ಚಿತ್ರದುರ್ಗ: ಒಂದು ಕಡೆ ಚಿತ್ರದುರ್ಗ ಮುರುಘಾ ಮಠದ ಶ್ರೀ ಮರುಘಾ ಶರಣರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಮತ್ತು ಅಪರ ಸತ್ರ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದ್ದರೆ, ಇತ್ತ ಇನ್ನೊಂದು ಪ್ರಕರಣದಲ್ಲಿ ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜ್, ಪತ್ನಿ ಸೌಭಾಗ್ಯ ಅವರು ಕೂಡಾ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ.
ಮುರುಘಾ ಶ್ರೀಗಳ ವಿರುದ್ಧ ಮಠದ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಶ್ರೀಗಳು, ಹಾಸ್ಟೆಲ್ ವಾರ್ಡನ್ ರಶ್ಮಿ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸುತ್ತಿದ್ದಂತೆಯೇ ಇತ್ತ ವಾರ್ಡನ್ ರಶ್ಮಿ ಅವರು ಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜ್ ವಿರುದ್ಧ ಅತ್ಯಾಚಾರ ಯತ್ನ ಮತ್ತು ಅವರ ಪತ್ನಿ, ಮಾಜಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಅವರ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಿಸಿದ್ದರು.
ಎರಡನೇ ಪ್ರಕರಣಕ್ಕೆ ಸಂಬಂಧಿಸಿಯೂ ಇನ್ನೊಂದು ಕಡೆಯಲ್ಲಿ ತನಿಖೆ ನಡೆಯುತ್ತಿದ್ದು, ಮಂಗಳವಾರ ಹಾಸ್ಟೆಲ್‌ನಲ್ಲಿ ಸ್ಥಳ ಮಹಜರು ನಡೆದಿದೆ. ತನಿಖಾಧಿಕಾರಿಗಳು ವಾರ್ಡನ್ ರಶ್ಮಿ ಅವರ ಸಮ್ಮುಖದಲ್ಲಿ ನಡೆದಿರುವ ವಿದ್ಯಮಾನಗಳ ಮಾಹಿತಿಯನ್ನು ಪಡೆದಿದ್ದರು.
ರಶ್ಮಿ ಅವರು ಸಲ್ಲಿಸಿರುವ ದೂರಿನಲ್ಲಿ ಜುಲೈ ೨೨ರಂದು ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಅನುಮತಿ ಕೇಳಿ ಹೋಗಿ ನಾಪತ್ತೆಯಾಗಿದ್ದು, ಅವರು ಬಳಿಕ ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿರುವುದು ಪತ್ತೆಯಾಗಿದ್ದು, ಅಲ್ಲಿಂದ ಅವರನ್ನು ಕರೆದುಕೊಂಡು ಬಂದ ಬಸವರಾಜ್ ದಂಪತಿ ಅವರನ್ನು ಎರಡು ದಿನ ತಮ್ಮ ಮನೆಯಲ್ಲಿ ಇಟ್ಟುಕೊಂಡು ಜು. ೨೭ರಂದು ಮನೆಯವರಿಗೆ ಒಪ್ಪಿಸಿದ್ದನ್ನು ಉಲ್ಲೇಖಿಸಲಾಗಿತ್ತು. ಇದರ ನಡುವೆಯೇ ಬಸವರಾಜ್ ಅವರು ತಮ್ಮನ್ನು ಆಗಾಗ ಕರೆಸಿಕೊಂಡು ಆಮಿಷಗಳನ್ನು ಒಡ್ಡಿದ್ದಲ್ಲದೆ, ಅತ್ಯಾಚಾರಕ್ಕೂ ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ಜತೆಗೆ ಸೌಭಾಗ್ಯ ಅವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿದ್ದರು.
ಈ ಹಿನ್ನೆಲೆಯಲ್ಲಿ ಬಸವರಾಜ್ ದಂಪತಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶರಾದ ಶ್ರೀಮತಿ ಕೋಮಲ ಮುಂದೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಬಾಲಕಿಯರ ಹೇಳಿಕೆ ದಾಖಲು
ಈ ನಡುವೆ ಸಂತ್ರಸ್ತ ಬಾಲಕಿಯರಿಂದ ಇನ್ನೊಂದು ಸುತ್ತಿನ ಹೇಳಿಕೆ ದಾಖಲು ಪ್ರಕ್ರಿಯೆಯೂ ಗುರುವಾರ ನಡೆಯಲಿದೆ. ಈ ಹಿಂದೆ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲಾಗಿತ್ತು. ಈಗ ಅವರು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಸಲ್ಲಿಸಿರುವ ದೂರಿನ ಸಂಬಂಧ ಹೇಳಿಕೆ ದಾಖಲಿಸಬೇಕಾಗಿದೆ.
ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ| ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ, ಮುಂದೇನು?