ಮಂಗಳೂರು: ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿದೆ.
12-55 ಗಂಟೆಗೆ ಮಂಗಳೂರಿಗೆ ಆಗಮಿಸಲಿರುವ ಪಿಎಂ ನರೇಂದ್ರ ಮೋದಿ, ಮಂಗಳೂರು ಬಂದರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ 4.30 ಗಂಟೆಗೆ ದೆಹಲಿಗೆ ವಾಪಸಾಗಲಿದ್ದಾರೆ.
ಮೋದಿ ಆಗಮನ ಮೇಲ್ನೋಟಕ್ಕೆ ಅಭಿವೃದ್ಧಿ ಯೋಜನೆಗಳ ಚಾಲನೆಗೆ ಎಂಬಂತೆ ಕಂಡರೂ, ಇದು ಕರಾವಳಿ ಜಿಲ್ಲೆಗಳಲ್ಲಿ ಸಂಘಟನೆ ಇನ್ನಷ್ಟು ಚುರುಕುಗೊಳಿಸಲು ಹೂಡಿದ ತಂತ್ರವೆಂದೂ ವಿಶ್ಲೇಷಿಸಲಾಗುತ್ತಿದೆ. 2023ರ ಚುನಾವನೆಗೆ ಟ್ರೆಂಡ್ ಸೆಟ್ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದ ಕಡೆ ಮುಖ ಮಾಡಿದ್ದಾರೆ ಎಂದೂ ತಿಳಿಯಲಾಗಿದೆ.
ಇದನ್ನೂ ಓದಿ | Modi tour plan | ಮಂಗಳೂರಿನಲ್ಲಿ ಮೋದಿ ಓಡಾಟ, 150 ನಿಮಿಷಗಳ ಚಟುವಟಿಕೆಯ ಕ್ಷಣ ಕ್ಷಣದ ವಿವರ ಇಲ್ಲಿದೆ
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಬಿಜೆಪಿ 2018ರಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದರೆ ಹಲವಾರು ಹಿಂದೂ ಕಾರ್ಯಕರ್ತರ ಕೊಲೆಯಾಗಿರುವುದರ ಹಿನ್ನೆಲೆಯಲ್ಲಿ ಇಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಸರ್ಕಾರದ ವಿರುದ್ಧ, ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸರ್ಕಾರದ ನಿಷ್ಕ್ರಿಯತೆ ಎಂದು ಆಕ್ರೋಶ ತೋಡಿಕೊಂಡು, ಈ ಭಾಗದ ಜನಪ್ರತಿನಿಧಿಗಳ ವಿರುದ್ಧ ಕೋಪ ತೋರಿಸಿಕೊಂಡಿದ್ದರು.
ಹೀಗಾಗಿ ಮೋದಿಯವರು ಬರುತ್ತಿರುವುದರಿಂದ ಡ್ಯಾಮೇಜ್ ಕಂಟ್ರೋಲ್ ಲೆಕ್ಕಾಚಾರ ಮಾಡಿರುವ ಬಿಜೆಪಿ ನಾಯಕರು, ಕಾರ್ಯಕರ್ತರ ಜತೆ ನಾವಿದ್ದೇವೆ ಅನ್ನುವ ಸಂದೇಶವನ್ನು ಮೋದಿ ರವಾನೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ನಿನ್ನೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದು, ಇಂದು ನರೇಂದ್ರ ಮೋದಿ ಬರುತ್ತಿದ್ದಾರೆ. ಸೆಪ್ಟೆಂಬರ್ 8ಕ್ಕೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ 9ಕ್ಕೆ ಗೃಹ ಸಚಿವ ಅಮಿತ್ ಶಾ ಆಗಮನ ಸಾಧ್ಯತೆಯಿದೆ. ಇವೆಲ್ಲವೂ ಬಿಜೆಪಿ ಪರ ಟ್ರೆಂಡ್ ಸೆಟ್ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಕೇಸರಿ ಪಕ್ಷ ಇದೆ.
ಇದನ್ನೂ ಓದಿ | ಮೋದಿ in Mangaluru | ನಳಿನ್ ಕುಮಾರ್ ಕಟೀಲು ʼಪುನರ್‌ಪ್ರತಿಷ್ಠಾಪನೆʼ ಘೋಷಿಸುವರೇ ನಮೋ?