ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮಂಗಳೂರಿನಿಂದ ರಣಕಹಳೆ ಮೊಳಗಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್ 8 ರಂದು ರ‍್ಯಾಲಿಗೂ ಮುನ್ನವೇ ಚಾಲನೆ ಸಿಗುವ ಅಂದಾಜಿದೆ.
ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ನವಮಂಗಳೂರು ಬಂದರಿನಲ್ಲಿ ಸಾಗರಮಾಲಾ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಇದೇ ವೇಳೆ ಮಂಗಳೂರಿನಲ್ಲಿ ಬೃಹತ್ ರ‍್ಯಾಲಿಯೊಂದನ್ನು ನಡೆಸುವ ಉದ್ದೇಶವೂ ಇದೆ.
ನವಮಂಗಳೂರಿನಲ್ಲಿ ಅಧಿಕೃತ ಕಾರ್ಯಕ್ರಮದ ನಂತರ ಸಾರ್ವಜನಿಕ ಕಾರ್ಯಕ್ರಮವನ್ನೂ ನಡೆಸಲು ಚಿಂತನೆ ನಡೆಸಲಾಗಿದೆ. ಒಂದೆರಡು ದಿನದಲ್ಲಿ ಈ ಕುರಿತು ಅಂತಿಮ ತೀರ್ಮಾನವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಹಿಂದೆ ವಿವಿಧ ಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದಾಗಲೂ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಮೋದಿಯವರ ಸಾರ್ವಜನಿಕ ಕಾರ್ಯಕ್ರಮ, ಅದರಲ್ಲೂ ಮಂಗಳೂರಿನಲ್ಲಿ ಅದ್ಧೂರಿಯಾಗಿಯೇ ನಡೆಯಲಿದೆ. ಈ ಮೂಲಕವೇ ಚುನಾವಣೆಗೆ ಕಾರ್ಯಾರಂಭ ಮಾಡಬಹುದು. ಜತೆಗೆ, ಇತ್ತೀಚೆಗೆ ದಕ್ಷಿಣ ಕನ್ನಡದ ಬಿಜೆಪಿ ಕಾರ್ಯಕರ್ತರಲ್ಲಿರುವ ಅಸಮಾಧಾನಕ್ಕೂ ಪರಿಹಾರ ಸಿಕ್ಕಂತಾಗುತ್ತದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ | ಅಲುಗಾಡಿದ್ದು ಕಟೀಲ್ ಕಾರಲ್ಲ, BJP ರಾಜ್ಯಾಧ್ಯಕ್ಷರ ಸೀಟು: ಸಮಸ್ಯೆ ಪರಿಹಾರಕ್ಕೆ 3 ಆಯ್ಕೆಗಳು