Site icon Vistara News

Mysore Dasara 2022 | ದಸರಾ ಉದ್ಘಾಟನೆಗೆ ಹೊಸ ಸಂಪ್ರದಾಯ; ಶುರುವಾಯ್ತು ನಾನಾ ಲೆಕ್ಕಾಚಾರ!

Mysore Dasara

ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ನಾಡಹಬ್ಬ-೨೦೨೨ರ ಉದ್ಘಾಟಕರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ದಸರಾ ಉದ್ಘಾಟಕರಾಗಿ (Mysore Dasara 2022) ಆಯ್ಕೆಯಾದ ಮೊದಲ ಹೊರರಾಜ್ಯದವರು ದ್ರೌಪದಿ ಮುರ್ಮು. ಇದರೊಂದಿಗೆ ರಾಜ್ಯ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಒಂದೇ ಬಾಣದಲ್ಲಿ ಎರಡು ಹಕ್ಕಿ ಹೊಡೆಯುವ ಯೋಜನೆ ಹಾಕಿಕೊಂಡಂತೆ ಭಾಸವಾಗುತ್ತಿದೆ.

ರಾಜಾಳ್ವಿಕೆ ಹಾಗೂ ಪ್ರಜಾಪ್ರಭುತ್ವದ ಕೊಂಡಿಯಾಗಿರುವ ನವರಾತ್ರಿ ಉತ್ಸವಕ್ಕೆ ಬರೋಬ್ಬರಿ 412 ವರ್ಷಗಳ ಇತಿಹಾಸವಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬ ಶುರುವಾಗಿದ್ದು 1610ರಲ್ಲಿ. ಕರ್ನಾಟಕ ಏಕೀಕರಣ ಚಳವಳಿಯೊಂದಿಗೆ 1973ರಿಂದ ರಾಜ್ಯ ಸರ್ಕಾರವೇ ‘ನಾಡಹಬ್ಬ’ವನ್ನಾಗಿ ಆಚರಿಸುತ್ತಾ ಬಂದಿದೆ.

‘ದಸರಾ ಉದ್ಘಾಟಕರು’ ಅನ್ನುವ ಪರಿಕಲ್ಪನೆ ಶುರುವಾಗಿದ್ದು 1999ರಿಂದ ಈಚೆಗೆ. ಸರ್ಕಾರದ ಅಧಿಕೃತ ಮಾಹಿತಿಗಳ ಪ್ರಕಾರ, ಇದುವರೆಗೆ ೨೨ ಗಣ್ಯರಿಗೆ ಉದ್ಘಾಟಕರು ಎನ್ನುವ ಗೌರವ ದೊರಕಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಗಣ್ಯರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡುವುದು ವಾಡಿಕೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ದೇಶದ ಅತ್ಯುನ್ನತ ‘ಸಾಂವಿಧಾನಿಕ ಹುದ್ದೆ’ಗೆ ಗೌರವ ನೀಡುವ ಮೂಲಕ ನಾಡಹಬ್ಬವನ್ನು ಸರ್ಕಾರಿ ಶಿಷ್ಟಾಚಾರದ ಚೌಕಟ್ಟಿಗೆ ಸಿಲುಕಿಸಿದಂತಾಗಿದೆ.

ಓಲೈಕೆಯ ಪ್ರಯತ್ನವೇ?

ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಗೆ ಆರ್.ಎಸ್.ಎಸ್ ಹಾಗೂ ಬಿಜೆಪಿಯ ಅಗ್ರಮಾನ್ಯ ನಾಯಕರು ಒಮ್ಮತದಿಂದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಅವರ ಗೆಲುವಿನೊಂದಿಗೆ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ ಎನ್ನುವ ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ದ್ರೌಪದಿ ಮುರ್ಮು ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಷದ ವರಿಷ್ಠರನ್ನು ಮೆಚ್ಚಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲೇ ಅತಿಹೆಚ್ಚು ಆದಿವಾಸಿ, ಬುಡಕಟ್ಟು ಸಮುದಾಯವರು ವಾಸ ಮಾಡುವುದು ಮತ್ತು ಹಾಡಿಗಳಿರುವ ಜಿಲ್ಲೆಗಳಲ್ಲಿ ಮೈಸೂರು ಕೂಡ ಒಂದು. ಈಗಲೂ ಬುಡಕಟ್ಟು ಸಮುದಾಯದವರು ಬಹುಸಂಖ್ಯಾತರು ವಾಸ ಮಾಡುವುದು ಕಾಡು ಮತ್ತು ಕಾಡಂಚಿನ ಗ್ರಾಮಗಳಲ್ಲಾಗಿದೆ. ಆದ್ದರಿಂದ ದ್ರೌಪದಿ ಮುರ್ಮು ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಮತದಾರರನ್ನು ಸೆಳೆಯಲು ಮುಂದಾಗಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ. ಇತ್ತ ರಾಜಕೀಯ ಲಾಭ-ನಷ್ಟಗಳ ಕಾರಣಕ್ಕೆ ಯಾರೂ ದ್ರೌಪದಿ ಮುರ್ಮು ಅವರನ್ನು ವಿರೋಧಿಸಲಾರರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸುವಿಕೆ

ಮೊದಲೆಲ್ಲ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೂ ಭಾಗವಹಿಸುತ್ತಿರಲಿಲ್ಲ. 1995ರಲ್ಲಿ ಮೊದಲ ಬಾರಿಗೆ ಎಚ್.ಡಿ.ದೇವೇಗೌಡ ನಾಡಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಪ್ರತಿ ಬಾರಿಯೂ ಸಿಎಂ ಭಾಗವಹಿಸುವ ಸಂಪ್ರದಾಯ ಪ್ರಾರಂಭವಾಯಿತು.

ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಸಾಹಿತ್ಯ, ಕಲೆ, ಧಾರ್ಮಿಕ, ವೈದ್ಯಕೀಯ ಹೀಗೆ ಹಲವು ಕ್ಷೇತ್ರಗಳ ಗಣ್ಯರೊಬ್ಬರ ಕೈಯಿಂದ ದಸರಾ ಉದ್ಘಾಟನೆಯಾಗುತ್ತಿತ್ತು. ಆದರೆ, ರಾಷ್ಟ್ರಪತಿ ಭಾಗವಹಿಸುತ್ತಿರುವುದು ಇದೇ ಮೊದಲು. 1992ರಲ್ಲಿ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮ ವಿಜಯ ದಶಮಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಆದರೆ, ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಅಥವಾ ಎಸ್‌ಪಿಜಿ ಭದ್ರತೆಯುಳ್ಳ ಗಣ್ಯರು ಭಾಗವಹಿಸುತ್ತಿರುವುದು ಇದೇ ಮೊದಲು. ಶ್ರೀಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಚಿಕ್ಕ ಜಾಗದಲ್ಲಿ ಕಾರ್ಯಕ್ರಮ ನಡೆಯುವುದರಿಂದ ಭದ್ರತೆ ಒದಗಿಸುವುದು ಕಷ್ಟ. ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದರೆ ವಿರೋಧ ಎದುರಿಸಬೇಕಾಗುತ್ತದೆ. ಹೀಗಾಗಿ ದ್ರೌಪದಿ ಮುರ್ಮು ಅವರ ಆಯ್ಕೆಯಿಂದಾಗಿ ಪೊಲೀಸರಿಗೆ ತಲೆಬಿಸಿ ಶುರುವಾಗಿದೆ.

ಇದನ್ನೂ ಓದಿ | ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

Exit mobile version