Site icon Vistara News

ದೇವಸ್ಥಾನಕ್ಕೆ ಮಾಂಸ ಸೇವಿಸಿ ಹೋಗ್ತಾರ ಸಿದ್ದರಾಮಯ್ಯ ಹೆಂಡತಿ?: ಸಂಸದ ಪ್ರತಾಪ್‌ ಸಿಂಹ ಪ್ರಶ್ನೆ

Pratap simha

ಮೈಸೂರು: ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಬಾರದು ಎಂದು ಯಾರು ಹೇಳಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ, ದೇವಸ್ಥಾನಕ್ಕೆ ಮಾಂಸಾಹಾರ ಸೇವನೆ ಮಾಡಿಕೊಂಡು ಹೋಗುತ್ತಾರೆಯೇ ಎಂದು ತಮ್ಮ ಪತ್ನಿಯನ್ನು ಕೇಳಿಕೊಳ್ಳಲಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ʻವಿಸ್ತಾರ ನ್ಯೂಸ್‌ʼ ಜತೆಗೆ ಮಾತನಾಡಿದ ಪ್ರತಾಪ್‌ ಸಿಂಹ, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಹೊಡೆದಾಗಲೇ ಇದನ್ನು ನಮ್ಮ ಪಕ್ಷದ ಹಿರಿಯ ನಾಯಕರುಗಳು, ಮುಖ್ಯಮಂತ್ರಿಯವರು ಖಂಡಿಸಿದ್ದಾರೆ. ಇದರ ನಂತರವೂ ಎಸ್‌ಪಿ ಆಫೀಸ್‌ ಮುತ್ತಿಗೆ, ಪಾದಯಾತ್ರೆ ಎಂದು ಹೇಳುತ್ತಿದ್ದಾರೆ. ಈ ಮೂಲಕ ಕೊಡಗಿನ ಮೇಲೆ ಧ್ವೇಷ ಕಾರುತ್ತಿದ್ದಾರ? ಕೊಡಗಿನ ಜನರು ಟಿಪ್ಪು ಸುಲ್ತಾನನಿಗೇ ಹೆದರಲಿಲ್ಲ, ಇನ್ನು ಸಿದ್ದು ಸುಲ್ತಾನನಿಗೆ ಹೆದರುತ್ತಾರ? ಕರ್ನಾಟಕದ ಜನರಷ್ಟೆ ಏಕೆ? ನೆರೆಯ ಕೇರಳದಲ್ಲಿರುವ, ನಿಮ್ಮ ಸಾಕು ಮಕ್ಕಳು ಎಸ್‌ಡಿಪಿಐನವರನ್ನು ಕರೆದುಕೊಂಡು ಬಂದು ಕಲ್ಲು ಹೊಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗಿಗೆ ಹೊರಗಿನಿಂದ ಜನರನ್ನು ಕರೆದುಕೊಂಡು ಬರುವ ಅಗತ್ಯವಿಲ್ಲ. ಕೊಡಗಿನ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ. ಈ ಗೊಡ್ಡು ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ. ಕೊಡಗಿನ ಮೇಲೆ ಧ್ವೇಷ ಸಾಧಿಸಲು ಬಂದಿದ್ದೀರಿ. ಈ ಹಿಂದೆ ಯಾರೂ ಕೇಳದೇ ಇದ್ದರೂ ಟಿಪ್ಪು ಜಯಂತಿ ಮಾಡಿದಿರಿ, ಕುಟ್ಟಪ್ಪ ಹತ್ಯೆಗೆ ಕಾರಣರಾದಿರಿ. ಬಸವಣ್ಣ ದೇವಸ್ಥಾನಕ್ಕೆ ಮಾಂಸ ಸೇವಿಸಿ ತೆರಳಿ ನೋವುಂಟುಮಾಡುತ್ತಿದ್ದೀರಿ ಎಂದರು.

ಮೊಟ್ಟೆ ವಿಚಾರ ಮುಚ್ಚಿ ಹಾಕಲು ಕೋಳಿ ವಿಚಾರ ತಂದಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಬಸವ ಅನುಯಾಯಿಗಳನ್ನು ಒಡೆಯಲು ಈ ಹಿಂದೆ ಮುಂದಾಗಿದ್ದರು. ಇತ್ತೀಚೆಗೆ ರಂಭಾಪುರಿ ಸ್ವಾಮೀಜಿಯವರ ಬಳಿ ಹೋಗಿ ಕ್ಷಮೆ ಕೇಳಿ, ಹೊರಗೆ ಬಂದು ಹಾಗೆ ಹೇಳಿಯೇ ಇಲ್ಲ ಎಂದರು. ಈಗ, ಬಸವೇಶ್ವರರ ಅನುಯಾಯಿಗಳ ಆರಾಧ್ಯ ದೈವ ಬಸವೇಶ್ವರರ ಗುಡಿಗೆ ಮಾಂಸ ಸೇವಿಸಿ ತೆರಳಿ ಮತ್ತೆ ಸಮುದಾಯಕ್ಕೆ ನೋವುಂಟು ಮಾಡುತ್ತಿದ್ದಾರೆ.

ದೇವಸ್ಥಾನಕ್ಕೆ ಮಾಂಸ ಸೇವಿಸಿ ತೆರಳಿದರೆ ಏನು ತಪ್ಪು ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ, ಚಾಮುಂಡೇಶ್ವರಿ ಬೆಟ್ಟಕ್ಕೆ ಮಾಂಸ ತಿಂದುಕೊಂಡು ಹೋಗುತ್ತಾರೆಯೋ ಅಥವಾ ಮಡಿಯಿಂದ ಹೋಗುತ್ತಾರೆಯೋ ಎಂದು ನಿಮ್ಮ ಶ್ರೀಮತಿಯವರನ್ನು ಕೇಳಿ. ಮೈಸೂರಿನ ಗ್ರಾಮ ಗ್ರಾಮಗಳಲ್ಲೂ ಚಾಮುಂಡಿ ಉತ್ಸವ ನಡೆಯುತ್ತದೆ. ಮೊದಲಿಗೆ ಚಾಮುಂಡಿಗೆ ಮೊಸರನ್ನ ನೈವೇದ್ಯ ಮಾಡಿ ಆಮೇಲೆ ಎಲ್ಲರೂ ಮಾಂಸಾಹಾರ ಸೇವಿಸುತ್ತಾರೆ. ಇದೇ ಮೈಸೂರಿಗರು ಸ್ನಾನ ಮಾಡಿ ಸ್ವಚ್ಛವಾಗಿ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ನಿಮ್ಮ ಊರಾದ ಸಿದ್ದರಾಮನ ಹುಂಡಿಯಲ್ಲಿ ಜಾತ್ರೆ ಮಾಡಿದಾಗಲೂ ಸಸ್ಯಾಹಾರವನ್ನೇ ಮಾಡಲಾಗಿತ್ತು ಏಕೆ? ಎಂದು ಪ್ರಶ್ನಿಸಿದರು.

ಮಾಂಸಾಹಾರ ಕುರಿತು ಮಾತನಾಡುವ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಜಮೀರ್‌ ಅವರಿಗೆ ಇದೇ ರೀತಿ ಹೇಳಲು ಆಗುತ್ತದೆಯೇ? ಕೇವಲ ಹಿಂದುಗಳ ಆಚಾರ ವಿಚಾರಗಳನ್ನು ಮೌಢ್ಯ ಎಂದು ಹೇಳಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೆ ಎಂದು ಆರೋಪಿಸಿದರು.

ಇದನ್ನೂ ಓದಿ | ಪೂರ್ಣಗೊಳ್ಳದ ಬೆಂಗಳೂರು-ನಿಡಘಟ್ಟ ಮಾರ್ಗದ ಕಾಮಗಾರಿ; ಸಂಸದ ಪ್ರತಾಪ್‌ ಸಿಂಹ ಕ್ಷಮೆಯಾಚನೆ

Exit mobile version