ಮೈಸೂರು: ಇತ್ತ ಮೈಸೂರು ದಸರಾ 2022ರ (Mysore Dasara 2022) ಸಂಭ್ರಮಕ್ಕೆ ರಾಷ್ಟ್ರದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರಿಂದ ಚಾಲನೆ ದೊರೆತಿದ್ದರೆ, ಅತ್ತ ರಾಜವಂಶಸ್ಥರ ಖಾಸಗಿ ದರ್ಬಾರ್ ಆರಂಭವಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಸೋಮವಾರ ಬೆಳಗ್ಗೆ ವಿಧಿವತ್ತಾಗಿ ಚಾಲನೆಗೊಂಡಿತು. ಸಿಂಹಾಸಾರೋಹಣ ಪೂಜಾವಿಧಿವಿಧಾನಗಳ ಬಳಿಕ ವಂದಿ ಮಾಗದರಿಂದ ಬಹುಪರಾಕ್ ಘೋಷಣೆ ಹಾಗೂ ರಾಜಪರಿವಾರದಿಂದ ಗೌರವ ವಂದನೆ ಸಲ್ಲಿಕೆ ಮೂಲಕ ಸಂಪನ್ನಗೊಂಡಿದೆ.
ಅರಮನೆಯಲ್ಲಿ ಯದುವಂಶದ ಧಾರ್ಮಿಕ ಕೈಂಕರ್ಯಗಳು ಮೇಳೈಸಿದ್ದು, ಅರಮನೆಯ ದರ್ಬಾರ್ ಹಾಲ್‌ನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 8ನೇ ಬಾರಿ ಸಿಂಹಾಸನಾರೋಹಣ ಮಾಡಿದರು. ವೇದ-ಘೋಷಗಳೊಂದಿಗೆ ಪೂಜಾ ವಿಧಿವಿಧಾನಗಳನ್ನು ಪೂರೈಸಲಾಯಿತು.
ಅರಮನೆ ಪುರೋಹಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯಕ್ಕೆ ಚಾಲನೆ ದೊರೆತಿದ್ದು, ಸಿಂಹ ಶಕ್ತಿ ಆರೋಹಣ ಪೂಜೆಯನ್ನು ನೆರವೇರಿಸಲಾಯಿತು. ಆಸನಕ್ಕೆ ಸಿಂಹದ ಮೂರ್ತಿ ಒರಗಿಸಿಟ್ಟು ಧಾರ್ಮಿಕ ವಿಧಿವಿಧಾನ ಪೂರೈಸಲಾಯಿತು. ಸಿಂಹ ಶಕ್ತಿ ಆರೋಹಣದ ಬಳಿಕ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅವರು ಸಿಂಹದ ಮೂರ್ತಿಗೆ ಪೂಜೆ ನೆರವೇರಿಸಿದರು.
ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದರ್ಬಾರ್ ಹಾಲ್‌ನಲ್ಲಿ ಪಾರಂಪರಿಕ ವೇಷದಲ್ಲಿ ಅರಮನೆ ಸಿಬ್ಬಂದಿ ಪಾಲ್ಗೊಂಡಿದ್ದರು. ರಾಜ ಪರಿವಾರದವರು ಪಟ್ಟದ ಕತ್ತಿ ಹಿಡಿದು ನಿಂತು ರಾಜಪರಂಪರೆಗೆ ಮೆರಗು ತಂದರು. ಇದೇ ವೇಳೆ ಗಣಪತಿ ಹೋಮ, ಮನೆ ದೇವತೆ ಶ್ರೀ ಚಾಮುಂಡೇಶ್ವರಿಗೆ ಯದುವೀರ ಒಡೆಯರ್ ಪೂಜೆ ಸಲ್ಲಿಸಿದರು.
ರಾಜಪೋಷಾಕಿನಲ್ಲಿ ಕಂಗೊಳಿಸಿದ ಯದುವೀರ್
ತಿಳಿ ನೀಲಿ ವರ್ಣದ, ಮುತ್ತಿನ ಮಣಿ ಹೊಂದಿರುವ ರಾಜರ ಶೈಲಿಯ ಮೈಸೂರು ಪೇಟವನ್ನು ಧರಿಸಿದ್ದ ಯದುವೀರ್, ರೇಷ್ಮೆ ಕುರ್ತಾ, ಪೈಜಾಮ, ಶಲ್ಯ ತೊಟ್ಟಿದ್ದರು. ರಾಜ ಲಾಂಛನ ಗಂಢಭೇರುಂಡವನ್ನೊಳಗೊಂಡ ರತ್ನಖಚಿತ ಸರ, ಪರಂಪರಾಗತ ಆಭರಣಗಳಿಂದ ಮೈಸೂರು ರಾಜರು ಕಂಗೊಳಿಸುತ್ತಿದ್ದರು.
ಏನಿದು ರತ್ನಖಚಿತ ಸಿಂಹಾಸನ?
ರತ್ನಖಚಿತ ಸಿಂಹಾಸನಕ್ಕೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಮಹಾಭಾರತದಲ್ಲಿ ಧರ್ಮರಾಜ ಕುಳಿತ ಸಿಂಹಾಸನ ಎಂಬುದು ಆಸ್ತಿಕರ ನಂಬಿಕೆಯಾಗಿದೆ. ವಿಜಯನಗರ ಸಾಮ್ರಾಟರಿಂದ ಮೈಸೂರು ಅರಸರಿಗೆ ಬಳುವಳಿಯಾಗಿ ಈ ಸಿಂಹಾಸನ ಬಂದಿದೆ. ಮೊದಲು ಮರದ ಪೀಠ, ಛತ್ರಿ ಮಾತ್ರ ಈ ಸಿಂಹಾಸನಕ್ಕೆ ಇತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೆಟ್ಟಿಲುಗಳ ರಚನೆ ಮಾಡಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಿಂಹಾಸನದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಲಾಯಿತು. ವರ್ಷಪೂರ್ತಿ ಅರಮನೆ ಖಜಾನೆಯಲ್ಲಿಡಲಾಗುತ್ತಿದ್ದ ರತ್ನಖಚಿತ ಸಿಂಹಾಸನವನ್ನು ಪ್ರತಿವರ್ಷ ನವರಾತ್ರಿ ಸಮಯದಲ್ಲಿ ಹೊರಗೆ ತೆಗೆಯಲಾಗುತ್ತದೆ. ಇತ್ತೀಚೆಗೆ ಖಜಾನೆಯಿಂದ ಹೊರಗೆ ತೆಗೆದು ಸಿಂಹಾಸನಕ್ಕೆ ಪೂಜೆಗೈದು ಜೋಡಣೆ ಮಾಡಲಾಗಿತ್ತು.
ಇದನ್ನೂ ಓದಿ | Mysuru Dasara | ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ಆಗಮಿಸಿದ ಮುರ್ಮು