Site icon Vistara News

MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

MUDA site scandal

ಮೈಸೂರು: ನಿಯಮಬಾಹಿರವಾಗಿ ಹಂಚಿಕೆಯಾದ ಮುಡಾ ನಿವೇಶನಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿದ್ದು, ಮುಡಾ ನಿವೇಶನ ಹಂಚಿಕೆ ಹಗರಣದ (MUDA site scandal) ತನಿಖೆಗೆ ಆದೇಶ ಹೊರಡಿಸಿದೆ. ಈ ಸಂಬಂಧ ತನಿಖಾ ತಂಡ ರಚಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ. ಹಗರಣದ ಬಗ್ಗೆ 15 ದಿನಗಳ ಒಳಗೆ ಸಮಗ್ರ ವರದಿ ನೀಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದ್ದು, ತನಿಖಾ ವರದಿಯೊಂದಿಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸ್ಪಷ್ಟ ಅಭಿಪ್ರಾಯ ನೀಡಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ.

ಮುಡಾದಲ್ಲಿ 5000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪಗಳು ಕೇಳಿಬಂದಿರುವ ಬಗ್ಗೆ ಎಂದು ವಿಸ್ತಾರ ನ್ಯೂಸ್‌ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ, ತನಿಖೆಗೆ ಆದೇಶ ನೀಡಿದೆ. ತನಿಖಾ ತಂಡಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ವೆಂಕಟಾಚಲಪತಿ ಅಧ್ಯಕ್ಷರಾಗಿದ್ದು, ಹೆಚ್ಚುವರಿ ನಿರ್ದೇಶಕ ಎಂ.ಸಿ. ದಿನೇಶ್, ಶಶಿಕುಮಾರ್, ಜಂಟಿ ನಿರ್ದೇಶಕಿ ಶಾಂತಲಾ, ಉಪ ನಿರ್ದೇಶಕ ಪ್ರಕಾಶ್ ಸದಸ್ಯರಾಗಿದ್ದಾರೆ. ಇನ್ನು ತನಿಖಾ ತಂಡಕ್ಕೆ ನೆರವು ನೀಡಲು ಮುಡಾ ಆಯುಕ್ತರಿಗೆ ಕಟ್ಟಪ್ಪಣೆ ನೀಡಲಾಗಿದೆ. ಮುಡಾಕ್ಕೆ ನಿಯಮ ಬಾಹಿರವಾಗಿ ನಷ್ಟ ಉಂಟು ಮಾಡಿದ ಬಗ್ಗೆ ದೂರು ಬಂದ ಹಿನ್ನೆಲೆ ತನಿಖೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ಅಧಿಕಾರಿಗಳ ತಲೆದಂಡ

50:50 ಅನುಪಾತದಡಿ ಹಂಚಿಕೆ ಆಗಿರುವ ನಿವೇಶನಗಳ ರದ್ದು ಮಾಡಲು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಮುಡಾ ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ತಲೆದಂಡ ಆಗಿದ್ದು, ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಕಾರ್ಯದರ್ಶಿ ಶೇಖರ್ ಸೇರಿದಂತೆ ಶಾಮೀಲಾದ ಅಧಿಕಾರಿಗಳ ಎತ್ತಂಗಡಿಗೆ ಸರ್ಕಾರ ಆದೇಶ ನೀಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಿವೇಶನ ಹಗರಣ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಸಚಿವ ಭೈರತಿ ಸುರೇಶ ಅವರು ಇಂದು ದಿಢೀರ್‌ ಮೈಸೂರಿಗೆ ಧಾವಿಸಿದ್ದರು. ಅವರು ಮುಡಾ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಬೆನ್ನಲ್ಲೇ ಹಗರಣದ ತನಿಖೆಗೆ ಸರ್ಕಾರ ಆದೇಶಿಸಿದೆ.

ನಂತರ ಸುದ್ದಿಗೋಷ್ಠಿಯಲ್ಲಿ ಸಚಿವ ಭೈರತಿ ಸುರೇಶ್ ಮಾತನಾಡಿ, ನಾನು ರೈತರ ಪರವಾಗಿದ್ದೇನೆ. ರೈತನಿಗೆ ಅನ್ಯಾಯವಾಗಿದ್ದರೆ ಶಿಸ್ತುಕ್ರಮ ಆಗುತ್ತೆ. ಜನಪ್ರತಿನಿಧಿ, ಅಧಿಕಾರಿಗಳು ಯಾರೇ ಆಗಿರಲಿ ಕ್ರಮ ಕೈಗೊಳ್ಳುತ್ತೇವೆ. ಒಂದು ತಿಂಗಳವರೆಗೆ ಪ್ರಾಧಿಕಾರದ ಸಭೆ ನಡೆಸುವಂತಿಲ್ಲ.‌ ರಸ್ತೆ, ನೀರು, ವೇತನದಂತಹ ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಹುದು. ಸೈಟ್ ಕೊಡುವಂತಹ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Karave Protest: ಕನ್ನಡಿಗರಿಗೆ ಉದ್ಯೋಗ ನೀಡಲು ಕರವೇ ನಾರಾಯಣ ಗೌಡ ನಿಯೋಗ ಮನವಿ; ಶೀಘ್ರವೇ ಕ್ರಮ ಎಂದ ಸಿಎಂ

ಹಗರಣದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರ ಕಿಂಚಿತ್ತೂ ಇಲ್ಲ. ಸಾಕ್ಷ್ಯ ಇದ್ದರೆ ವಿಶ್ವನಾಥ್ ಕೊಡಲಿ. ಗಾಳಿಯಲ್ಲಿ ಗುಂಡು ಹೊಡೆಯಬಾರದು. ವಿಶ್ವನಾಥ್‌ ನನ್ನ ಬಳಿಯೇ ಪೈಲ್ ತಗೊಂಡು ಬಂದಿದ್ದರು. ಅವರು ಎಲ್ಲರ ಮೇಲೂ ಆಪಾದನೆ ಮಾಡಿದ್ದಾರೆ. ವಯಸ್ಸಿನಲ್ಲಿ ವಿಶ್ವನಾಥ್ ದೊಡ್ಡವರು. ಅವರ ಮಟ್ಟಕ್ಕೆ ಇಳಿದು ನಾನು ಮಾತನಾಡಲ್ಲ ಎಂದು ಟಾಂಗ್ ನೀಡಿದರು.

Exit mobile version