ಚಿತ್ರದುರ್ಗ: ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರಿಗೆ ಒಂಬತ್ತು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೆಪ್ಟೆಂಬರ್ ೧ರಂದು ಬಂಧಿತರಾಗಿದ್ದ ಅವರಿಗೆ ಅಂದೇ ರಾತ್ರಿ ಸೆ.೧೪ರವರೆಗೆ ಅಂದರೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ, ಸೆಪ್ಟೆಂಬರ್ ೨ರಂದು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಬೇಕು ಎಂದು ಕೇಳಿದ್ದರು. ಅದರಂತೆ ಸೆಪ್ಟೆಂಬರ್ ೫ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಡಿವೈಎಸ್‌ಪಿ ಅನಿಲ್ ಕುಮಾರ್ ಅವರ ಕಚೇರಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಅವರನ್ನು ವಿಚಾರಣೆ ನಡೆಸಲಾಗಿತ್ತು.
ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಅವರನ್ನು ಮತ್ತೆ 2ನೇ ಅಪರ ಮತ್ತು ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನ್ಯಾಯಾಧೀಶರು, ಇನ್ನೇನಾದರೂ ವಿಚಾರಣೆ ಬಾಕಿ ಇದೆಯೇ ಎಂದು ಪೊಲೀಸರನ್ನು ಕೇಳಿದರು. ʻʻವಿಚಾರಣೆ ಮುಗಿದಿದೆ, ಕಸ್ಟಡಿಗೆ ಬೇಡʼʼ ಎಂದು ಪೊಲೀಸರು ಹೇಳಿದರು. ಹೀಗಾಗಿ ಅವರನ್ನು ಸೆಪ್ಟೆಂಬರ್ 14ರವರೆಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಲಾಯಿತು.
ಸಂತ್ರಸ್ತ ಬಾಲಕಿಯರ ಪರ ಸರ್ಕಾರಿ ಅಭಿಯೋಜಕಿ ನಾಗವೇಣಿ ವಾದ ಮಂಡಿಸಿದರೆ, ಮುರುಘಾ ಶರಣರ ಪರ ವಕೀಲರು ಉಮೇಶ್ ವಾದಿಸಿದರು.
ಮುರುಘಾಶ್ರೀ ಜೈಲಿಗೆ ಶಿಫ್ಟ್
ಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ಶ್ರೀಗಳನ್ನು ಡಿವೈಎಸ್‌ಪಿ ಕಚೇರಿಯಿಂದ ಹಳೇ ಬೆಂಗಳೂರು ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಜಿಲ್ಲಾ ಕಾರಾಗೃಹಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಆಗಸ್ಟ್ ೨೭ರಂದು ಶ್ರೀಗಳ ವಿರುದ್ಧ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಶ್ರೀಗಳಲ್ಲದೆ ವಾರ್ಡನ್ ರಶ್ಮಿ, ಕಿರಿಯ ಸ್ವಾಮಿಗಳಾದ ಬಸವಾದಿತ್ಯ ಹಾಗೂ ಇಬ್ಬರ ಮೇಲೆ ದೂರು ದಾಖಲಾಗಿದೆ. ಶ್ರೀಗಳು ಮತ್ತು ರಶ್ಮಿ ಅವರ ಬಂಧನವಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.
ಜಾಮೀನಿಗೆ ಅರ್ಜಿ ಸಾಧ್ಯತೆ
ಈ ನಡುವೆ ಶ್ರೀಗಳ ಪರವಾಗಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಹಿಂದೆಯೇ ಜಾಮೀನು ಅರ್ಜಿ ಸಲ್ಲಿಸಿದ್ದರೂ ಶ್ರೀಗಳು ಪೊಲೀಸ್ ಕಸ್ಟಡಿಯಲ್ಲಿ ಇರುವುದರಿಂದ ಅದಕ್ಕೆ ಮಾನ್ಯತೆ ಸಿಕ್ಕಿರಲಿಲ್ಲ. ಈಗ ನ್ಯಾಯಾಂಗ ಬಂಧನ ವಿಧಿಸಲಾಗಿರುವುದರಿಂದ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳಿಗೆ ಜಾಮೀನು ನೀಡದಿರಲು ಪೊಲೀಸರ ಆಕ್ಷೇಪವೇನು?