ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ತಿರುಗಿಬಿದ್ದಿದ್ದು, ಗುರುವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಈ ಸಂದರ್ಭದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಸಮ್ಮುಖದಲ್ಲಿ ಹೈಡ್ರಾಮಾವನ್ನೇ ನಡೆಸಿದ್ದು, ಬೇಸತ್ತ ಬಿಎಸ್‌ವೈ ಯಾತ್ರೆಯನ್ನು ಮೊಟಕುಗೊಳಿಸಿ ಹೊರನಡೆದಿದ್ದಾರೆ.
ಮೂಡಿಗೆರೆ ಪಟ್ಟಣದ ಬಸ್ಟ್ಯಾಂಡ್ ವೃತ್ತದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಬೇಕಿತ್ತು. ಬಿಎಸ್‌ವೈ ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಸಹ ಭಾಗಿಯಾಗಿದ್ದರು. ಆದರೆ, ಮೂಡಿಗೆರೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರ ಎರಡು ಬಣ ಪ್ರತಿಭಟನೆ ನಡೆಸಿವೆ. ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧವಾಗಿ ಒಂದು ಗುಂಪಿನವರು ನಿಂತುಕೊಂಡಿದ್ದು, ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಕೂಗಾಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಪರವಾಗಿ ಇನ್ನೊಂದು ಗುಂಪಿನವರು ಗಲಾಟೆ ಮಾಡಿದ್ದು, ಅವರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟುಹಿಡಿದಿದ್ದರು.
ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯ ವೇದಿಕೆಯಲ್ಲಿ ರಿಷಬ್ ಕನ್ನಡ ಭಾಷಣ: ವಿಡಿಯೊ ವೈರಲ್
ಹೊರ ನಡೆದ ಬಿಎಸ್‌ವೈ
ರೋಡ್ ಶೋ ನಡೆಸಲು ಬಿ.ಎಸ್. ಯಡಿಯೂರಪ್ಪ ಆಗಮಿಸಿದ್ದರೆ, ಬಿಜೆಪಿ ಕಾರ್ಯಕರ್ತರ ಗಲಾಟೆಯೇ ಮುಗಿದಿರಲಿಲ್ಲ. ನೂರಾರು ಕಾರ್ಯಕರ್ತರಿಂದ ನಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದು, ಕುಮಾರಸ್ವಾಮಿ ಬೇಡವೇ ಬೇಡ ಎಂದು ಘೋಷಣೆ ಕೂಗಿದ್ದಾರೆ. ಹೊಸ ಮುಖಕ್ಕೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದ್ದು, 1000ಕ್ಕೂ ಅಧಿಕ ಜನರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಬೇರೆ ಕಡೆಗೆ ಪೊಲೀಸರು ಕರೆದೊಯ್ದರು. ಒಂದು ಹಂತದಲ್ಲಿ ಸಿ.ಟಿ. ರವಿ, ಎಂಎಲ್‌ಸಿ ಪ್ರಾಣೇಶ್ ಅವರನ್ನೇ ಕಾರ್ಯಕರ್ತರು ತಳ್ಳಿದ್ದಾರೆ.
ಆದರೆ, ರ‍್ಯಾಲಿ ನಡೆಸಲು ಕಾರ್ಯಕರ್ತರಿಗಾಗಿ ಬಿಎಸ್‌ವೈ ಬರೋಬ್ಬರಿ ಅರ್ಧ ಗಂಟೆ ರಸ್ತೆಯಲ್ಲಿ ಕಾದರೂ ಗಲಾಟೆ ನಿಲ್ಲಲಿಲ್ಲ. ಎರಡು ಗುಂಪುಗಳ ನಡುವೆ ತಳ್ಳಾಟ, ನೂಕಾಟ ನೋಡಿ ಅಸಮಾಧಾನಗೊಂಡ ಯಡಿಯೂರಪ್ಪ, ರೋಡ್ ಶೋವನ್ನು ರದ್ದುಗೊಳಿಸಿ ಹೆಲಿಪ್ಯಾಡ್‌ನತ್ತ ಹೊರಟರು.
ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು. ಈ ರೀತಿ ಮುಖಂಡರು ಬಂದಾಗ ಗಲಾಟೆ ಮಾಡುವುದು ಎಷ್ಟು ಸರಿ? ನೀವೆಲ್ಲರೂ ಸೇರಿ ಪಕ್ಷದ ಮರ್ಯಾದೆಯನ್ನು ಕಳೆಯುತ್ತಿದ್ದೀರ ಎಂದು ಸಿ.ಟಿ. ರವಿ ಕಿಡಿಕಾರಿದರು.
ಇದನ್ನೂ ಓದಿ: Karnataka Congress: ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆಯ ಸಮಯ: ಸಮಾಧಾನ ಮಾಡಿದರೂ ಬಗೆಹರಿಯದ ಟಿಕೆಟ್ ಕಗ್ಗಂಟು
ಕುಮಾರಸ್ವಾಮಿ ಬೇಡವೆಂದು ಸಭೆ
ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ, ಬೇಡವೇ ಬೇಡ ಕುಮಾರಸ್ವಾಮಿ ಎಂಬ ಬ್ಯಾನರ್ ಅಡಿ ಮೂಡಿಗೆರೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ (ಮಾ. 16) ಬಿಜೆಪಿ ಕಾರ್ಯಕರ್ತರ ಒಂದು ಗುಂಪು ಸಭೆ ನಡೆಸಿದ್ದಾರೆ. ಹಾಲಿ ಶಾಸಕರನ್ನೇ ಹೊರಗಿಟ್ಟು ಸಭೆ ನಡೆಸಿದ್ದಾರೆ. ಬಿಜೆಪಿ ಶಲ್ಯ ಧರಸಿ ಸಭೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು, ಬಿಜೆಪಿ ಬಜಾವೋ, ಕುಮಾರಸ್ವಾಮಿ ಹಠಾವೋ ಎಂದು ಘೋಷಣೆ ಕೂಗಿದ್ದಾರೆ.