Site icon Vistara News

MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

MyMUL President

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್-Mysuru Milk Union Ltd) ಅಧ್ಯಕ್ಷ ಸ್ಥಾನಕ್ಕೆ ದಿಢೀರನೆ ರಾಜೀನಾಮೆ ನೀಡಿರುವ ಕುರಿತು ಪಿ.ಎಂ.ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ರಾಜೀನಾಮೆ ನೀಡಿದ್ದೇನೆ ಎಂದು ಅರೋಪಿಸಿರುವ ಅವರು, ಸಚಿವರು ರಾಜಕೀಯ ಕಾರಣಕ್ಕೆ ನನಗೆ ಬಹಳ ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ಮೈಮುಲ್‌ ಅಧ್ಯಕ್ಷ (MyMUL President) ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪಿ.ಎಂ.ಪ್ರಸನ್ನ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿರುವ ಅವರು, ವಾಸಸ್ಥಳ ದೃಢೀಕರಣ ಪತ್ರದ ವಿಚಾರದಲ್ಲಿ ಪದೇ ಪದೇ ನೋಟಿಸ್ ಕೊಟ್ಟು ಕಿರುಕುಳ ನೀಡಲಾಗಿದೆ. ನಾನು ರಾಜೀನಾಮೆ ಕೊಡದೆ ಇದ್ದರೆ ಎಲ್ಲಾ ಪದಾಧಿಕಾರಿಗಳ ವಜಾಕ್ಕೆ ವಾಮಮಾರ್ಗದ ಮೂಲಕ ಯತ್ನಿಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಟ್ಟ ನಂತರವೂ ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ. ಪಿರಿಯಾಪಟ್ಟಣದಲ್ಲಿ ಸಿಎಂ ಆಪ್ತ ಸಚಿವ ಕೆ.ವೆಂಕಟೇಶ್ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅವರಿಗೆ ಪ್ರತಿಸ್ಪರ್ಧಿಯಾಗುತ್ತೇನೆ ಎಂದು ಈ ರೀತಿ ಮಾಡುತ್ತಿದ್ದಾರೆ. ನಾನು ಇರುವವರೆಗೂ ಅವರ ವಿರುದ್ಧವೇ ಹೋರಾಟ ಮಾಡುತ್ತೇನೆ. ನಾನು ರಾಜಕೀಯವಾಗಿ ಅವರ ಮಗನಿಗೆ ಎದುರಾಳಿಯಾಗುತ್ತೇನೆ ಎಂದು ಈ ರೀತಿ ನನ್ನ ಮತ್ತು ನನ್ನ ಕುಟುಂಬದ ಜೊತೆ ದ್ವೇಷ ಸಾಧಿಸುತ್ತಿದ್ದಾರೆ. ನಾನು ಇದಕ್ಕೆ ಹೆದರಲ್ಲ, ನನ್ನ ನಂಬಿ, ನನ್ನನ್ನು ಈ ಸ್ಥಾನಕ್ಕೆ ಕೂರಿಸಿರುವ ಒಕ್ಕೂಟದ ಸದಸ್ಯರಿಗೆ ಯಾವುದೇ ತೊಂದರೆ ಆಗಬಾರದು ಅಂತ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Closure of Madrasas: ಮದರಸಾಗಳನ್ನು ಮುಚ್ಚಲು ನಿರ್ಣಯ ಮಂಡನೆ; ಕಾಂಗ್ರೆಸ್‌ ಕಿಡಿ

ಸಹಕಾರಿ ಕ್ಷೇತ್ರದಲ್ಲಿ ನಮಗೆ ಜಿ.ಟಿ. ದೇವೇಗೌಡರೇ ಗುರುಗಳು. ಅವರ ಗಮನಕ್ಕೆ ತಂದು ರಾಜೀನಾಮೆ ಕೊಟ್ಟಿದ್ದೇನೆ. ಅವರು ಬೇಡ ಇರು ಅಂತ ಹೇಳಿದರು, ಆದೂ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿರುವ ರಾಜ್ಯ ಸರಕಾರ: ಬೊಮ್ಮಾಯಿ

Petrol Diesel Price Hike

ಹಾವೇರಿ: ರಾಜ್ಯ ಸರಕಾರ ದಿವಾಳಿ ಆಗಿರುವುದು ಪ್ರತಿಯೊಂದು ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಇದೀಗ ದಲಿತ ಸಮುದಾಯಕ್ಕೆ ಮೀಸಲಿಡಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ (Guarantee Schemes) ವೆಚ್ಚ ಮಾಡಿದ್ದು, ಆ ಮೂಲಕ ಎಸ್‌ಸಿ/ಎಸ್‌ಟಿ (SC/ST) ಜನಾಂಗಕ್ಕೆ ಮೋಸ ಮಾಡಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹರಿಹಾಯ್ದಿದ್ದಾರೆ.

ಶಿಗ್ಗಾಂವಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಈ ಬಗೆಗೆ ಹೇಳಿಕೆ ನೀಡಿದರು. ಎಸ್ಸಿ ಎಸ್ಟಿಯವರ ಹಣ 14 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಸರಕಾರ ಮೋಸ ಮಾಡುತ್ತಿದೆ. ಈ ಹಣ ದಲಿತ ಜನಾಂಗದ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆ ಎಲ್ಲಾ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದರು.

ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಹೇಳುತ್ತಾರೆ. ಹಿಂದುಳಿದ ವರ್ಗಗಳಿಗೆ ಕಡಿಮೆ ಹಣ ಇಟ್ಟಿದ್ದಾರೆ. ಎಸ್ಸಿ ಎಸ್ಟಿ ಹಣ ಬಳಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ರಾಜಕಾರಣಕ್ಕಾಗಿ, ವೋಟಿಗಾಗಿ ಎಸ್ಸಿ ಎಸ್ಟಿ ಹಣ ದುರ್ಬಳಕೆ ಆಗುತ್ತಿದೆ. ಖಜಾನೆ ಸುಭದ್ರವಾಗಿದೆ ಅಂತಾರೆ, ಹಾಗಾದ್ರೆ ಎಸ್ಸಿ ಎಸ್ಟಿಯವರ ಜೇಬಿಗೆ ಯಾಕೆ ಕೈ ಹಾಕಿದ್ದೀರಿ? ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಡೆಂಗ್ಯು ಜ್ವರ ಪ್ರಕರಣದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ತಿಲ್ಲ. ಮಂತ್ರಿಗಳು ಕೇವಲ ಸಭೆ ಮಾಡುತ್ತಿದ್ದಾರೆ. ಚಿಕಿತ್ಸೆ ಸಿಗದಿದ್ದರೆ ಸಾವು ನೋವುಗಳಾಗುತ್ತದೆ, ಜನ ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ, ಡಿಹೆಚ್‌ಓ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

ಅಶೋಕ‌ ಅವರ ನೇತೃತ್ವದಲ್ಲಿ ಶಿಗ್ಗಾಂವಿ ಉಪಚುನಾವಣೆ ವಿಚಾರ ಸಮಿತಿ ಮಾಡಿದ್ದೇವೆ. ಧನ್ಯವಾದ ಯಾತ್ರೆ ಶಿಗ್ಗಾಂವಿಯಲ್ಲಿ ಮಾಡುತ್ತೇನೆ. ಜುಲೈ 12ರಿಂದ ಯಾತ್ರೆ ಆರಂಭ ಮಾಡುತ್ತೇನೆ. ಒಂದುವರೆ ತಿಂಗಳುಗಳ‌ ಕಾಲ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಶಿಗ್ಗಾಂವಿಯಲ್ಲಿ ಪೋಸ್ಟರ್ ಭರಾಟೆ ನಡೆಯುವುದಿಲ್ಲ ಎಂದರು.

Exit mobile version