Site icon Vistara News

Modi in Mangalore | ಉಳ್ಳವರಷ್ಟೇ ಅಭಿವೃದ್ಧಿಯನ್ನು ಸವಿಯುತ್ತಿದ್ದರು: ಪ್ರತಿಪಕ್ಷಗಳಿಗೆ ತಿವಿದ ಮೋದಿ

ಮಂಗಳೂರು: ಸ್ವಾತಂತ್ರ್ಯಾನಂತರ ಭಾರತದಲ್ಲಿ ಅನೇಕ ದಶಕಗಳವರೆಗೆ, ಹಣವಂತರು, ಸೌಲಭ್ಯವಂತರು ಮಾತ್ರವೇ ಅಭಿವೃದ್ಧಿಯ ಲಾಭವನ್ನು ಪಡೆಯುತ್ತಿದ್ದರು ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಎಂಟು ವರ್ಷದ ಅವಧಿಯಲ್ಲಿ ಈ ಸ್ಥಿತಿಯನ್ನು ಬದಲಾಯಿಸಿದ್ದೇವೆ. ಸಮಾಜದ ಎಲ್ಲರನ್ನೂ ನಮ್ಮೊಟ್ಟಿಗೆ ಕೊಂಡೊಯ್ಯುತ್ತಿದ್ದೇವೆ ಎಂದಿದ್ದಾರೆ.

ಮಂಗಳೂರಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಆಯೋಜಿಸಿದ್ದ ಸುಮಾರು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ನೆರೆದಿದ್ದ ಬೃಹತ್‌ ಜನಸ್ತೋಮವನ್ನುದ್ದೇಶಿಸಿ ಮೋದಿ ಮಾತನಾಡಿದರು.

ಇಂದಿನ ಕಾಲದಲ್ಲಿ ಗೌರವಯುತ ಜೀವನ ನಡೆಸಲು ಉತ್ತಮ ಮನೆ, ನೀರು, ವಿದ್ಯುತ್‌, ಹೊಗೆ ರಹಿತ ಅಡುಗೆಮನೆ ಎನ್ನುವುದು ಸಾಮಾನ್ಯ ಅವಶ್ಯಕತೆ. ಇದೇ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಎಂಟು ವರ್ಷದಲ್ಲಿ ಬಡವರಿಗೆ ಮೂರು ಕೋಟಿಗೂ ಹೆಚ್ಚು ಮನೆ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಮಧ್ಯಮ ವರ್ಗದ ಕುಟುಂಬದವರು ಮನೆ ನಿರ್ಮಿಸಿಕೊಳ್ಳಲು ಸಹಾಯ ನೀಡಲಾಗುತ್ತಿದೆ.

ಇದನ್ನೂ ಓದಿ | Modi in Mangalore | ಜನರ ಆಕಾಂಕ್ಷೆಯೇ ನಮಗೆ ಆದೇಶ: ಮಂಗಳೂರಿನಲ್ಲಿ ಮೋದಿ ಹವಾ

ಜಲಜೀವನ ಮಿಷನ್‌ನಲ್ಲಿ ಮೂರು ವರ್ಷದಲ್ಲಿ ಆರು ಕೋಟಿಗೂ ಹೆಚ್ಚು ಮನೆಗಳಿಗೆ ನೀರು ಒದಗಿಸಲಾಗಿದೆ. ಕರ್ನಾಟಕದಲ್ಲಿ ಮೂವತ್ತು ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿಯ ನೀರು ಲಭಿಸುತ್ತಿದೆ. ಇದೆಲ್ಲದರ ಪ್ರಮುಖ ಫಲಾನುಭವಿಗಳು ನಮ್ಮ ತಾಯಂದಿರು, ಸಹೋದರಿಯರು ಎನ್ನುವುದು ನನಗೆ ಸಂತೋಷ. ಬಡವರಿಗೆ ಯಾವುದೇ ಅನಾರೋಗ್ಯ ಉಂಟಾದರೆ ಮುಂದಿನ ಪೀಳಿಗೆಯನ್ನೂ ಅದು ಬಾಧಿಸುತ್ತದೆ. ಆಯುಷ್ಮಾನ್‌ ಭಾರತ್‌ ಯೋಜನೆಯು ಈ ಸಮಸ್ಯೆಯನ್ನು ಬಗೆಹರಿಸುತ್ತಿದೆ. ಬಡವರ ಸುಮಾರು ಐವತ್ತು ಸಾವಿರ ಕೋಟಿ ರೂ. ವೆಚ್ಚವಾಗುವುದು ಈ ಯೋಜನೆಯಿಂದಾಗಿ ತಪ್ಪಿದೆ ಎಂದರು.

ಸ್ವಾತಂತ್ರ್ಯದ ನಂತರ ಅನೇಕ ದಶಕಗಳವರೆಗೆ, ಇತ್ತೀಚಿವರೆಗೆ ಉಳ್ಳವರಿಗೇ ಅಭಿವೃದ್ಧಿಯ ಫಲ ಸಿಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ದುರ್ಬಲರನ್ನೂ ನಾವು ಅಭಿವೃದ್ಧಿಯ ಮಾರ್ಗದಲ್ಲಿ ಸೇರಿಸಿಕೊಳ್ಳುತ್ತಿದ್ದೇವೆ. ಹಿಂದಿನವರು ಮರೆತವರೆಲ್ಲರ ಜತೆಗೆ ನಮ್ಮ ಸರ್ಕಾರ ನಿಂತಿದೆ. ಸಣ್ಣ ರೈತರಿಂದ ರಸ್ತೆಬದಿ ವ್ಯಾಪಾರಿಗಳವರೆಗೂ ದೇಶದ ಎಲ್ಲರಿಗೂ ಅಭಿವೃದ್ಧಿಯ ಲಾಭ ದೊರಕಲು ಈಗ ಆರಂಭವಾಗಿದೆ ಎಂದರು.

ಪಿಎಂ ಸಮ್ಮಾನ್‌ ನಿಧಿಯಲ್ಲಿ ದೇಶದ ಹನ್ನೆರಡು ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ಎರಡು ಲಕ್ಷ ಕೋಟಿ ರೂ. ನೀಡಲಾಗಿದೆ ಎಂದ ಮೋದಿ, ಮುದ್ರಾ ಯೋಜನೆಯ ಮೂಲಕ ದೇಶಾದ್ಯಂತ ಸಣ್ಣ ಉದ್ಯಮಿಗಳಿಗೆ ಇಪ್ಪತ್ತು ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಕರ್ನಾಟಕದಲ್ಲೂ ಸುಮಾರು ಎರಡು ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಭಾರತದೊಂದಿಗೆ ಏಳೂವರೆ ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ಕರಾವಳಿಯಿದೆ. ಕರಾವಳಿ ಹಾಗೂ ಪಶ್ಚಿಮ ಘಟ್ಟಗಳು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಅವಕಾಶಗಳು ಹೆಚ್ಚಾಗಿವೆ.

ಭಾರತದಲ್ಲಿ ಮಧ್ಯಮವರ್ಗದ ಶಕ್ತಿ ಹೆಚ್ಚಾಗುತ್ತಿದೆ. ಸಮುದ್ರ ಪ್ರವಾಸೋದ್ಯಮಕ್ಕೆ ಒಲವು ಹೆಚ್ಚಾಗುತ್ತಿದೆ. ಇದೆಲ್ಲದರಿಂದ ಗುಡಿಕೈಗಾರಿಕೆಗಳು, ರಸ್ತೆಬದಿ ವ್ಯಾಪಾರಿಗಳು, ಮೀನುಗಾರರಿಗೆ ಅನುಕೂಲವಾಗುತ್ತದೆ. ನವಮಂಗಳೂರು ಬಂದರು, ಸಮುದ್ರ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತದೆ ಎಂದು ಭಾವಿಸುತ್ತೇನೆ ಎಂದು ಮೋದಿ ಆಶಿಸಿದರು.

ಜಿಡಿಪಿ ಹೆಚ್ಚಳಕ್ಕೆ ಸಂತೋಷ

ಕರೊನಾ ಕಾಲದಲ್ಲಿ ಸರ್ಕಾರ ಕೈಗೊಂಡ ನಿರ್ಧಾರಗಳು ಈಗ ಫಲ ನೀಡಲಾರಂಭಿಸಿವೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಕೊರೊನಾ ಆರಂಭದಲ್ಲಿ, ಆಪತ್ತನ್ನು ಅವಕಾಶವಾಗಿ ಬದಲಾವಣೆ ಮಾಡಬೇಕು ಎಂದು ನಾನು ಮಾತನಾಡಿದ್ದೆ. ಇದೀಗ ಹೊರಬಂದಿರುವ ಜಿಡಿಪಿ ಅಂಕಿ ಅಂಶಗಳು, ಭಾರತವು ಕೊರೊನಾ ಕಾಲದಲ್ಲಿ ಕೈಗೊಂಡ ನೀತಿ ನಿರ್ಣಯಗಳು ಎಷ್ಟು ಮಹತ್ವಪೂರ್ಣವಾಗಿದ್ದವು ಎನ್ನುವುದನ್ನು ತೋರಿಸಿವೆ. ವಿಶ್ವಾದ್ಯಂತ ಕೊರೊನಾ ಆತಂಕವಿದ್ದರೂ ಐವತ್ತು ಲಕ್ಷ ಕೋಟಿ ರೂ. ಮೊತ್ತದ ರಫ್ತು ಮಾಡಿದೆ. ರಫ್ತಿನಲ್ಲಿ ಹೊಸ ದಾಖಲೆಗಳನ್ನು ಭಾರತ ಮಾಡಿದೆ ಎಂದರು.

ಸೇವಾ ಕ್ಷೇತ್ರದ ವೇಗ ಹೆಚ್ಚಾಗಿದೆ. ಪಿಎಲ್‌ಐ ಯೋಜನೆಗಳ ಪ್ರಭಾವ ಉತ್ಪಾದನಾ ಕ್ಷೇತ್ರದ ಮೇಲೆ ಉಂಟಾಗಿದೆ. ಆಟಿಕೆಗಳ ಆಮದು ಮೂರು ವರ್ಷದಲ್ಲಿ ಕಡಿಮೆಯಾದಷ್ಟೇ ರಫ್ತಿನಲ್ಲಿ ಹೆಚ್ಚಳವಾಗಿದೆ ಎಂದರು.

ಇದನ್ನೂ ಓದಿ | Modi in Mangalore | ಕಿಸಾನ್‌ ಕಾರ್ಡ್‌, ಆಳ ಸಮುದ್ರ ಮೀನುಗಾರಿಕೆಗೆ ಸಹಾಯ: ಮೀನುಗಾರರ ಮನಸೂರೆಗೊಂಡ ಮೋದಿ

Exit mobile version