Site icon Vistara News

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

MUDA site scandal

ಮೈಸೂರು: ಮುಡಾ ನಿವೇಶನ ಹಗರಣ (MUDA site scandal) ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಹಂಚಿಕೆಯಾದ ಸೈಟ್‌ಗಳನ್ನು ಅಮಾನತು ಮಾಡಿ, ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದೀಗ ಸಿಎಂ ಆಪ್ತ, ಜಿಪಂ ಮಾಜಿ ಸದಸ್ಯ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಸೈಟ್‌ ಅನ್ನೂ ತಡೆ ಹಿಡಿದಿರುವುದು ಕಂಡುಬಂದಿದೆ.

ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಕೆ. ಮರಿಗೌಡ ಪ್ರತಿಕ್ರಿಯಿಸಿ, ನಿವೇಶನ ಹಂಚಿಕೆ ತಡೆ ಹಿಡಿಯಲಾಗಿದೆ. ಈ ಮೊದಲು ನ್ಯಾಯಾಲಯ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಆಗಿತ್ತು. ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿದೆ. ಈಗ ಅದನ್ನೂ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಹಿನ್‌ಕಲ್ ಸರ್ವೆ ನಂ.211ರಲ್ಲಿ 3.05 ಗುಂಟೆ ಜಮೀನು ಸಂಬಂಧಿಸಿದ ಪ್ರಕರಣದಲ್ಲಿ 1981ರಲ್ಲಿ ಸ್ವಾದೀನ ಪಡೆದು, 1984ರಲ್ಲಿ ಕೈ ಬಿಡಲಾಗಿತ್ತು. ಅದಕ್ಕೆ 2024ರ ಜೂನ್‌ 12 ರಂದು ಪರಿಹಾರ ಕೊಡಲಾಗಿತ್ತು. 36,753 ಚದರ ಅಡಿ ಪರಿಹಾರ ಕೊಡಲಾಗಿತ್ತು. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ‌ 20 ನಿವೇಶನ ಕೊಟ್ಟು ಆದೇಶ ಮಾಡಲಾಗಿತ್ತು. ಈಗ ಆ ದೇಶಕ್ಕೂ ತಡೆ ಬಿದ್ದಿದೆ ಎಂದು ಹೇಳಿದ್ದಾರೆ.

ಎಂಎಲ್‌ಸಿ ಎಚ್. ವಿಶ್ವನಾಥ್ ಕೂಡ ಮುಡಾದಿಂದ ಬದಲಿ ನಿವೇಶನ ಪಡೆದಿದ್ದಾರೆ. ದೇವನೂರು 3ನೇ ಹಂತದ ಬದಲು ಮುಖ್ಯರಸ್ತೆಯಲ್ಲಿ ವಿಶ್ವನಾಥ್ ಪತ್ನಿ ಶಾಂತಮ್ಮ ಅವರ ಹೆಸರಿನಲ್ಲಿ 2017ರಲ್ಲಿ 60×40 ಅಳತೆಯ ಬದಲಿ ನಿವೇಶನ ಪಡೆದಿದ್ದಾರೆ. ರಾಜಕೀಯವಾಗಿ ದಿವಾಳಿಯಾಗಿರುವ ಅವರು ಈಗ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎಚ್‌.ವಿಶ್ವನಾಥ್‌ಗೂ ಬದಲಿ ನಿವೇಶನ

50-50 ಅನುಪಾತದಲ್ಲಿ ಸಿಎಂ ಕುಟುಂಬ ನಿಯಮಬಾಹಿರ ಸೈಟ್ ಪಡೆದ ಆರೋಪದ ಬಗ್ಗೆ ಶಾಸಕ ಹರೀಶ್‌ಗೌಡ ಪ್ರತಿಕ್ರಿಯಿಸಿ, ಇಡೀ ಪ್ರಕರಣದಲ್ಲಿ ಸಿಎಂ ಹಾಗೂ ಅವರ ಕುಟುಂಬ ಕಾನೂನಾತ್ಮಕವಾಗಿ ಇದೆ. ಇಲ್ಲಿ ಮುಡಾ, ಸಿಎಂ ಕುಟುಂಬಕ್ಕೆ 75 ಸಾವಿರ ಚದರ ಅಡಿ ಜಾಗ ಕೊಡಬೇಕಿತ್ತು. ಆದರೂ ಕೊಟ್ಟಿರುವ 38 ಸಾವಿರ ಚದ ಅಡಿಗೆ ನಮ್ಮ ನಾಯಕರ ತೃಪ್ತಿ ಪಟ್ಟುಕೊಂಡಿದ್ದಾರೆ. ಅಂತಹವರ ಮೇಲೆ ಸುಳ್ಳು ಆರೋಪ ಮಾಡೋದು ಸರಿಯಲ್ಲ. ಇಂತಹ ಆರೋಪ ಮಾಡುತ್ತಿರುವ ಎಚ್‌.ವಿಶ್ವನಾಥ್ ಕೂಡ ದೇವನೂರು ಬಡಾವಣೆಯಲ್ಲಿ ಬದಲಿ ನಿವೇಶನ ಪಡೆದಿದ್ದಾರೆ.
ಅವರ ಪತ್ನಿ ಶಾಂತಮ್ಮ ಹೆಸರಲ್ಲಿ ನಿವೇಶನ ಪಡೆದಿದ್ದರು. ನಿವೇಶನ ಸಂಖ್ಯೆ 2,525ರ ಬದಲಾಗಿ ಹೈವೆ ಬಳಿ ಬರುವ ನಿವೇಶನ ಸಂಖ್ಯೆ 307 ಅನ್ನು ಪಡೆದಿದ್ದಾರೆ. ಅಂತಹವರು ಸಿಎಂ ಬಗ್ಗೆ ಮಾತನಾಡುವಾಗ ಸರಿಯಾಗಿ ಮಾತನಾಡಬೇಕು ಎಂದರು.

ವಿಶ್ವನಾಥ್‌ರಂತಹ ದಿವಾಳಿ ರಾಜಕಾರಣಿ ಇನ್ನೊಬ್ಬ ಇಲ್ಲ. ಇಡೀ ಪ್ರಕರಣದಲ್ಲಿ ಅಕ್ರಮ ಎಸಗಿರುವ ಎಲ್ಲರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯದಲ್ಲೇ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಹೇಳಿದರು.

50:50 ಅನುಪಾತದಲ್ಲಿ ನಿವೇಶನ ಕೊಡಲಿಕ್ಕೆ 2015ರಲ್ಲೇ ಗೆಜೆಟ್ ನೋಟಿಫಿಕೇಶನ್ ಆಗಿದೆ. ಆಗ 60:40 ಅನುಪಾತದಲ್ಲಿ ನೀಡಬೇಕೆಂದು ಆದೇಶ ಇದೆ. ಅದಾದ ಬಳಿಕ 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ನೀಡಲಿಕ್ಕೆ ಪ್ರಾಧಿಕಾರ ನಿರ್ಣಯ ಮಾಡಿತು ಎಂದು ತಿಳಿಸಿದರು.

Exit mobile version