ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ೩೮೦೦ ಕೋಟಿ ರೂ. ಮೊತ್ತದ ಪ್ರಮುಖ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಇದಾಗಿದೆ. ಮೋದಿ ಅವರು ಗುರುವಾರ ಸಂಜೆಯೇ ದಿಲ್ಲಿಯಿಂದ ಹೊರಟು ಕೊಚ್ಚಿ ತಲುಪಲಿದ್ದಾರೆ. ಅಲ್ಲಿಂದ ಶುಕ್ರವಾರ ಮಧ್ಯಾಹ್ನ ಹೊರಟು ೧.೩೦ಕ್ಕೆ ಮಂಗಳೂರು ತಲುಪಲಿದ್ದಾರೆ. ಮಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತೆ ೪ ಗಂಟೆ ಹೊತ್ತಿಗೆ ನವದೆಹಲಿ ವಿಮಾನ ಹತ್ತಲಿದ್ದಾರೆ. ಅಂದರೆ ಮೋದಿ ಅವರು ೧.೩೦ಕ್ಕೆ ವಿಮಾನ ಇಳಿಯುವಲ್ಲಿಂದ ೪ ಗಂಟೆಗೆ ವಿಮಾನ ಹತ್ತುವವರೆಗೆ ಸುಮಾರು ಎರಡೂವರೆ ಗಂಟೆ (೧೫೦ ನಿಮಿಷ) ಮಂಗಳೂರಿನಲ್ಲಿ ಇರುತ್ತಾರೆ.
ಇವಿಷ್ಟೂ ಸಾಮಾನ್ಯ ಕಾರ್ಯಕ್ರಮ ರೂಪರೇಷೆಯಾದರೂ ಒಟ್ಟಾರೆ ಕಾರ್ಯಕ್ರಮದ ಮೂಲಕ ಬಿಜೆಪಿ ರಾಜಕೀಯ ಸಂದೇಶ ನೀಡಲು ಸರ್ವ ಸಿದ್ಧತೆ ಮಾಡಿಕೊಂಡಿರುವುದು ಕಂಡುಬರುತ್ತಿದೆ. ಬಹುಮುಖ್ಯವಾಗಿ, ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಅವರ ತವರು ನೆಲದಿಂದಲೇ ಹೊರಟಿದ್ದ ಕಾರ್ಯಕರ್ತರ ಅಪಸ್ವರವನ್ನು ಮೆಟ್ಟಿನಿಲ್ಲುವ ಮುನ್ಸೂಚನೆಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೂರು ವರ್ಷದ ಸಂಭ್ರಮ
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿರುವ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಆಗಸ್ಟ್ 28ರ ಭಾನುವಾರ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ವಿವಿಧ ಪತ್ರಿಕೆಗಳಲ್ಲಿ ಪೂರ್ಣಪುಟ ಜಾಹೀರಾತು ನೀಡುವುದರ ಜತೆಗೆ ಇಲ್ಲಿಯವರೆಗೆ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಮಗುಮ್ಮಾಗಿದ್ದವರೂ ಬಿಚ್ಚುಮನಸ್ಸಿನಿಂದ ಶುಭಾಶಯ ಕೋರಿದ್ದರು. ಈ ಸಮಯದಲ್ಲೆ ಅನೇಕರಿಗೆ, ರಾಜ್ಯ ಬಿಜೆಪಿ ಅಧ್ಯಕ್ಷ ಬದಲಾವಣೆ ಆಗುವುದಿಲ್ಲ ಎನ್ನಿಸಿತ್ತು.
ಆದರೂ, ಇಷ್ಟೊಂದು ಶುಭಾಶಯ ಕೋರುತ್ತಿರುವುದನ್ನು ನೋಡಿ ಅನುಮಾನಗಳೂ ವ್ಯಕ್ತವಾಗಿದ್ದವು. ಕಟೀಲ್ ಅವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಆದರೆ ಅವರ ಅವಧಿಯ ಅಂತಿಮ ಘಟ್ಟದಲ್ಲಿ ಮಂಗಳೂರಿನಲ್ಲಿ ನಡೆದ ʼಕಾರು ಅಲುಗಾಡಿಸುವʼ ಘಟನೆಯಿಂದ ಬೇಸರಗೊಂಡಿದ್ದಾರೆ. ತಾವು ಬೆಳೆದುಬಂದ ಪ್ರದೇಶದಲ್ಲೇ ಕಾರ್ಯಕರ್ತರು ಹೀಗೆ ಮಾಡಿದರಲ್ಲ ಎಂಬ ನೋವಿದೆ. ಏಕಾಏಕಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿಬಿಟ್ಟರೆ, ಈ ಸ್ಥಾನದಲ್ಲಿ ವಿಫಲ ಹೊಂದಿದ್ದರಿಂದ ಬದಲಾವಣೆ ಮಾಡಲಾಯಿತು ಎಂಬ ಸಂದೇಶ ಹೋಗುತ್ತದೆ.
ಪಕ್ಷದ ರಾಜ್ಯಾಧ್ಯಕ್ಷರು ವಿಫಲರಾದರು ಎನ್ನುವುದು ಪಕ್ಷಕ್ಕೆ ಒಂದು ಅವಮಾನವಾದರೆ, ಇನ್ನೂ ಸಾಕಷ್ಟು ವರ್ಷ ರಾಜಕಾರಣ ಮಾಡಬೇಕಿರುವ ಯುವಕರಾದ ಕಟೀಲ್ ಅವರ ಭವಿಷ್ಯಕ್ಕೂ ತೊಂದರೆ ಆಗುತ್ತದೆ. ಹಾಗಾಗಿ ಅವರ ಕಾಲದಲ್ಲಿ ಏನೆಲ್ಲ ಉತ್ತಮ ಕಾರ್ಯಗಳು ನಡೆದವು ಎಂಬುದನ್ನು ಬಿಂಬಿಸಿದ ನಂತರದಲ್ಲಿ ಬದಲಾವಣೆಯನ್ನೂ ಮಾಡಬಹುದು ಎಂಬ ಅಭಿಪ್ರಾಯಗಳಿದ್ದವು. ಆದರೆ ಇದೀಗ ಮೋದಿ ಪ್ರವಾಸದ ಸಂದರ್ಭದಲ್ಲಿ ಬಿಜೆಪಿ ನೀಡುತ್ತಿರುವ ಜಾಹೀರಾತುಗಳು ಈ ವಿಚಾರದಲ್ಲಿ ಸ್ಪಷ್ಟತೆ ನೀಡಿವೆ.
ಮೋದಿ ಹಾಗೂ ಕಟೀಲ್ ಮಾತ್ರ
ಪ್ರಧಾನಿ ಮೋದಿ ಕಾರ್ಯಕ್ರಮದ ನಿಮಿತ್ತ ರಾಜ್ಯ ಬಿಜೆಪಿ ವತಿಯಿಂದ ಅನೇಕ ಜಾಹೀರಾತುಗಳನ್ನು ರೂಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಹೀರಾತುಗಳನ್ನು ಹರಿಯಬಿಡಲಾಗುತ್ತಿದೆ. ಈ ಜಾಹೀರಾತುಗಳಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡದ ನಕ್ಷೆಯಲ್ಲಿ ಮೋದಿ ಭಾವಚಿತ್ರವಿದೆ. ಅದೇ ಚಿತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರ ಬಳಸಲಾಗಿದೆ.
ಮೋದಿಯವರ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಆಹ್ವಾನಿಸಲು ಖ್ಯಾತ ಯಕ್ಷಗಾನ ಭಾಗವತರಾದ ಸತೀಶ್ ಪಟ್ಲ ಅವರಿಂದ ಒಂದು ಹಾಡನ್ನು ಧ್ವನಿಮುದ್ರಿಸಲಾಗಿದೆ. ಈ ಹಾಡಿನ ವಿಡಿಯೋ ಚಿತ್ರಗಳ ನಡುವೆಯೂ ಮೋದಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನಷ್ಟೇ ಬಳಸಲಾಗಿದೆ. ಇದೇ ವಿಡಿಯೊವನ್ನು ಬಹುತೇಕ ಸಚಿವರು, ಬಿಜೆಪಿ ಶಾಸಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಸರ್ಕಾರದ ಹಿರಿಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿರುವ ಪೋಸ್ಟ್‌ಗಳು ಮತ್ತಷ್ಟು ಸ್ಪಷ್ಟತೆ ನೀಡುತ್ತಿವೆ. ಅದರಲ್ಲಿ ಅವರು ಹೇಳಿರುವುದೇನೆಂದರೆ, “ದಕ್ಷಿಣ ಕನ್ನಡ ಸಂಸದರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಮಹತ್ವಾಕಾಂಕ್ಷೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲು ಮಂಗಳೂರಿಗೆ ಆಗಮಿಸುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ” ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದರೆ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ಕಾರ್ಯಕರ್ತರು ರಾಜ್ಯ ಬಿಜೆಪಿ ಅಧ್ಯಕ್ಷರ ಕಾರನ್ನು ಅಲುಗಾಡಿಸಿದರು. ಹಾಗೆಂದಾಕ್ಷಣ ರಾಜ್ಯದ ಎಲ್ಲ ಕಾರ್ಯಕರ್ತರಿಗೂ ಇದೇ ಅಭಿಪ್ರಾಯವಿಲ್ಲ. ನಂತರ ಯುವ ಮೋರ್ಚಾ ಕಾರ್ಯಕರ್ತರು ಸರಣಿ ರಾಜೀನಾಮೆ ನೀಡಿದ್ದು, ಹಿಂದು ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೇ ವಿನಃ ರಾಜ್ಯ ಅಧ್ಯಕ್ಷರ ಮೇಲಿನ ಸಿಟ್ಟಿನಿಂದ ಅಲ್ಲ. ಹೀಗಾಗಿ ಕಟೀಲ್ ಅವರನ್ನು ಬದಲಾವಣೆ ಮಾಡುವುದರಿಂದ ಯಾವ ಪರಿಹಾರವೂ ಸಿಗುವುದಿಲ್ಲ. ಕೆಲವರು ಹೇಳಿದಾಕ್ಷಣ ಬದಲಾವಣೆ ಮಾಡಿಬಿಟ್ಟರೆ ಅದೇ ಸಂಪ್ರದಾಯವಾಗುತ್ತದೆ. ಮುಂದಿನ ದಿನಳಲ್ಲಿಯೂ ರಾಜ್ಯ ಅಧ್ಯಕ್ಷರನ್ನು ಹೀಗೆ ಬದಲಾವಣೆ ಮಾಡಬಹುದು ಎಂಬ ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ.ʼ
ಈಗಿನ ಬಿಜೆಪಿ ರಾಷ್ಟ್ರೀಯ ನಾಯಕತ್ವ ಅತ್ಯಂತ ಸದೃಢವಾಗಿದೆ. ತಮ್ಮ ನಿರ್ಧಾರಕ್ಕೆ ಕೊನೆಯವರೆಗೂ ಅಂಟಿಕೊಳ್ಳುವ ಶಕ್ತಿಯನ್ನು ಹೊಂದಿದ್ದು, ಕಟೀಲ್ ವಿಚಾರದಲ್ಲೂ ಅವರನ್ನು ಬದಲಾವಣೆ ಮಾಡದೇ ಇರಲು ಎಲ್ಲ ಪ್ರಯತ್ನ ಮಾಡಲಿದೆ. ಹೀಗಾಗಿ ಶುಕ್ರವಾರದ ಕಾರ್ಯಕ್ರಮವನ್ನು, ಕಟೀಲ್ ಅವರನ್ನು ರಾಜ್ಯ ಅಧ್ಯಕ್ಷರ ಸ್ಥಾನದಲ್ಲಿ ಪುನರ್‌ಪ್ರತಿಷ್ಟಾಪನೆ ಮಾಡುವ ಕಾರ್ಯಕ್ರಮವಾಗಿಯೂ ಕಾಣುವ ಸಾಧ್ಯತೆಯಿದೆ. ಕಟೀಲ್ ಅವರು ಅಭಿವೃದ್ಧಿ ಕಾರ್ಯವನ್ನು ನಡೆಸಿಲ್ಲ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಟೀಲ್ ಅವರ ಪ್ರಶಂಸೆ ಮಾಡಬಹುದು. ಈ ಮೂಲಕ, ಕಟೀಲ್ ಅವರ ಅಧ್ಯಕ್ಷ ಸ್ಥಾನ ಮುಂದುವರಿಕೆಯ ಸಂದೇಶವನ್ನೂ ನೀಡಬಹುದು ಎಂದು ಬಿಜೆಪಿ ಮೂಲಗಳೂ ತಿಳಿಸಿವೆ. ಶುಕ್ರವಾರ ಮದ್ಯಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಇದಕ್ಕೆ ಉತ್ತರ ಲಭಿಸಲಿದೆ.
ಕನ್ನಡದಲ್ಲಿ ಟ್ವೀಟ್ ಮಾಡಿದ ಮೋದಿ
ಮಂಗಳೂರಿನ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುತ್ತಿರುವುದಾಗಿ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. “ನಾಳೆ, ಸೆಪ್ಟೆಂಬರ್ 2 ರಂದು ಮಂಗಳೂರಿನ ಸೋದರಿಯರು ಮತ್ತು ಸೋದರರೊಂದಿಗೆ ಇರುವ ಸಂದರ್ಭವನ್ನು ಎದುರು ನೋಡುತ್ತಿರುವೆ. 3,800 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ಯೋಜನೆಗಳ ಉದ್ಘಾಟನೆ ಅಥವಾ ಶಿಲಾನ್ಯಾಸ ನೆರವೇರಿಸಲಾಗುವುದು. ಈ ಮುಖ್ಯವಾದ ಯೋಜನೆಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿದ್ದಾಗಿವೆ” ಎಂದಿದ್ದಾರೆ.
ಇದನ್ನೂ ಓದಿ | Modi tour plan | ಮಂಗಳೂರಿನಲ್ಲಿ ಮೋದಿ ಓಡಾಟ, 150 ನಿಮಿಷಗಳ ಚಟುವಟಿಕೆಯ ಕ್ಷಣ ಕ್ಷಣದ ವಿವರ ಇಲ್ಲಿದೆ