ಚಿತ್ರದುರ್ಗ: ಇಲ್ಲಿನ ಪ್ರತಿಷ್ಠಿತ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಇಬ್ಬರು ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೇಲೆ ಮುರುಘಾಶರಣರು ವರ್ಷಾಂತರಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಮತ್ತು ಹಾಸ್ಟೆಲ್ ವಾರ್ಡನ್ ರಶ್ಮಿ ಹಾಗೂ ಇತರ ಮೂವರು ಸಹಕಾರ ನೀಡುತ್ತಿದ್ದಾರೆ ಎಂದು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ದೂರು ನೀಡಿದ್ದರು.
ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾದ ಈ ಪ್ರಕರಣದ ವಿಚಾರಣೆಯನ್ನು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ಸ್ಥಳಾಂತರ ಮಾಡಲಾಗಿತ್ತು. ಅದರ ಜತೆಗೇ ಬಾಲಕಿಯರನ್ನು ಕೂಡಾ ಈಗ ಶಿಫ್ಟ್ ಮಾಡಲಾಗಿದೆ. ಮೈಸೂರಿನಿಂದ ರಾತ್ರಿ ವಿದ್ಯಾರ್ಥಿನಿಯರನ್ನು ವಾಹನದ ಮೂಲಕ ಕರೆದೊಯ್ಯಲಾಗಿದ್ದು, ಬೆಳಗ್ಗೆ ನಾಲ್ಕು ಗಂಟೆ ಹೊತ್ತಿಗೆ ಅವರು ಚಿತ್ರದುರ್ಗ ತಲುಪಿದ್ದಾರೆ.
ಅವರನ್ನು ಇಲ್ಲಿನ ಸರಕಾರಿ ಬಾಲಕಿಯರ ಪರಿವೀಕ್ಷಣಾ ಮಂದಿರದಲ್ಲಿ ಇಡಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರು ಸೂಕ್ತ ಭದ್ರತೆ ನೀಡಿದ್ದಾರೆ.
ಇವರನ್ನು ಬೆಳಗ್ಗೆ ೧೦ ಗಂಟೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತಿದ್ದು, ಹೇಳಿಕೆ ಪಡೆದುಕೊಳ್ಳಲಿದ್ದಾರೆ. ಇದು ಇನ್ ಕ್ಯಾಮೆರಾ ಮಾದರಿಯಲ್ಲಿ ಖಾಸಗಿಯಾಗಿ ನಡೆಯುವ ಸಾಧ್ಯತೆ ಇದೆ. ಬಳಿಕ ವೈದ್ಯಕೀಯ ಪರೀಕ್ಷೆ ಹಾಗೂ ಪೊಲೀಸರಿಂದ ಸ್ಥಳ ಮಹಜರು ನಡೆಸುವ ಸಾಧ್ಯತೆಗಳಿವೆ.
ಪೋಕ್ಸೋ ಪ್ರಕರಣ ದಾಖಲು
ಇದು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣವಾಗಿರುವುದರಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಡೆದ ಕಾಯಿದೆ (ಪೋಕ್ಸೊ) ಅಡಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಸ್ವಾಮೀಜಿಯವರನ್ನೂ ವಿಚಾರಣೆಗೆ ಒಳಪಡಿಸುವುದು ನಿಶ್ಚಿತವಾಗಿದೆ. ಈ ನಡುವೆ ಶ್ರೀಗಳು ನಿನ್ನೆಯಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವಾರ್ಡನ್ ಸೇರಿದಂತೆ ಪ್ರಕರಣದ ಮುಂದಿನ ನಾಲ್ಕು ಆರೋಪಿಗಳು ಕೂಡಾ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಅದರೆ, ಪೊಲೀಸರ ಸಂಪರ್ಕದಲ್ಲಿ ಇರಬಹುದು ಎನ್ನಲಾಗಿದೆ. ಅವರು ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ಸಂಧಾನ ಮಾತುಕತೆಯೂ ಸಾಧ್ಯತೆ
ಈ ನಡುವೆ, ಮುರುಘಾಮಠದ ಕಡೆಯಿಂದ ದೂರುದಾರರು ಹಾಗೂ ಅವರ ಬೆಂಬಲಕ್ಕೆ ನಿಂತಿರುವವರ ಜತೆ ಸಂಧಾನದ ಆಂತರಿಕ ಪ್ರಯತ್ನ ನಡೆಯುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಒಂದೊಮ್ಮೆ ಕೇಸು ಹಿಂದೆಗೆಯಲು ಒಪ್ಪಿದರೆ ತಾವು ಕಾನೂನು ಹೋರಾಟ ಮುಂದುವರಿಸುವುದಿಲ್ಲ ಎಂದು ಮುರುಘಾ ಮಠದ ವತಿಯಿಂದ ಸಂದೇಶ ನೀಡಲಾಗಿದೆ ಎನ್ನಲಾಗಿದೆ. ಆದರೆ, ಇದು ಪೋಕ್ಸೋ ಪ್ರಕರಣವಾಗಿರುವುದರಿಂದ ಹೇಳಿಕೆಯಿಂದ ಹಿಂದೆ ಸರಿಯುವುದು ಅಷ್ಟು ಸುಲಭವಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಇದನ್ನೂ ಓದಿ| ಮುರುಘಾಮಠ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: ಕಾನೂನು ಕ್ರಮದ ಸಾಧ್ಯಾಸಾಧ್ಯತೆಗಳೇನು?