Site icon Vistara News

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

CT Ravi

ಬೆಂಗಳೂರು: ಮುಡಾ ನಿವೇಶನ ಪ್ರಕರಣಕ್ಕೆ (MUDA Site Scam) ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸದನದಲ್ಲಿ ಉತ್ತರ ಕೊಡದಿರುವುದು, ಚರ್ಚೆಗೆ ಅವಕಾಶ ನೀಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ (CT Ravi) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತ ಹಾಗೂ ಸುದೀರ್ಘ ಪತ್ರ ಬರೆಯುವ ಮೂಲಕ ಮುಡಾ ಪ್ರಕರಣವನ್ನು ವಿಸ್ತೃತವಾಗಿ ಬಹಿರಂಗಗೊಳಿಸಿದ್ದಾರೆ. ಹಾಗಾದರೆ, ಸಿ.ಟಿ.ರವಿ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಸಾರಾಂಶ.

ಮಾನ್ಯರೆ…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರಾಯಿತ್ವ ಇರುವ ಆಡಳಿತ ಪಕ್ಷ, ಪ್ರತಿಪಕ್ಷಗಳ ಆರೋಪ, ಪ್ರಶ್ನೆಗಳಿಗೆ ಉತ್ತರಿಸುವ ಅತ್ಯುನ್ನತ ವೇದಿಕೆ ವಿಧಾನ ಮಂಡಲವೇ ಅಲ್ಲವೇ. ಅಲ್ಲಿ ಪ್ರತಿಪಕ್ಷಗಳಿಗೆ ಆರೋಪಿಸಲು, ಪ್ರಶ್ನಿಸಲು ಅವಕಾಶ ಕೊಡದೇ ಸದನದ ಹೊರಗೆ ಬಂದು ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಮತ್ತು ತಮ್ಮ ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಅರ್ಧ ಸತ್ಯವನ್ನು ಮಾತ್ರ ಹೇಳಿದ್ದೀರಿ. ಪೂರ್ಣ ಸತ್ಯವನ್ನು ಪ್ರಜಾಪ್ರಭುತ್ವದ ಪ್ರಭುಗಳಿಗೆ ಮುಟ್ಟಿಸಲು ಮಾಧ್ಯಮದ ಮೂಲಕ ನಿಮಗೆ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

ಮುಡಾ ಹಗರಣ

1935ರಲ್ಲಿ ಅಂದಿನ ಮೈಸೂರು ಸರ್ಕಾರ ಕೆಸರೆಗದ್ದೆ ಗ್ರಾಮದ ಸರ್ವೆ ನಂ. 462, 464 ರ ಜಮೀನನ್ನು ಹರಾಜು ಮಾಡುವಾಗ ಪರಿಶಿಷ್ಟ-1 ಎಂದು ಹರಾಜು ಮಾಡಿ ಕೇವಲ ಒಂದು ರೂ. ಕಿಮ್ಮತ್ತು ಕಟ್ಟಿಸಿಕೊಂಡು ಕ್ರಮವಾಗಿ 4 ಎಕರೆ 37 ಗುಂಟೆ ಮತ್ತು 3 ಎಕರೆ 16 ಗುಂಟೆ ಒಟ್ಟು 8 ಎಕರೆಗೂ ಹೆಚ್ಚು ಜಮೀನನ್ನು ಜವರ ಉರುಫ್ ನಿಂಗ ಎಂಬುವವರಿಗೆ ನೀಡಿದೆ. ಪರಿಶಿಷ್ಟ -1 ಅಂದರೆ ವಿಶೇಷವಾಗಿ ಪರಿಶಿಷ್ಟ ಜನಾಂಗಕ್ಕೆ ಕಡಿಮೆ ಕಿಮ್ಮತ್ತಿನಲ್ಲಿ ನೀಡಿರುವುದು ಇದು ಪಿಟಿಸಿಎಲ್ ಆಕ್ಟ್ ವ್ಯಾಪ್ತಿಗೆ ಬರುವುದಿಲ್ಲವೇ?

CT Ravi

1968 ರಲ್ಲಿ ಜವರ ಉರುಫ್ ನಿಂಗ ಅವರ ಮೂರು ಮಕ್ಕಳಲ್ಲಿ ಇಬ್ಬರು ಮಕ್ಕಳಾದ ಮಲ್ಲಯ್ಯ ಮತ್ತು ದೇವರಾಜು ಇವರು 300 ರೂ.ಗಳಿಗೆ ಮತ್ತೊಬ್ಬ ಸಹೋದರ ಮೈಲಾರಯ್ಯನವರಿಗೆ ಸರ್ವೆ ನಂ. 464, 462ರ ಜಮೀನಿನ ಹಕ್ಕು ಖುಲಾಸೆ ಪತ್ರ ನೋಂದಣಿ ಇಲಾಖೆ ಮುಖಾಂತರವೇ ನೋಂದಣಿ ಮಾಡಿಕೊಟ್ಟಿರುವುದು ಸತ್ಯವಲ್ಲವೇ? ಇದಕ್ಕೆ ಸಂಬಂಧಿಸಿದಂತೆ ಎಂ.ಆರ್. ದಾಖಲೆಗಳನ್ನು ಪರಿಶೀಲಿಸಬಹುದಾಗಿದ್ದು ಜಮೀನಿನ ವಾರಸುದಾರರು ಮೈಲಾರಯ್ಯ ಮತ್ತು ಅವರ ಕುಟುಂಬಕ್ಕೆ ಸೇರಿರುವುದಾಗಿತ್ತದೆ.

1992 ರಲ್ಲಿ ಮುಡಾ 4/1 ನೋಟಿಫಿಕೇಶನ್ ಆಗಿದ್ದು ನಂತರ 1997 ರ ಸಾಲಿನಲ್ಲಿ 6/1 ನೋಟಿಫಿಕೇಶನ್ ಆಗಿರುವುದು ಸತ್ಯವಲ್ಲವೇ? ನೀವು ವಿಲೇಜ್ ಮ್ಯಾಪ್ ತೋರಿಸಿ ಈ ಜಮೀನು ಗ್ರಾಮದ ಅಂಚಿನಲ್ಲಿ ಬರುತ್ತದೆ ಎಂದು ಅರ್ಧಸತ್ಯವನ್ನು ಹೇಳಿದ್ದೀರಿ, ಆದರೆ ಲೇಔಟ್ ಪ್ಲಾನ್‌ನಲ್ಲಿ ಲೇಔಟ್‌ನ ಮಧ್ಯದಲ್ಲೇ ಈ ಜಮೀನು ಬಂದರೂ ತಪ್ಪು ಮಾಹಿತಿ ನೀಡಿ ಡಿ ನೋಟಿಫಿಕೇಶನ್ ಮಾಡಲಾಗಿದೆ. ಆ ಸಂದರ್ಭದಲ್ಲಿ ತಾವು ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ? ಆರ್.ಟಿ.ಸಿ. ಸ್ವಾಧೀನದ ಕಾಲಂನಲ್ಲಿ ಸರ್ವೇ ನಂ. 464 ಮುಡಾ ಎಂದಿರುವುದು ಸತ್ಯವಲ್ಲವೇ?

1999ರಿಂದ 2003ರವರೆಗೂ ಮುಡಾದವರು ಇಂಡೀಕರಣ ಮಾಡಿಸಿದ್ದು, ಅದರಲ್ಲಿ ಭೂ ಸ್ವಾಧೀನದಾರರು ಮೂಡಾ ಎಂದೇ ಇರುತ್ತದೆ. 2003 ರಲ್ಲಿ 35 ವರ್ಷಗಳ ಹಿಂದೆ ಮರಣ ಹೊಂದಿದ ಜವರ ಉರುಫ್ ನಿಂಗ ಇವರ ಹೆಸರಿಗೆ ಮರುಸ್ಥಾಪನೆ ಮಾಡಿಸಿ ನಂತರ ದೇವರಾಜುರವರ ಹೆಸರಿಗೆ ವರ್ಗಾವಣೆ ಮಾಡಿಸಿರುತ್ತಾರೆ. 2004 ಮತ್ತು 2005ರ ಸಾಲಿನ ಆರ್.ಟಿ.ಸಿ.ಯಲ್ಲಿ ಮಾತ್ರ ಕ್ರಮವಾಗಿ ದೇವರಾಜ ಮತ್ತು ಮಲ್ಲಿಕಾರ್ಜುನಸ್ವಾಮಿಯವರ ಹೆಸರು
ಇದೆ. ಈ ಸಂದರ್ಭದಲ್ಲಿಯೂ ತಾವು ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ?

CT Ravi

2006 ರಿಂದ ನಿರಂತರವಾಗಿ ಇಂದಿನವರೆಗೂ ಆರ್.ಟಿ.ಸಿ.ಯಲ್ಲಿ ಭೂಸ್ವಾಧೀನದಾರರ ಹೆಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ಇರುವುದು ಸತ್ಯವಲ್ಲವೇ? 2003 ರಿಂದಲೇ ಈ ಜಾಗದ ನಿವೇಶನ ಹಂಚಿಕೆಯಾಗಿ 12 ಕ್ಕೂ ಹೆಚ್ಚು ಜನರಿಗೆ ನಿವೇಶನ ಹಂಚಿರುವುದು ಸತ್ಯವಲ್ಲವೇ?

ಟೆಂಡರ್‌, ನಕ್ಷೆ ಪರಿಶೀಲಿಸಿ

ದಿನಾಂಕ-27-4-2001ರ ಕಂಟ್ರಾಕ್ಟ್ ಅಗ್ರಿಮೆಂಟ್‌ನಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದೇವನೂರು ಬಡಾವಣೆ ಅಭಿವೃದ್ಧಿ ಪಡಿಸಲು ಎಲ್ & ಟಿ ಕಂಪೆನಿಗೆ ಗುತ್ತಿಗೆ ನೀಡಿದ್ದು, ಟೆಂಡರ್ ಮೊತ್ತ 11,68,86,652/-ರೂಗಳಾಗಿದ್ದು ಕಾಮಗಾರಿ ಪ್ರಾರಂಭದ ದಿನಾಂಕ-18-5-2001 ಆಗಿದ್ದು ಕಾಮಗಾರಿ ಮುಕ್ತಾಯದ ದಿನಾಂಕ -17-5-2003 ಆಗಿರುತ್ತದೆ. ಅಂದರೆ ನಿಮ್ಮ ಭಾವಮೈದುವ ಜಮೀನು ಖರೀದಿಸುವ ಮೊದಲೇ ಸರ್ವೇ ನಂ. 464 ರ 3 ಎಕರೆ 16 ಗುಂಟೆ ಜಮೀನಿನಲ್ಲಿ ರಸ್ತೆ, ಪಾರ್ಕು, ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿರುವುದು ಸತ್ಯವಲ್ಲವೇ? ಇದಕ್ಕೆ ಸಂಬಂಧಿಸಿದಂತೆ ಬಡಾವಣೆ ನಕ್ಷೆ, ಕಾಮಗಾರಿ ಟೆಂಡರ್, ಕಾಮಗಾರಿ ಗುತ್ತಿಗೆ ಪರಿಶೀಲಿಸಬಹುದು.

ನಿಮ್ಮ ಭಾವಮೈದುನ ಖರೀದಿಸುವುದಕ್ಕೆ ಮುಂಚಿತವಾಗಿಯೇ ಅಭಿವೃದ್ಧಿಗೊಂಡು ನಿವೇಶನ ಹಂಚಿಕೆಯಾದಂತಹ ಸರ್ವೆ ನಂ. 464 ರ 3 ಎಕರೆ 16 ಗುಂಟೆ 2004 ಕೃಷಿ ಜಮೀನಾಗಿ ಕಾಣಿಸಿದ್ದು ಹೇಗೆ? ಮತ್ತು ಸ್ಥಳಪರಿಶೀಲಿಸದೆಯೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅನ್ಯಕಾಂತ ಮಾಡಲು ಪ್ರಭಾವ ಬೀರಿದ ವ್ಯಕ್ತಿ ತಾವೇ ಅಲ್ಲವೇ? ಆಗಲೂ ಸಹ ತಾವು ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

ನಿಮ್ಮ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಈ ಜಮೀನು ಖರೀದಿಸುವ ಸಂದರ್ಭದಲ್ಲಿ ನೀಡಿರುವ ವಿಳಾಸ ಮನೆ ನಂ. 1245, ಟಿ.ಕೆ. ಲೇಔಟ್, 4 ನೇ ಹಂತ, 3 ನೇ ಕ್ರಾಸ್, ಕುವೆಂಪುನಗರ, ಮೈಸೂರು ನಗರ ಈ ವಿಳಾಸವು ತಾವು ಈ ಹಿಂದೆ ವಾಸ ಮಾಡುತ್ತಿದ್ದ ಮನೆಯ ವಿಳಾಸವಲ್ಲವೇ?

ಮೈಲಾರಯ್ಯ ಮತ್ತು ಮಕ್ಕಳು ವಾರಸುದಾರರು ಆಗಿದ್ದರೂ ಸಹ ಎಂ.ಆರ್. ಪರಿಶೀಲಿಸದೇ ನಿಧನ ಹೊಂದಿ 35 ವರ್ಷಕ್ಕೂ ಹೆಚ್ಚುಕಾಲವಾಗಿದ್ದರೂ ಸಹ ಜವರ ಉರುಫ್ ನಿಂಗ ಅವರ ಹೆಸರಿಗೆ ಮರುಸ್ಥಾಪಿಸಿರುವುದು ಮತ್ತು ಜೆ. ದೇವರಾಜು ಹೆಸರಿಗೆ ಖಾತೆ ವರ್ಗಾವಣೆ ಮಾಡಿರುವುದು ನಿಯಮ ಬಾಹಿರವಲ್ಲವೇ? ಜೆ. ದೇವರಾಜುರವರು ಸರ್ಕಾರಿ ಉದ್ಯೋಗಿಯಾಗಿದ್ದರೂ ಸಹ ತಪ್ಪು ಮಾಹಿತಿ ನೀಡಿ ನಾನು ರೈತ, ಈ ಜಮೀನಿನಲ್ಲಿ ತೆಂಗಿನ ಸಸಿಗಳು ಸೇರಿದಂತೆ ಮಾವು ಇತ್ಯಾದಿ ಬೆಳೆಗಳು ಇದ್ದು, ನನಗೆ ಇದನ್ನು ಬಿಟ್ಟರೆ ಇನ್ಯಾವುದೇ ಆದಾಯವಿಲ್ಲವೆಂದು ಸುಳ್ಳು ಮಾಹಿತಿ ನೀಡಿ ತಮ್ಮ ಪ್ರಭಾವದಿಂದ ಡಿ ನೋಟಿಫಿಕೇಶನ್ ಮಾಡಿಸಲಾಗಿದೆ ಎಂಬ ಆರೋಪವಿದೆ.

ಸತ್ಯದ ಅರಿವು ಇರಲಿಲ್ಲವೇ?

2010 ರಲ್ಲಿ ತಮ್ಮ ಧರ್ಮಪತ್ನಿ ಪಾರ್ವತಮ್ಮನ ಹೆಸರಿಗೆ ತಮ್ಮ ಭಾವಮೈದುನ ದಾನಪತ್ರ ಮಾಡುವಾಗಲೇ ಮುಡಾ ಸರ್ವೇ ನಂ 464 ರ 3 ಎಕರೆ 16 ಗುಂಟೆ ಜಾಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ಸತ್ಯದ ಅರಿವು ತಮಗಿರಲಿಲ್ಲವೇ?

2013ರ ಚುನಾವಣಾ ಪ್ರಮಾಣ ಪತ್ರದಲ್ಲಿ ನೀವು ಈ ಸತ್ಯವನ್ನು ಮುಚ್ಚಿಟ್ಟಿದ್ದೀರಿ. ಅದಕ್ಕೆ ನೀವು ಕೊಟ್ಟಿರುವ ಉತ್ತರ ಕಣ್ಣಪ್ಪಿನಿಂದ ಹೀಗೆ ಆಗಿದೆ ಎಂದಿದ್ದೀರಿ. ಆರ್.ಪಿ. ಆಕ್ಟ್ ಸೆಕ್ಷನ್ 125 ಎ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಲ್ಲವೇ? (6 ತಿಂಗಳು ಸಜೆ ಮತ್ತು ದಂಡ) 2014 ರಲ್ಲಿ ನಿಮ್ಮ ಧರ್ಮಪತ್ನಿಯವರು ನನ್ನ ಜಮೀನು ಅತಿಕ್ರಮಣವಾಗಿದೆ ಎಂದು ದೂರು ನೀಡಿದಾಗ ಮುಡಾದವರು ಪರ್ಯಾಯವಾಗಿ ಅಂದಿನ 15 ಲಕ್ಷ ಮಾರುಕಟ್ಟೆ ದರದಂತೆ ಕೊಡುತ್ತೇವೆಂದು ಪತ್ರ ಬರೆದಿದ್ದು ನಿಜವಲ್ಲವೇ?

2010 ರಲ್ಲಿ ನಿಮ್ಮ ಧರ್ಮಪತ್ನಿಯವರಿಗೆ ದಾನಪತ್ರ ಆಗುವಾಗ ಅನ್ಯಕ್ರಾಂತವಾಗಿರುವ ಭೂಮಿಯನ್ನು ತಾವು ತಮ್ಮ 2018 ರ ಚುನಾವಣಾ ಪ್ರಮಾಣಪತ್ರದಲ್ಲಿ ಅನ್ಯಕಾಂತವಾದ ಜಾಗವನ್ನು ಕೃಷಿ ಭೂಮಿ ಹಾಗೂ ಇದರ ಮೌಲ್ಯ 25 ಲಕ್ಷ ರೂ. ಎಂದು ನಮೂದಿಸಲಾಗಿದೆ. 2023 ರ ಚುನಾವಣಾ ಪ್ರಮಾಣಪತ್ರದಲ್ಲಿ ಇದೇ ಜಾಗದ ಮೌಲ್ಯವನ್ನು 8 ಕೋಟಿಯೆಂದು ನಮೂದಿಸಿದ್ದೀರಿ.

ಈಗ ಮುಖ್ಯಮಂತ್ರಿಗಳಾಗಿರುವ ತಾವು ನಿವೇಶನವನ್ನು ವಾಪಸ್ ನೀಡಲು ಕೇಳುತ್ತಿರುವ ಮೌಲ್ಯ 65 ಕೋಟಿ ರೂ.ಗಳು. ಈಗ ನೀವು ಅವರ ಕುಟುಂಬ ಒಡೆದರೂ ಎಂದು ಹೇಳಿದ್ದೀರಿ ಮೈಲಾರಯ್ಯ ಮತ್ತು ಅವರ ಮಕ್ಕಳಿಗೆ ಸೇರಬೇಕಾದ ಆಸ್ತಿಯನ್ನು ಜೆ. ದೇವರಾಜು ಹೆಸರಿಗೆ ಖಾತೆ ಮಾಡಿಸಿ ಅಲ್ಲಿಂದ ನಿಮ್ಮ ಭಾವಮೈದುನ ನಂತರ ನಿಮ್ಮ ಧರ್ಮಪತ್ನಿ ಹೆಸರಿಗೆ ವರ್ಗಾಯಿಸಿಕೊಂಡಿರುವುದು ಮೈಲಾರಯ್ಯರವರ ಕುಟುಂಬದವರಿಗೆ ಮಾಡಿದ ಮೋಸವಲ್ಲವೇ?

UDD 08 TTP 2014, Dated 11-2-2015 ರಂತೆ ಅಧಿಸೂಚನೆ ಹೊರಡಿಸಿ, 50:50ರ ನಿಯಮ ರೂಪಿಸಿದ್ದು ನಿಯಮದಂತೆ ನಿವೇಶನ ಹಂಚಿಕೆ ಮಾಡುವಾಗ ಸರ್ಕಾರದ ಅನುಮತಿ ಪಡೆಯಲಾಗಿದೆಯೇ? ನಿಮ್ಮ ಧರ್ಮಪತ್ನಿ ಪಾರ್ವತಮ್ಮನವರಿಗೆ 50:50 ನಿಯಮದಂತೆ ನಿವೇಶನ ಪಡೆಯಲು ಸರ್ಕಾರದ ಅನುಮತಿ ಕಡ್ಡಾಯವಾಗಿದ್ದು, ಸರ್ಕಾರ ಅನುಮತಿ ನೀಡಿದೆಯೇ? ಇದೇ ರೀತಿ ರಾಜ್ಯದಲ್ಲಿ ಜಮೀನು ಕಳೆದುಕೊಂಡು ಪರಿಹಾರ ಪಡೆಯದೇ ಇರುವ ಪ್ರಕರಣಗಳಿಗೆ 50:50 ನಿಯಮದ ಅನುಪಾತದಂತೆ ನಿವೇಶನ ನೀಡಲಾಗಿದೆಯೇ?

ಸಿಬಿಐ ತನಿಖೆಗೆ ವಹಿಸಿ

ನೀವು ನನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದ್ದೀರಿ. ನಮಗೆ ತಿಳಿದಿರುವಂತೆ ಸುಮಾರು 70 ಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತರ ಮುಂದೆ ನಿಮ್ಮ ಮೇಲೆ ದಾಖಲಾಗಿದೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಸತ್ಯಾಸತ್ಯತೆ ಹೊರಗೆ ಬರುತ್ತದೆ.

ಹಿಂದಿನ ತಮ್ಮ ಸರ್ಕಾರದ ಆರಂಭದ ಅವಧಿಯಲ್ಲಿ ಇಬ್ಬರು ಇಂಜಿನಿಯರ್‌ಗಳ ಮನೆಯಲ್ಲಿ ನೂರುಕೋಟಿಗಟ್ಟಲೇ ಹಣ ಸಿಕ್ಕಿದ್ದು, (ಡಿನೋಟಿಫಿಕೇಶನ್ ಸಂದರ್ಭದಲ್ಲಿ) ಹಾಗೂ ಇಂದಿನ ಪ್ರಸ್ತುತ ಸರ್ಕಾರದ ಆರಂಭದಲ್ಲಿಯೇ ಇಬ್ಬರು ಪ್ರಭಾವಿಗಳ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದ್ದು, ಎಸ್‌ಹೆಚ್‌ಡಿಪಿ ಟೆಂಡರ್ ಪ್ಯಾಕೇಜ್ ಮಾಡಿ ನಾಲ್ಕು ಸಾವಿರ ಕೋಟಿ ಟೆಂಡರ್ ನಿಗದಿಪಡಿಸಿ ಬೇಕಾದವರಿಗೆ ನೀಡಿರುವುದು, ಬಿಬಿಎಂಪಿನಲ್ಲಿ ಎರಡು ಸಾವಿರ ಕೋಟಿ ಟೆಂಡರ್ ಪ್ಯಾಕೇಜ್ ಮಾಡಿ ಪರ್ಸೆಂಟೇಜ್ ನಿಗದಿಮಾಡಿರುವುದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ ಬೆಂಗಳೂರು ಎನ್ನುವ ಸಂಘಕ್ಕೆ ಟೆಂಡರ್ ನೀಡಿ ಪರ್ಸೆಂಟೇಜ್ ನಿಗದಿ ಮಾಡಿರುವುದು ತಮ್ಮ ಪ್ರಾಮಾಣಿಕ ಆಡಳಿತ ಮಾದರಿಗಳೇ?

ಪ್ರತಿಯೊಂದು ಆಯಕಟ್ಟಿನ ಹುದ್ದೆಗೂ ದರ ನಿಗದಿ ಮಾಡಿರುವ ಬಗ್ಗೆ ವಿಧಾನಸೌಧದ ಗೋಡೆಗಳೇ ಮಾತನಾಡುತ್ತಿವೆ.
ಅರ್ಕಾವತಿ ಬಡಾವಣೆಯಲ್ಲಿ ನೀಡು ಹೆಸರಿನಲ್ಲಿ ನಿಯಮ ಉಲ್ಲಂಘಿಸಿ 880 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿರುವುದು ಕಳಂಕವಲ್ಲವೇ? ರೀಡು ಪಿತಾಮಹ ಯಾರೆಂದು ಹೇಳಬಲ್ಲಿರಾ? ಅರ್ಕಾವತಿ ಪ್ರಕರಣದಲ್ಲಿ ನೀವೇ ನೇಮಕ ಮಾಡಿದ ಕೆಂಪಣ್ಣ ಆಯೋಗ ನೀಡು ಡಿ ನೋಟಿಫಿಕೇಶನ್ ಸಂಬಂಧಿಸಿದಂತೆ ವರದಿ ನೀಡಿದ್ದು, ತಾವು ಪ್ರಕರಣದ ಬಗ್ಗೆ ಸದನದ ಮುಂದೆ ಮಂಡಿಸಿ ಅಕ್ರಮ ನಡೆಸಿದವರ ಬಗ್ಗೆ ಕ್ರಮ ಯಾಕೆ ತೆಗೆದುಕೊಂಡಿಲ್ಲ? ತಾವು ಪ್ರಾಮಾಣಿಕರಲ್ಲವೇ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ?

ತಾವೇ ಭ್ರಷ್ಟರನ್ನು ಬೆಳೆಸಿ ನಿವೃತ್ತಿಯ ನಂತರವು ಕಡುಭ್ರಷ್ಟರಿಗೆ ಉನ್ನತ ಹುದ್ದೆಯನ್ನು ದಯಪಾಲಿಸಿರುವುದು ಸಾರ್ವಜನಿಕ ಜೀವನಕ್ಕೆ ಕಳಂಕವಲ್ಲವೇ? ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರಕುಮಾರ್ರವರು ನಿರಂತರವಾಗಿ ಸರ್ಕಾರಕ್ಕೆ ಮುಡಾ ಹಗರಣ ಕುರಿತಂತೆ 14 ಪತ್ರಗಳನ್ನು ಬರೆದರೂ ನಿರ್ಲಕ್ಷ ವಹಿಸಿದ್ದು, ಅಕ್ರಮಕ್ಕೆ ಬೆಂಬಲಿಸಿದಂತೆ ಅಲ್ಲವೇ?

ಎಲ್ಲಾ ಅಕ್ರಮಕ್ಕೆ ಫೋನ್ ಮಾಡಿ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದ ಪ್ರಭಾವಿ ಚಿಕ್ಕಬಾಸ್ ಯಾರೆಂದು ಹೆಸರು ಹೇಳಬೇಕೇ? ಮುಡಾದಲ್ಲಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಹೆಸರು ಹಾಗೂ ಪ್ರಭಾವವನ್ನು ಬಳಸಿಕೊಂಡು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆಸಿ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ. ಈ ಹಿಂದೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅವ್ಯವಹಾರ ಕುರಿತಂತೆ ಸಿಬಿಐ ತನಿಖೆ ನಡೆಸಲಾಗಿದೆ. ಮುಡಾದ ತನಿಖೆಯು ಸಿಬಿಐ ಮೂಲಕ ನಡೆದರೆ ಇದರ ಸತ್ಯಾಸತ್ಯತೆ ಬಹಿರಂಗವಾಗುತ್ತದೆ. ಇದರಲ್ಲಿ ನಿಮ್ಮದೇನು ತಪ್ಪಿಲ್ಲದಿದ್ದರೆ ಎಲ್ಲವೂ ಕ್ರಮಬದ್ದವಾಗಿದ್ದರೆ ಸಿಬಿಐಗೆ ತನಿಖೆಗೆ ವಹಿಸಲು ಭಯ ಏಕೆ?

ಪ್ರತಿಯೊಬ್ಬ ಭ್ರಷ್ಟಚಾರಿಯು ತಾನು ಸಿಕ್ಕಿಹಾಕಿಕೊಳ್ಳುತ್ತೇನೆಂದು ಅನ್ನಿಸಿದಾಗ ಭಯಗೊಳ್ಳುತ್ತಾನೆ. ಭಾವನಾತ್ಮಕ ರಕ್ಷಣೆಯನ್ನು ಜಾತಿಯ ಹೆಸರಿನಲ್ಲಿ ಪಡೆಯುವ ಪ್ರಯತ್ನ ಮಾಡುತ್ತಾನೆ. ತಾವು ಕೂಡ ಈಗ ಅಂತಹದೇ ಪ್ರಯತ್ನದಲ್ಲಿ ಇದ್ದೀರಿ. ನಾನು ಕೂಡ ದಾಖಲೆಯನ್ನು ಪರಿಶೀಲಿಸಿದ್ದೇನೆ. ಮುಡಾದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಚಾರ, ಅಧಿಕಾರದ ದುರುಪಯೋಗ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನೊಮ್ಮೆ ವಿಶೇಷ ಅಧಿವೇಶನ ಇದಕ್ಕಾಗಿಯೇ ಕರೆಯಿರಿ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೇ ಚರ್ಚಿಸೋಣ. ಆಗಾಗ ತಾವು ಹೇಳುತ್ತಿದ್ದ ಮಾತನ್ನು ನೆನಪಿಸಿ ಈ ಪತ್ರವನ್ನು ಪೂರ್ಣಗೊಳಿಸುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಉಪ್ಪು ತಿಂದವನು ನೀರು ಕುಡಿಯಬೇಕು. ಇದು ನಿಮ್ಮದೇ ಮಾತು. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿಯೂ ಇದು ಅನ್ವಯವಾಗಲಿ.

ಸಿ.ಟಿ. ರವಿ….

ಇದನ್ನೂ ಓದಿ: HD Kumaraswamy: ಹಣ ಕಟ್ಟಿ 40 ವರ್ಷ ಆಗಿದೆ, ನನಗಿನ್ನೂ ಮುಡಾ ನಿವೇಶನವನ್ನೇ ಕೊಟ್ಟಿಲ್ಲ: ಎಚ್‌ಡಿಕೆ

Exit mobile version