ಮೈಸೂರು: ಮೈಸೂರು-ಊಟಿ ರಸ್ತೆಯಲ್ಲಿ ಕೆಲವು ಕಡೆ ಬಸ್ ಶೆಲ್ಟರ್ ಮೇಲೆ ನಿರ್ಮಿಸಿರುವ ಗುಂಬಜ್‌ಗಳನ್ನು ಎರಡು ದಿನದೊಳಗೆ ತೆರವುಗೊಳಿಸದಿದ್ದರೆ ತಾನೇ ಒಡೆದು ಹಾಕುವುದಾಗಿ ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದ್ದಾರೆ.
ʻʻಗುಂಬಜ್ ತೆರವಿಗೆ ನಾನು ನೀಡಿದ ಎರಡು ದಿನದ ಗಡುವು ಮುಗಿದಿದೆ. ಇನ್ನು ಎರಡು ದಿನ ಬಾಕಿ ಇದೆ. ಎರಡು ದಿನದಲ್ಲಿ ತೆರವು ಮಾಡದೆ ಇದ್ದರೆ ನಾನು ಹೇಳಿದಂತೆ ನಾನೇ ತೆರವು ಮಾಡುತ್ತೇನೆʼʼ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ʻʻʻಬಸ್ ಶೆಲ್ಟರ್ ತೆರವು ಮಾಡುವುದಿಲ್ಲ. ಮೇಲಿನ ಗುಂಬಜ್ ಮಾತ್ರ ತೆರವು ಮಾಡುತ್ತೇನೆʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಗುಂಬಜ್‌ಗೂ ಗೋಪುರಕ್ಕೂ ವ್ಯತ್ಯಾಸ ಇಲ್ವಾ?
ʻʻನಾನು ಹೇಳಿಕೆ ಕೊಡುವ ಮುನ್ನ ಬರೀ ಗುಂಬಜ್ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು?ʼʼ ಎಂದು ಪ್ರಶ್ನಿಸಿರುವ ಪ್ರತಾಪ್ ಸಿಂಹ, ಅರಮನೆ ಗೋಪುರಕ್ಕೂ ಗುಂಬಜ್‌ಗೂ ಕೆಲವರು ಹೋಲಿಕೆ ಮಾಡುವುದನ್ನು ಆಕ್ಷೇಪಿಸಿದರು.
ʻʻಅರಮನೆ ಗೋಪುರಕ್ಕೂ ಗುಂಬಜ್‌ಗೂ ಕೆಲವರು ಹೋಲಿಕೆ ಮಾಡು ಮುನ್ನ ವಾಸ್ತುಶಿಲ್ಪ ಓದಿಕೊಳ್ಳಿ. ಮೈಸೂರು ಅರಮನೆ ಮೇಲಿನ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್ ಗೂ ವ್ಯತ್ಯಾಸ ಇಲ್ವ? ಅರಮನೆ ಗೋಪುರ ಇಂಡೋ- ಸೆರಾಸನಿಕ್ ವಾಸ್ತುಶಿಲ್ಪ ಹೊಂದಿದೆ. ಬಸ್ ಸ್ಟ್ಯಾಂಡ್ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ ಹೇಳಿ?ʼʼ ಎಂದಿದ್ದಾರೆ.
ʻʻಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದರೆ ಅರ್ಧ ಚಂದ್ರವನ್ನು ಕಟ್ಟಿ ಮಸೀದಿ ಮಾಡಿ ಬಿಡುತ್ತಿದ್ದರು. ಬಸ್ ಸ್ಟ್ಯಾಂಡ್ ಕಟ್ಟಿದ ಗುತ್ತಿಗೆದಾರ ತನ್ನ ಮನೆ ಮೇಲೆ ಬೇಕಾದರೆ ಗುಂಬಜ್, ಮಿನಾರ್ ಕಟ್ಟಿಕೊಳ್ಳಲಿʼʼ ಎಂದು ಪ್ರತಾಪ್ ಗುಡುಗಿದ್ದಾರೆ.
ಶಾಸಕ ರಾಮದಾಸ್ ಮೇಲೂ ಕಿಡಿ
ಈ ನಡುವೆ ಘಟನೆ ಸಂಬಂಧ ಮೌನ ವಹಿಸಿದ್ದಾರೆ ಎಂದು ಶಾಸಕ ರಾಮದಾಸ್ ಅವರ ಮೇಲೂ ಸಣ್ಣಗೆ ಕಿಡಿ ಕಾರಿದ್ದಾರೆ. ʻʻಶಾಸಕ ರಾಮದಾಸ್ ಅವರು ಅರಮನೆ ಮಾದರಿಯಲ್ಲಿ 20 ಬಸ್ ಸ್ಟ್ಯಾಂಡ್ ಕಟ್ಟಲಿ. ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ರಾಮದಾಸ್ ಅವರು ಮೌನ ವಹಿಸಿದ್ದಾರೆ. ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ ಅಂತ. ಅವರು ಹಿಂದುತ್ವದ ಹಿನ್ನೆಲೆಯಿಂದ ಬಂದವರು. ಬಹುಶಃ ಗುತ್ತಿಗೆದಾರ ಅವರ ದಾರಿ ತಪ್ಪಿಸಿದ್ದಾರೆಯೇ ಎಂದು ನನಗೆ ಗೊತ್ತಿಲ್ಲʼʼ ಎಂದು ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ | ಟಿಪ್ಪು ವಿವಾದ| ಮೈಸೂರಿನ ಬಸ್ ನಿಲ್ದಾಣದ ಗುಂಬಜ್ ಮೇಲೆ ರಾತ್ರೋರಾತ್ರಿ ಕಳಶ ನಿರ್ಮಾಣ!