ರಂಗಸ್ವಾಮಿ ಎಂ. ಮಾದಾಪುರ, ಮೈಸೂರು
ಮೈಸೂರು ದಸರಾ (Mysore Dasara 2022) ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಕುಶಾಲುತೋಪು ಸಿಡಿಸುವ ತಾಲೀಮು ಸ್ಥಳ ಬದಲಾವಣೆಯಾಗಲು ಅರಮನೆಯ ಸುರಕ್ಷತೆ ಕಾರಣವಲ್ಲ, ಅದು ನೆಪವಷ್ಟೇ ಎಂಬುದು ಈಗ ಬಹಿರಂಗವಾಗಿದೆ. ವಾಹನ ನಿಲ್ದಾಣದ ಗುತ್ತಿಗೆದಾರನ ಹಿತ ಕಾಯಲು ಅಧಿಕಾರಿಗಳೇ ತಾಳಕ್ಕೆ ತಕ್ಕಂತೆ ಕುಣಿದಿರುವ ಸತ್ಯ ಗೊತ್ತಾಗಿದೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಕುಶಾಲುತೋಪು ಸಿಡಿಸುವ ಮೂರು ಸುತ್ತಿನ ತಾಲೀಮು ನಡೆಸುವುದು ವಾಡಿಕೆ. ಮೊದಲ ಸುತ್ತಿನ ತಾಲೀಮನ್ನು ಇತ್ತೀಚೆಗೆ ಅರಮನೆ ಕೋಟೆಗೆ ಹೊಂದಿಕೊಂಡಿರುವ ಕೋಟೆ ಮಾರಮ್ಮ ದೇವಾಲಯದ ಅಂಗಳದಲ್ಲೇ ನಡೆಸಲಾಗುತ್ತಿತ್ತು. ಆದರೆ, ಶುಕ್ರವಾರ ಎರಡನೇ ಸುತ್ತಿನ ತಾಲೀಮಿಗೆ ಸ್ಥಳ ಬದಲಾವಣೆ ಮಾಡಲಾಯಿತು. ಹಿಂದೆಲ್ಲ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಪೊಲೀಸ್ ಇಲಾಖೆಯ ಫೈರ್ ರೇಂಜ್‌ನಲ್ಲಿ ಕುಶಾಲುತೋಪು ಸಿಡಿಸುವ ತಾಲೀಮು ನಡೆಸಲಾಗುತ್ತಿತ್ತು. ಅಷ್ಟು ದೂರದವರೆಗೆ ಫಿರಂಗಿ ಗಾಡಿಗಳನ್ನು ಎಳೆದುಕೊಂಡು ಹೋಗುಬೇಕಿದ್ದರಿಂದ ಜಾಗವನ್ನು ಬದಲಾವಣೆ ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲೇ ಮೊದಲ ಬಾರಿಗೆ ದಸರಾ ವಸ್ತು ಪ್ರದರ್ಶನದ ಕಾರು ಪಾರ್ಕಿಂಗ್ ಜಾಗದಲ್ಲಿ ಎರಡನೇ ಸುತ್ತಿನ ತಾಲೀಮು ನಡೆಯಿತು. ಈ ಬದಲಾವಣೆಯು ‘ಗುತ್ತಿಗೆದಾರನ ಹಿತಾಸಕ್ತಿಯೇ ಕಾರಣ’ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿ “ವಿಸ್ತಾರ ನ್ಯೂಸ್”ಗೆ ಖಚಿತಪಡಿಸಿದ್ದಾರೆ.
ಅರಮನೆಗೆ ಹಾನಿ ನೆಪವಷ್ಟೇ
ಫಿರಂಗಿ ಗಾಡಿಗಳಿಗೆ ಸಿಡಿಮದ್ದು ತುಂಬಿ ಸಿಡಿಸುವುದರಿಂದ ಭಾರಿ ಪ್ರಮಾಣದ ಶಬ್ಧ ಬರುತ್ತದೆ. ಇದರಿಂದಾಗಿ ಐತಿಹಾಸಿಕ ಅರಮನೆಯ ಕಟ್ಟಡಕ್ಕೆ ಹಾನಿಯಾಗಬಹುದು. ಆದ್ದರಿಂದ ದೂರದ ಜಾಗದಲ್ಲಿ ತಾಲೀಮು ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅರಮನೆ ಆಡಳಿತ ಮಂಡಳಿಯ ಸಲಹೆ ಮೇರೆಗೆ ಪೊಲೀಸ್ ಇಲಾಖೆ ನಮಗೆ ಈ ಜಾಗ ಗುರುತಿಸಿಕೊಟ್ಟಿತು. ಪೊಲೀಸರೇ ಸ್ಥಳೀಯರಿಗೆ ಕುಶಾಲುತೋಪು ಸಿಡಿಸುವಾಗ ಶಬ್ದ ಬರುತ್ತದೆ. ಗಾಬರಿಯಾಗಬೇಡಿ ಎಂದು ಮಾಹಿತಿ ನೀಡಿದ್ದಾರೆ ಎಂದು ಡಿಸಿಎಫ್ ಡಾ.ವಿ. ಕರಿಕಾಳನ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ | Mysore Dasara 2022 | ಕುಶಾಲು ತೋಪು ಸದ್ದಿಗೆ ಬೆಚ್ಚಿ ಓಡಿದ ಶ್ರೀರಾಮ, ಭೀಮ, ಪಾರ್ಥಸಾರಥಿ, ಸುಗ್ರೀವರು!
ಐತಿಹಾಸಿಕ ಫಿರಂಗಿ ಗಾಡಿಗಳಿಗೆ ಗನ್ಪೌಡರ್ ಒಳಗೊಂಡ ಸಿಡಿಮದ್ದು ತುಂಬಿ ಸಿಡಿಸುವುದರಿಂದ ಭಾರಿ ಶಬ್ದ ಹೊರಹೊಮ್ಮುತ್ತದೆ ಎಂಬುದೇನೋ ಸತ್ಯ. ಆದರೆ, ಆ ಶಬ್ದದ ಪ್ರಮಾಣ ಪಟಾಕಿಗಿಂತಲೂ ಕಡಿಮೆ ಪ್ರಮಾಣದ್ದು ಎಂಬುದು ವೈಜಾನಿಕವಾಗಿ ಸಾಬೀತಾಗಿದೆ.
ಎರಡನೇ ಸುತ್ತಿನ ಕುಶಾಲುತೋಪು ಸಿಡಿಸುವ ತಾಲೀಮು ಸಂದರ್ಭದಲ್ಲಿ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಶಬ್ದದ ಪ್ರಮಾಣವನ್ನು ದಾಖಲಿಸಿದರು. ಕುಶಾಲುತೋಪುಗಳಿಂದ ಸರಾಸರಿ 92.5 ಡೆಸಿಬಲ್ ಶಬ್ದ ಹೊರಹೊಮ್ಮಿದೆ. ಇದು ದೀಪಾವಳಿ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಿಂತಲೂ ಕಡಿಮೆ ಪ್ರಮಾಣದ ಸದ್ದು ಎಂಬುದು ಗಮನಾರ್ಹವಾದ ಅಂಶ. ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಪಟಾಕಿ ಗರಿಷ್ಠ ಶಬ್ದವು 120 ಡೆಸಿಬಲ್ ಹಾಗೂ ಫಿರಂಗಿ ಗಾಡಿಗಳಿಂದ ಹೊರಹೊಮ್ಮುವ ಸರಾಸರಿ ಶಬ್ದವು 92.5 ಡೆಸಿಬಲ್ ಆಗಿದೆ. ಅಂದರೆ ಶಬ್ದದಿಂದ ಅರಮನೆಗೆ ಹಾನಿಯಾಗುತ್ತದೆ ಎಂಬುದು ಹುಸಿ ಆತಂಕವಷ್ಟೆ.
ಗುತ್ತಿಗೆದಾರನಿಗೆ ನಷ್ಟ
ಕೋಟೆ ಮಾರಮ್ಮ ದೇವಾಲಯದ ಆವರಣ ವರಹಸ್ವಾಮಿ ದೇವಾಲಯ ಸಮೀಪದ ಗೇಟ್ಗೆ ಹೊಂದಿಕೊಂಡಿದೆ. ಅರಮನೆಗೆ ಬರುವ ಪ್ರವಾಸಿಗರು ಇದೇ ಜಾಗದಲ್ಲಿ ಕಾರು, ಟಿಟಿ ಮುಂತಾದ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಪಾರ್ಕಿಂಗ್ ಶುಲ್ಕದ ರೂಪದಲ್ಲಿ ಗುತ್ತಿಗೆದಾರನಿಗೆ ಸಾವಿರಾರು ರೂ. ಸಂಪಾದನೆಯಾಗುತ್ತದೆ. ಕುಶಾಲುತೋಪು ಸಿಡಿಸುವ ಮಧ್ಯಾಹ್ನದವರೆಗೂ ವಾಹನ ನಿರ್ಬಂಧ ಮಾಡುವುದರಿಂದ ಗುತ್ತಿಗೆದಾರನಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದಲೇ ಸ್ಥಳ ಬದಲಾವಣೆ ಮಾಡಲಾಗಿದೆ. ಆನೆ, ಕುದುರೆ, ಐತಿಹಾಸಿಕ ಫಿರಂಗಿ ಗಾಡಿಗಳು ಎಲ್ಲವನ್ನೂ ಬೇರೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿ ತಾಲೀಮು ನಡೆಸುವುದು ತ್ರಾಸದಾಯಕ. ಇದೆಲ್ಲವೂ ಗೊತ್ತಿದ್ದೂ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ, ಅಶ್ವಾರೋಹಿ ಪಡೆಯ ಡಿಸಿಪಿ, ಡಿಎಫ್ಒ ಡಾ.ವಿ.ಕರಿಕಾಳನ್ ಮುಂತಾದ ಎಲ್ಲ ಅಧಿಕಾರಿಗಳೂ ಯಾರದ್ದೋ ಮಾತು ಕೇಳಿ ಗುತ್ತಿಗೆದಾರನ ಅನುಕೂಲಕ್ಕೆ ತಕ್ಕಂತೆ ನಡೆದುಕೊಂಡಿದ್ದು ಅಚ್ಚರಿಯ ಬೆಳವಣಿಗೆಯಾಗಿದೆ.
ಇದನ್ನೂ ಓದಿ | Mysore Dasara 2022 | ದಸರಾ ಕುಸ್ತಿಗೆ ಅಖಾಡ ಸಜ್ಜು, ಈ ಬಾರಿ ಅದ್ಧೂರಿ ಪಂದ್ಯಾವಳಿ ಆಯೋಜನೆಗೆ ಸಿದ್ಧತೆ