ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿ ರಶ್ಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಶ್ಮಿ ಅವರು ಮಠದ ಆವರಣದಲ್ಲೇ ಇರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ವಾರ್ಡನ್ ಆಗಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಹಕರಿಸಿರುವ ಆರೋಪ ಎದುರಿಸುತ್ತಿದ್ದಾರೆ. ರಶ್ಮಿ ಅವರನ್ನು ಶುಕ್ರವಾರವೇ ಪೊಲೀಸರು ವಶಕ್ಕೆ ಪಡೆದಿದ್ದು, ಡಿವೈಎಸ್‌ಪಿ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಬಳಿಕ ರಾತ್ರಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವಧಾರ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ವಿಚಾರಣೆ ಶುಕ್ರವಾರ ಮತ್ತೆ ಮುಂದುವರಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ಅವರ ಬಂಧನ ಫಿಕ್ಸ್ ಆಗಿತ್ತು. ಆದರೆ, ತಾಂತ್ರಿಕವಾಗಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು. ಇದೀಗ ಬಂಧಿಸಿದ್ದಾಗಿ ಹೇಳಿದ್ದು ಸಂಜೆಗೆ ಮೊದಲೇ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಪ್ರಕರಣದಲ್ಲಿ ರಶ್ಮಿ ಪಾತ್ರವೇನು?
ಡಾ. ಶಿವಮೂರ್ತಿ ಮುರುಘಾಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರೆ ಅವರಿಗೆ ವಸತಿ ಶಾಲೆಯ ವಾರ್ಡನ್ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಕಿರಿಯ ಸ್ವಾಮಿ ಬಸವಾದಿತ್ಯ, ಲಾಯರ್ ಗಂಗಾಧರ್ ಮತ್ತು ಶ್ರೀಗಳ ಪರಮಾಪ್ತ ಪರಮಶಿವಯ್ಯ ಅವರು ಸಹಕಾರ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿಗಳ ಬಳಿಗೆ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿಯೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು, ಸಿಹಿಯಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. ಅಂದರೆ, ಈ ಎಲ್ಲ ಆರೋಪಗಳು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ವಾರ್ಡನ್ ರಶ್ಮಿ ಅವರಿಗೆ ಅನ್ವಯಿಸುತ್ತದೆ.
ಈ ನಡುವೆ, ರಶ್ಮಿ ಅವರು ಮಠದ ಆಡಳಿತಾಧಿಕಾರಿಯಾಗಿದ್ದ ಮಾಜಿ ಶಾಸಕ ಎಸ್.ಕೆ. ಬಸವರಾಜ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಅತ್ಯಾಚಾರ ಯತ್ನ ಮತ್ತು ಬ್ಲ್ಯಾಕ್ ಮೇಲ್ ಆರೋಪಗಳನ್ನು ಮಾಡಿದ್ದರು. ಇದರ ಬಗ್ಗೆ ಹಾಸ್ಟೆಲ್‌ನಲ್ಲಿ ಮಹಜರು ಕೂಡಾ ನಡೆದಿತ್ತು. ಬಸವರಾಜನ್ ದಂಪತಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಈ ನಡುವೆ, ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ್ ಅವರು, ಈ ಪ್ರಕರಣದಲ್ಲಿ ಶ್ರೀಗಳನ್ನು ಹೊರತಾಗಿ ಉಳಿದವರು ಬಲಿಪಶುಗಳೇ ಆಗಿದ್ದಾರೆ. ಅವರನ್ನು ಕೂಡಾ ದುರ್ಬಳಕೆ ಮಾಡಿಕೊಂಡಿರುವಂತೆ ಕಾಣುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ನಿರೀಕ್ಷಣಾ ಜಾಮೀನು ಅರ್ಜಿ ವಜಾ, ನಾಳೆ ಹೊಸ ಅರ್ಜಿ