ಮೈಸೂರು: ಮುಡಾ ನಿವೇಶನ ಹಗರಣ (Muda site scandal) ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿಸಿದ್ದಾರೆಂದು ಆರೋಪಿಸಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜೆ.ದೇವರಾಜು ಹಾಗೂ ಕುಟುಂಬದವರು, ಜಿಲ್ಲಾಧಿಕಾರಿ, ತಹಸೀಲ್ದಾರ್, ಮುಡಾ ಅಧ್ಯಕ್ಷರ ವಿರುದ್ಧ ದೂರು ಸಲ್ಲಿಸಿದ್ದಾರೆ.
ದಾಖಲೆಗಳಲ್ಲಿ ಜಮೀನು ಮಾರಪ್ಪ ಎಂಬವರ ಹೆಸರಲ್ಲಿದೆ. ಆದರೆ, ಅನಧಿಕೃತ ವ್ಯಕ್ತಿಗಳನ್ನು ಸೃಷ್ಟಿಸಿ ಕೋಟ್ಯಂತರ ರೂ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆಂದು ದಾಖಲೆಗಳ ಸಮೇತ ವಿಜಯನಗರ ಠಾಣೆಗೆ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ. ಆದರೆ, ಈಗಾಗಲೇ ತನಿಖಾ ತಂಡದಿಂದ ತನಿಖೆ ನಡೆಯುತ್ತಿರುವ ಕಾರಣ ಮತ್ತೊಂದು ತನಿಖೆ ಸಾಧ್ಯವಿಲ್ಲ ಎಂದು ಪೊಲೀಸರು ಹಿಂಬರಹ ಬರೆದು ಕಳುಹಿಸಿದ್ದಾರೆ.
ಪೊಲೀಸರ ಜತೆಗೆ ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ದೂರುದಾರ ಬರೆದಿದ್ದಾರೆ. ಪತ್ರದ ಮೂಲಕ ಪ್ರಕರಣ ಸಂಬಂಧ ಹಲವು ಪ್ರಶ್ನೆ ಎತ್ತಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ರಾಜ್ಯಪತ್ರದ ಬಗ್ಗೆಯೇ ಅನುಮಾನ ಇದೆ. ಮೂಲ ಭೂ ಮಾಲೀಕರ ಮಗ ಎನ್ನುವ ದೇವರಾಜು ಅಸ್ತಿತ್ವದ ಬಗ್ಗೆ ಪ್ರಶ್ನೆ ಎದ್ದಿದೆ. 1998ರಲ್ಲಿ ಭೂ ಸ್ವಾಧಿನದಿಂದ ಕೈ ಬಿಟ್ಟಿದ್ದು ನಿಜವಾದರೆ 2010ರ ವರೆಗಿನ ಆರ್‌ಟಿಸಿಗಳಲ್ಲಿ ಭೂ ಸ್ವಾಧೀನ ಎಂಬ ಉಲ್ಲೇಖ ಯಾಕಿದೆ? ದೇವರಾಜು ಮತ್ತು ನಂತರ ಮಲ್ಲಿಕಾರ್ಜುನಸ್ವಾಮಿ ಅವರ ಮಾಲೀಕತ್ವ ಮತ್ತು ಸ್ವಾಧೀನದಲ್ಲಿ ಈ ಜಮೀನು ಇದ್ದಿದ್ದರೆ ಪ್ರಾಧಿಕಾರದ ಅಭಿವೃದ್ಧಿ ಕೆಲಸವನ್ನ ಏಕೆ ತಡೆದಿಲ್ಲ. ಶೇ.5 ಮಲ್ಲಿಕಾರ್ಜುನ ಹಾಗೂ ಪಾರ್ವತಿ ಅವರ ಹೆಸರಿಗೆ ಖಾತೆ ವರ್ಗಾವಣೆ ಮಾಡುವ ವೇಳೆ ಸ್ಥಳ ಪರಿಶೀಲನೆ ಮಾಡಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | CM Siddaramaiah: ಕುವೆಂಪು ಏನು ಹೇಳಿದ್ದಾರೆ ಗೊತ್ತಾ? ಕಾರ್ಯದರ್ಶಿಗೆ ʼಭಾಷಾಂತರʼ ಪಾಠ ಮಾಡಿದ ಸಿಎಂ!
ಪರಿಶೀಲನೆ ಮಾಡಿದ್ದರೆ ಮುಡಾ ಅಭಿವೃದ್ಧಿ ಮಾಡಿರುವುದು ಕಂಡುಬಂದಿದ್ದರೂ ಕೃಷಿ ಭೂಮಿ ಎಂದು ಹೇಗೆ ಖಾತೆ ಮಾಡಿದರು? ನಿಜವಾದ ಭೂ ಮಾಲೀಕರ ವಂಶವೃಕ್ಷ, ಅವರ ಮರಣ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳ ಉಲ್ಲೇಖ ಇಲ್ಲ ಯಾಕೆ? ಕೆಸರೆ ಗ್ರಾಮದ 464ನೇ ಸರ್ವೆ ನಂಬರ್‌ನ 3.16 ಎಕರೆ ಭೂ ಭೂ ಸ್ವಾಧೀನ ಕೈ ಬಿಡಲು ಕಾರಣ ಏನು? 2005ರಲ್ಲೇ ಮಲ್ಲಿಕಾರ್ಜುನ ಸ್ವಾಮಿಗೆ ಅನ್ಯಕ್ರಾಂತ ಆಗಿದ್ದರೆ ಸದರಿ ಉಲ್ಲೇಖ ಆರ್‌ಟಿಸಿಗಳಲ್ಲಿ ಯಾಕೆ ಇಲ್ಲ? 2004-05ನೇ ಸಾಲಿನ ಆರ್‌ಟಿಸಿಯ ಕಲಂ 10ರಲ್ಲಿ MR8/92-93 ಎಂಬ ಉಲ್ಲೇಖವಿದೆ. ಇದನ್ನು ಗಮನಿಸಿದಾಗ ಮಾರಪ್ಪ ಎಂಬವರಿಗೆ ಸೇರಿದ ದಾಖಲೆ ಎಂದು ಗೊತ್ತಾಗುತ್ತದೆ. ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಿರುವ ದೇವರಾಜು ಕುಟುಂಬದ ವಿಳಾಸವೇ ಅಸ್ಯಿತ್ವದಿಲ್ಲಿ ಇಲ್ಲದಿರುವುದು ದೊಡ್ಡ ಅನುಮಾನ ಎಂದು ದೂರಿನಲ್ಲಿ ತಿಳಿಸಿದ್ದಾರೆ.