ಹುಮನಾಬಾದ್: ʻʻಕಾಂಗ್ರೆಸ್ ನನಗೆ ಇದುವರೆಗೆ 91 ಬೇರೆ ಬೇರೆ ಶಬ್ದಗಳನ್ನು ಬಳಸಿ ಬೈಗುಳಗಳ ಸುರಿಮಳೆ ಸುರಿಸಿದೆ. ಯಾರೋ ಇದನ್ನೆಲ್ಲ ಲೆಕ್ಕವಿಟ್ಟು ನನಗೆ ಹೇಳಿದ್ದಾರೆ. ಇವತ್ತು ಕರ್ನಾಟಕದಲ್ಲಿ ನನಗೆ ನೀಡಿದ ಬೈಗುಳಕ್ಕೆ ಜನರು ವೋಟಿನ ಮೂಲಕ ಉತ್ತರ ನೀಡಲಿದ್ದಾರೆʼʼ ಎಂದು ಆಕ್ರೋಶದಿಂದ ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Prime minister Narendra Modi). ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ರಾಕ್ಷಸ ಎಂದು ಕರೆದವರು ನನ್ನನ್ನು ಬಿಡುತ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು, ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಷದ ಹಾವು ಹೇಳಿಕೆಯನ್ನು ಉಲ್ಲೇಖಿಸದೆಯೇ ಪ್ರತ್ಯುತ್ತರ ನೀಡಿದರು. ಕಾಂಗ್ರೆಸ್ ಹಲವು ಮಹಾಪುರುಷರನ್ನು ಅಪಮಾನಿಸಿದೆ. ಈಗ ನನ್ನನ್ನೂ ಬೆನ್ನಟ್ಟಿದೆ. ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಜನರೇ ಉತ್ತರ ಕೊಡಬೇಕು ಎಂದು ನರೇಂದ್ರ ಮೋದಿ ಹೇಳಿದರು.
ʻʻಈಗ ಕಾಂಗ್ರೆಸ್ ನನಗೆ ಬೈಯಲು ಆರಂಭಿಸಿದೆ. ಯಾರೋ ನನಗೆ ಬೈದ ಮಾತುಗಳನ್ನು ಲೆಕ್ಕ ಹಾಕಿ ಕೊಟ್ಟಿದ್ದಾರೆ. ಇದುವರೆಗೆ ಅವರು ಬಳಸಿರುವ ಒಟ್ಟು ಶಬ್ದಗಳು 91 ಆಗಿದೆ. ಕಾಂಗ್ರೆಸ್ ನಾಯಕರೇ ನೀವು ನನ್ನನ್ನು ಬೈಯಲು ಇಷ್ಟೊಂದು ಕಷ್ಟಪಡುವ ಬದಲು, ಡಿಕ್ಷನರಿ ಬೆಳೆಸುವ ಬದಲು ಪಕ್ಷದ ಕೆಲಸ ಮಾಡಿದ್ದರೆ ಕಾರ್ಯಕರ್ತರ ಆಶೋತ್ತರಗಳನ್ನು ಈಡೇರಿಸಿದ್ದರೆ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲʼʼ ಎಂದು ಮೋದಿ ಹೇಳಿದರು.
ಅವರು ಲಿಂಗಾಯತರನ್ನೇ ಕಳ್ಳರೆಂದವರು!
ʻʻದೇಶಕ್ಕಾಗಿ ಕೆಲಸ ಮಾಡುವವರಿಗೆ, ಜನರ ಕೆಲಸ ಮಾಡುವವರಿಗೆ ಅಪಮಾನ ಮಾಡೋದು ಕಾಂಗ್ರೆಸ್‌ನ ಜಾಯಮಾನ. ನನ್ನನ್ನು ಚೌಕಿದಾರ್ ಚೋರ್ ಎಂದರು, ಮೋದಿ ಚೋರ್ ಎಂದರು, ಒಬಿಸಿಗಳನ್ನು ನೀಚರೆಂದರು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಲಿಂಗಾಯತ ಬಂಧುಗಳನ್ನು ಕಳ್ಳರು ಎಂದು ಕರೆದರು. ಇದು ನನಗೆ ತುಂಬಾ ಬೇಸರವಾಗಿದೆʼʼ ಎಂದು ಹೇಳಿದರು ನರೇಂದ್ರ ಮೋದಿ.
ʻʻಕಾಂಗ್ರೆಸ್‌ನವರೇ ಕಿವಿಗೊಟ್ಟು ಕೇಳಿ.. ಯಾವ ಯಾವಾಗ ನೀವು ನನ್ನನ್ನು ಬೈದಿದ್ದೀರೋ ಎದ್ದೇಳಲಾಗದ ಹೊಡೆತ ತಿಂದಿದ್ದೀರಿ. ಈ ಬಾರಿಯೂ ಅದೇ ಆಗುತ್ತದೆʼʼ ಎಂದರು ಮೋದಿ.
ಅವರು ಅಂಬೇಡ್ಕರ್ ಅವರನ್ನೇ ಬಿಟ್ಟಿಲ್ಲ
ʻʻಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರೇ ನನಗೆ ಬೈದಿದ್ದಾರೆ. ಸಣ್ಣ ಪುಟ್ಟ ನಾಯಕರ ಬೈಗುಳಗಳನ್ನು ಲೆಕ್ಕ ಇಟ್ಟಿಲ್ಲ. ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಟ್ಟಿಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ರಾಕ್ಷಸ್, ರಾಷ್ಟ್ರದ್ರೋಹಿ, ಮೋಸಗಾರ ಎಂದು ಹೇಳಿತ್ತು. ಇದನ್ನು ಅಂಬೇಡ್ಕರ್ ಅವರೇ ಹೇಳಿಕೊಂಡಿದ್ದರು. ಕಾಂಗ್ರೆಸ್ ವೀರ್ ಸಾವರ್ಕರ್‌ಗೆ ಹೇಗೆಲ್ಲ ಬೈದಿದೆ ಎನ್ನುವುದು ನಿಮಗೆ ಗೊತ್ತು. ದೊಡ್ಡ ದೊಡ್ಡ ಮಹಾಪುರುಷರು ಅವರಿಂದ ದಾಳಿಗೆ ಒಳಗಾಗಿದ್ದಾರೆ. ಕಾಂಗ್ರೆಸ್ ನನಗೆ ಅಂಬೇಡ್ಕರ್, ವೀರ್ ಸಾವರ್ಕರ್‌ಗೆ ನೀಡಿದ ರೀತಿಯಲ್ಲೇ ಬೈಗುಳಗಳನ್ನು ನೀಡಿದೆʼʼ ಎಂದರು.
ನಿಮ್ಮ ಬೈಗುಳ ಮಣ್ಣಿನಲ್ಲಿ ಮಣ್ಣಾಗಿ ಹೋಗಲಿ
ʻʻಕಾಂಗ್ರೆಸ್‌ನವರು ಬೈಯುತ್ತಲೇ ಕಾಲ ಕಳೆಯಲಿ. ನಾನು ಜನರ ಸೇವೆಯಲ್ಲಿ ಕಳೆಯುತ್ತೇನೆ. ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಅವರು ಅಡುವ ಪ್ರತಿಯೊಂದು ಬೈಗುಳವೂ ಮಣ್ಣಲ್ಲಿ ಮಣ್ಣಾಗಿ ಹೋಗಲಿʼʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ʻʻಕಾಂಗ್ರೆಸ್ ನವರೇ ನೆನಪಿಟ್ಟುಕೊಳ್ಳಿ, ನೀವೆಷ್ಟು ಕೆಸರು ಎಸೆಯುತ್ತೀರೋ ಅಷ್ಟೇ ಕಮಲ ಬೆಳೆಯುತ್ತದೆʼʼ ಎಂದು ಹೇಳಿದರು.
ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಡಿ ಎಂದ ಮೋದಿ ಅವರು, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಗುರಿ ಇರಲಿ ಎಂದರು.
ಸ್ವಾಗತ ಭಾಷಣ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ವಿಷದ ಹಾವು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನನ್ನು ನೆನಪಿಸಿ ಮೋದಿ ಅವರು ಹಾವಲ್ಲ, ವಿಷವನ್ನು ನುಂಗಿಕೊಂಡಿರುವ ವಿಷಕಂಠ ಎಂದರು.
ಇದನ್ನೂ ಓದಿ : Modi in Karnataka : ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎಂಟ್ರಿ; ಇಂದು 4 ಕಡೆ ರೋಡ್ ಶೋ ಸಮಾವೇಶ