Site icon Vistara News

‘ಮಿಸ್ಟರ್​​ ಮತಪೆಟ್ಟಿಗೆ’ ನವದೆಹಲಿಗೆ ಪ್ರಯಾಣಿಸಿದರು! ಇದು ರಾಷ್ಟ್ರಪತಿ ಚುನಾವಣೆ ಸ್ವಾರಸ್ಯ

president election ballot box 1

ಬೆಂಗಳೂರು: ದೇಶಾದ್ಯಂತ ಸೋಮವಾರ ರಾಷ್ಟ್ರಪತಿ ಚುನಾವಣೆ ಮತದಾನ ನೆರವೇರಿದೆ. ಶೇ.99.18 ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾರಲ್ಲಿ ಯಾರು ರಾಷ್ಟ್ರಪತಿ ಎನ್ನುವುದು ಜುಲೈ 21ರಂದು ತಿಳಿಯಲಿದೆ. ಆದರೆ ಇದೆಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಾಗಿರುವ ಮತಪೆಟ್ಟಿಗೆಯನ್ನು ವಸ್ತುವಿನ ರೀತಿಯಲ್ಲ, ಬದಲಿಗೆ ವ್ಯಕ್ತಿಯ ರೀತಿ ಭಾವಿಸಲಾಗುತ್ತದೆ!

ಕರ್ನಾಟಕದ ವಿಧಾನಸೌಧದಲ್ಲಿ ಮತ ಚಲಾವಣೆ ಆದ ನಂತರ ಮತಪೆಟ್ಟಿಗೆಯನ್ನು ನವದೆಹಲಿಗೆ ಕೊಂಡೊಯ್ಯಲಾಯಿತು. ಈ ಪೆಟ್ಟಿಗೆಯ ಹೆಸರಿನಲ್ಲಿ ಒಂದು ಪ್ರಯಾಣಿಕರ ಟಿಕೆಟ್​​ ಖರೀದಿಸಲಾಗಿತ್ತು.

ಕರ್ನಾಟಕ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಿಂದ ವಿಮಾನದ ಮೂಲಕ ಮತಪೆಟ್ಟಿಗೆ ತರುವಾಗ ‘Mr Ballot box’ ಎಂಬ ಹೆಸರಿನಲ್ಲಿ ಟಿಕೆಟ್​​ ಖರೀದಿಸಲಾಗಿತ್ತು. ಅಷ್ಟೆ ಅಲ್ಲದೆ, ವಿಮಾನದ ಮುಂದಿನ ಸಾಲಿನಲ್ಲೆ ಈ ಸೀಟ್ ಮೀಸಲಿತ್ತು. ಈ ಸೀಟಿನ ಪಕ್ಕದಲ್ಲಿ ಚುನಾವಣಾಧಿಕಾರಿಯೇ ಕುಳಿತಿದ್ದರು. ಪ್ರಯಾಣಿಕರು ಧರಿಸುವಂತೆಯೇ ಮತಪೆಟ್ಟಿಗೆಗೂ ಸೀಟ್​​​ಬೆಲ್ಟ್​​​ ಧರಿಸಲಾಗಿತ್ತು.

ಇದನ್ನೂ ಓದಿ | Murmu vs Sinha | ರಾಷ್ಟ್ರಪತಿ ಚುನಾವಣೆ ಮತದಾನ ಅಂತ್ಯ; ಸಂಸತ್ತಿನಲ್ಲಿ ಶೇ.99.18 ರಷ್ಟು ಮತ ಚಲಾವಣೆ

ಮತಪೆಟ್ಟಿಗೆ ಜತೆಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ

ರಾಷ್ಟ್ರಪತಿ ಚುನಾವಣೆಗೆ ಪ್ರತ್ಯೇಕ ನಿಯಮಗಳಿವೆ. ಅವುಗಳಲ್ಲಿ ಇದೂ ಒಂದು. ನವದೆಹಲಿಯಿಂದ ಬೆಂಗಳೂರು ಮತ್ತಿತರ ರಾಜ್ಯಗಳಿಗೆ ತರುವಾಗಲೂ ಇದೇ ರೀತಿ ‘Mr Ballot box’ ಎಂದು ಟಿಕೆಟ್​ ಖರೀದಿಸಲಾಗಿತ್ತು. ಎರಡೂ ಕಡೆಯ ಟಿಕೆಟ್​​ಗಳನ್ನೂ ಒಟ್ಟಿಗೆ ಬುಕ್​​ ಮಾಡಲಾಗಿತ್ತು.

ವಿಧಾನಸೌಧದಲ್ಲಿ ಮತದಾನ ಮುಕ್ತಾಯವಾದ ಕೂಡಲೆ ಎಲ್ಲ ಅಧಿಕಾರಿಗಳು ಸಮ್ಮುಖದಲ್ಲಿ ಮತಪೆಟ್ಟಿಗೆಯನ್ನು ಸೀಲ್​​ ಮಾಡಲಾಯಿತು. ನಂತರ ರಾತ್ರಿ 9.20ರ ವಿಮಾನಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ಮತಪೆಟ್ಟಿಗೆ ಹಾಗೂ ಇನ್ನಿತರೆ ಚುನಾವಣಾ ವಸ್ತುಗಳನ್ನು ಒಂದು ಸೀಟ್​​ನಲ್ಲಿ ಇರಿಸಿದ ನಂತರ ಅದರ ಪಕ್ಕದ ಸೀಟ್​​ನಲ್ಲೆ ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ವಿಶಾಲಾಕ್ಷಿ ಆಸೀನರಾದರು. ಈ ಮೂಲಕ ಪ್ಯಾಸೆಂಜರ್​​ ಸೀಟ್​​ನಲ್ಲಿ ಕುಳಿತು ಮತಪೆಟ್ಟಿಗೆ ನವದೆಹಲಿ ತಲುಪಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ 727 ಸಂಸದರು, 9 ಶಾಸಕರು ಸೇರಿ ಒಟ್ಟು 736 ಮತದಾರರಿಗೆ ಸಂಸತ್ತಿನಲ್ಲಿ ಮತಚಲಾಯಿಸಲು ಅನುಮತಿ ನೀಡಲಾಗಿತ್ತು. ಅದರಲ್ಲಿ 721 ಸಂಸದರು, 9 ಶಾಸಕರು ಸೇರಿ ಒಟ್ಟು 730 ಮತದಾರರು ಸಂಸತ್ತಿನಲ್ಲಿ ಮತ ಚಲಾಯಿಸಿದ್ದಾರೆ. ಬಿಜೆಪಿಯ ಸನ್ನಿ ಡಿಯೋಲ್‌ ಸೇರಿ ಒಟ್ಟು 6 ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿಲ್ಲ ಎಂದು ಹೇಳಲಾಗಿದೆ. ಬೆಳಗ್ಗೆ 10ಗಂಟೆಗೆ ಮತದಾನ ಪ್ರಾರಂಭವಾಗುತ್ತಿದ್ದಂತೆ ಮೊಟ್ಟಮೊದಲು ಪ್ರಧಾನಿ ನರೇಂದ್ರ ಮೋದಿ ಮತ ಹಾಕಿದರು. ಬಳಿಕ ಉಳಿದೆಲ್ಲ ಸಂಸದರು/ಶಾಸಕರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. 5ಗಂಟೆಗೆ ಸರಿಯಾಗಿ ಮತದಾನ ಮುಕ್ತಾಯವಾಗಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ | ರಾಷ್ಟ್ರಪತಿ ಚುನಾವಣೆ: ವೀಲ್‌ ಚೇರ್‌ನಲ್ಲಿ ಬಂದು ಮತದಾನ ಮಾಡಿದ ಇಬ್ಬರು ಮಾಜಿ ಪ್ರಧಾನಿಗಳು

Exit mobile version