Site icon Vistara News

Mysore Dasara 2022 | ಈ ಬಾರಿ ಇಂಗ್ಲಿಷ್‌ನಲ್ಲಿ ಆಹ್ವಾನ ಪತ್ರಿಕೆ; ಒಂದು ದಿನ ಪುನೀತ್‌ಗೆ ಮೀಸಲು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ (Mysore Dasara 2022) ದಿನಗಣನೆ ಶುರುವಾಗಿದ್ದು, ಈ ಬಾರಿಯ ಆಹ್ವಾನ ಪತ್ರಿಕೆಯು ಇಂಗ್ಲಿಷ್‌ನಲ್ಲಿ ಇರಲಿದೆ. ನಾಡಹಬ್ಬ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗುವುದರಿಂದ ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲಿಷ್‌ನಲ್ಲಿ ಮುದ್ರಣಗೊಳ್ಳಲಿದೆ.

ದಸರಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ರೈತ ಹಾಗೂ ಗ್ರಾಮೀಣ ದಸರಾ ಸೆಪ್ಟೆಂಬರ್ 23ಕ್ಕೆ ಆರಂಭಗೊಂಡು‌ 25ಕ್ಕೆ ಅಂತ್ಯವಾಗಲಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಅರಮನೆಯಲ್ಲಿ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೆ.26ಕ್ಕೆ ಯೋಗ ದಸರಾ, ಸೆ.27ಕ್ಕೆ ಯುವ ದಸರಾ ಶುರುವಾಗಲಿದ್ದು 7 ದಿನಗಳ ಕಾಲ ನಡೆಯಲಿದೆ. 10 ದಿನಗಳ ಆಹಾರ ಮೇಳ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಪ್ಪು ದಸರಾ
ಸ್ಯಾಂಡಲ್‌ವುಡ್‌ ನಟ ಡಾ. ಪುನೀತ್‌ ರಾಜಕುಮಾರ್‌ ನೆನಪಿಗಾಗಿ ಈ ಬಾರಿ ದಸರಾದಲ್ಲಿ ಒಂದು ದಿನವನ್ನು ಮೀಸಲಿಡಲಾಗುತ್ತಿದೆ. ಒಂದು ದಿನ ಅಪ್ಪು ಹಾಡಿಗಾಗಿ ಮೀಸಲಿಡಲಾಗಿದ್ದು, ಎಲ್ಲರ ಒತ್ತಾಯದ ಮೇರೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ. ಜತೆಗೆ ಬೆಟ್ಟದ ಹೂ ಸಿನಿಮಾವನ್ನು ಶಕ್ತಿಧಾಮದ ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ. ಯುವ ದಸರಾ ಉದ್ಘಾಟಕರು ಸೇರಿದಂತೆ ಕಾರ್ಯಕ್ರಮದ ಕುರಿತಾದ ಅಂತಿಮ ಪಟ್ಟಿ ಸೋಮವಾರ ಸಿದ್ಧವಾಗಲಿದೆ ಎಂದು ಸಚಿವರು ತಿಳಿಸಿದರು.

ಗೋಲ್ಡ್‌ ಕಾರ್ಡ್‌ ಕೊಡಲು ಒತ್ತಾಯ
ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಬರುತ್ತಿರುವ ಹಿನ್ನೆಲೆ ವೇದಿಕೆ ಮೇಲೆ ಯಾರು ಇರಬೇಕೆಂದು ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬಿಡಲಾಗಿದ್ದು, ಈಗಾಗಲೇ ಸ್ಥಳೀಯ ಶಾಸಕರು, ಸಚಿವರಿಗೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ 43 ಜನರು ವೇದಿಕೆಯಲ್ಲಿರುತ್ತಿದ್ದರು. ಈ ಬಾರಿ ಕೇವಲ 10 ಜನರಿಗೆ ಮಾತ್ರ ವೇದಿಕೆ ಮೇಲೆ ಅವಕಾಶವಿದೆ ಎಂದು ಹೇಳಲಾಗುತ್ತಿದೆ ಎಂದು ಸಚಿವ ಸೋಮಶೇಖರ್‌ ತಿಳಿಸಿದರು.

ಅರಮನೆಯಲ್ಲಿ ದಸರಾ ವೀಕ್ಷಣೆ ಹಾಗೂ ಪಂಚಿನ ಕವಾಯತು ಮೈದಾನಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಷ್ಟು ಪಾಸ್ ಕೊಡಬೇಕು ಎಂಬುದು ತೀರ್ಮಾನಿಸಲಾಗುವುದು. ದಸರಾ ಉದ್ಘಾಟನೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ಎರಡು ಸಾವಿರ ಜನರಿಗೆ ಅವಕಾಶ ನೀಡುವ ಸಾಧ್ಯತೆ ಇದ್ದು, ಈ‌ ಬಾರಿ ಪಾಸ್‌ನಲ್ಲಿ ಗೊಂದಲ ಆಗುವುದಿಲ್ಲ ಎಂದರು.

ಎಂಎಲ್ಎ, ಎಂಪಿ, ಸಂಸದರು ಪಾಲಿಕೆ ಸದಸ್ಯರಿಗೆ ಎಷ್ಟು ಪಾಸ್ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಅವರು ಕೇಳಿದಷ್ಟು ಪಾಸ್ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಪಾಸ್ ಕೊಡುವುದಿಲ್ಲ ಎಂದ ಸಚಿವರು, ಈಗಾಗಲೇ ಕ್ಷೇತ್ರದ ಜನರಿಗೆ ದಸರಾ ಜಂಬೂಸವಾರಿ ಹಾಗೂ ಪಂಚಿನ ಕವಾಯತು ಕಾರ್ಯಕ್ರಮ ಪಾಸ್ ಕೇಳಬೇಡಿ ಎಂದಿದ್ದೇನೆ. ಹಿಂದೆ ಏನೆಲ್ಲ ಗೊಂದಲಗಳಾಗಿದೆ ನನಗೆ ತಿಳಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಇದನ್ನೂ ಓದಿ | ಇದು ಅಧಿಕೃತ | ಮೈಸೂರು ಜಂಬೂ ಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ನರೇಂದ್ರ ಮೋದಿ ಬರುವುದಿಲ್ಲ

Exit mobile version