ, ಎರಡು ದಿನ ನಡೆಯಲಿದೆ. ಈ ಮೊದಲು ಮೇ 6ರಂದು ಒಂದೇ ದಿನ ಎರಡು ಹಂತಗಳಲ್ಲಿ ರೋಡ್ ಶೋ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಬದಲಾದ ವೇಳಾಪಟ್ಟಿ ಪ್ರಕಾರ, ಮೇ 6 ಮತ್ತು 7ರಂದು ಎರಡು ದಿನ ರೋಡ್ ಶೋ ನಡೆಯಲಿದೆ. ಜತೆಗೆ ರೋಡ್ ಶೋ ನಡೆಯಲಿರುವ ಮಾರ್ಗವೂ ಬದಲಾವಣೆಯಾಗಲಿದೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಕು.ಶೋಭಾ ಕರಂದ್ಲಾಜೆ ಅವರು ರೋಡ್ ಶೋ ಕುರಿತು ವಿವರಣೆ ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 6, 7ರಂದು ಬೆಂಗಳೂರಿನಲ್ಲಿ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಅಬ್ಬರ; ಇಲ್ಲಿವೆ ಫೋಟೊಗಳು
ಒಂದೇ ದಿನ ರೋಡ್ ಆದರೆ ತೊಂದರೆ ಅದಕ್ಕಾಗಿ ಎರಡು ದಿನ
ʻʻರಾಜಧಾನಿಯ ಎಲ್ಲರನ್ನೂ ನೋಡಬೇಕು, 17 ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆʼʼ ಎಂದು ಹೇಳಿದರು.
ಎಲ್ಲೆಲ್ಲಿ ರೋಡ್ ಶೋ, ಯಾವಾಗ?
-ಮೇ 6ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಹೊಸ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಹೊರಟು ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಲ್ಲಿ ಕೊನೆಗೊಳ್ಳಲಿದೆ.
-ಮೇ 7ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಿಂದ ಹೊರಟು ಮಲ್ಲೇಶ್ವರದ ಸ್ಯಾಂಕಿ ಕೆರೆ ಬಳಿ ಮುಕ್ತಾಯಗೊಳ್ಳಲಿದೆ. ರೋಡ್ ಶೋ ಮಾರ್ಗದ ವಿವರಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಮೋದಿ ಅವರ ಮೂರು ದಿನದ ಕಾರ್ಯಕ್ರಮ ವಿವರ ಹೀಗಿದೆ
ಮೇ 5: ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಿಯವರು ಬಳ್ಳಾರಿಯಲ್ಲಿ, ಸಂಜೆ 4.30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೇ 6: ಬೆಂಗಳೂರಿನಲ್ಲಿ ಬೆಳಗ್ಗೆ 10ರಿಂದ 1.30ರವರೆಗೆ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಬಾದಾಮಿಯಲ್ಲಿ, ಸಂಜೆ 7 ಗಂಟೆಗೆ ಹಾವೇರಿಯಲ್ಲಿ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.
ಮೇ 7: ಭಾನುವಾರ ಬೆಳಗ್ಗೆ 10ರಿಂದ 1.30ರವರೆಗೆ ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಸಂಜೆ 7 ಗಂಟೆಗೆ ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ನಂಜನಗೂಡಿನಲ್ಲಿ ಸಾರ್ವಜನಿಕ ಸಭೆ ನಂತರ ಮೋದಿ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.
ಟ್ರಾಫಿಕ್ ಜಾಮ್ ಸಮಸ್ಯೆ ಆಗಬಾರದು ಎಂದಿದ್ದರು ಮೋದಿ
ಈ ನಡುವೆ ರೋಡ್ ಶೋ ಸಂಬಂಧಿತ ಪೂರ್ವಭಾವಿ ಸಭೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯಿತು. ಇದರಲ್ಲಿ ನಡೆದ ಚರ್ಚೆಯ ವಿವರ ನೀಡಿದ ಶೋಭಾ ಕರಂದ್ಲಾಜೆ ಅವರು, ಮೋದಿಯವರು ಮೇ 6 ಮತ್ತು 7ರಂದು ಬೆಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ. ಎರಡು ದಿನ ರೋಡ್ ನಮ್ಮೆಲ್ಲ ಕಾರ್ಯಕರ್ತರ ಅಪೇಕ್ಷೆ ಇತ್ತು, ಮೋದಿಯವರಿಗೂ ವಿನಂತಿ ಕೂಡ ಮಾಡಿದ್ದೆವು. ಆದರೆ ನಾನು ಬರೋದ್ರಿಂದ ಟ್ರಾಫಿಕ್ ಜಾಮ್ ಆಗಬಾರದು, ಯಾವುದಕ್ಕಾದರೂ ಒಂದಕ್ಕೆ ಬರ್ತೇನೆ ಎಂದು ಹೇಳಿದ್ದರು. ಆದರೆ ಈಗ ಎರಡು ಕಡೆಗಳಲ್ಲಿ ರೋಡ್ ಶೋಗೆ ಒಪ್ಪಿಕೊಂಡಿದ್ದಾರೆ. ಮೇ 6ರಂದು 10 ಕಿಮೀ ಮತ್ತು 7ರಂದು 26 ಕಿಮೀ ರೋಡ್ ಶೋ ಮಾಡುತ್ತಾರೆ ಎಂದು ಹೇಳಿದರು.
ಮೋದಿ ಅವರು ಶನಿವಾರ ಮತ್ತು ಭಾನುವಾರ ಎರಡು ದಿನ ಬೆಳಗ್ಗೆ ರೋಡ್ ಶೋ ಮಾಡಲಿದ್ದಾರೆ. ಬೆಂಗಳೂರಿನ ಜನತೆ ಮೋದಿ ಅವರನ್ನು ಹತ್ತಿರದಿಂದಲೇ ನೋಡಬಹುದು. ಆವತ್ತು ಹತ್ತು ಲಕ್ಷ ಜನ ಸೇರಲಿದ್ದಾರೆ ಎಂದು ಹೇಳಿದ ಶೋಭಾ ಕರಂದ್ಲಾಜೆ, ಪ್ರಧಾನಿಗಳ ಈ ರೋಡ್ ಶೋನಿಂದ, ಬೆಗಳೂರಿನಲ್ಲಿ 20ಕ್ಕೂ ಹೆಚ್ಚು ಸೀಟ್ ಗೆಲ್ಲಲಿದ್ದೇವೆ ಎಂದರು.
ಇದನ್ನೂ ಓದಿ : Modi In Karnataka: ಪ್ರಧಾನಿ ಮೋದಿ ಹೊರಡುತ್ತಲೇ ಹೆಲಿಕಾಪ್ಟರ್‌ನತ್ತ ಕೈಬೀಸಿ ಕಣ್ಣೀರಿಟ್ಟ ಮಹಿಳೆ