ಮೈಸೂರು: ಪ್ರೀತಿಸಿ ಮದುವೆಯಾಗಿರುವ ಪ್ರಾಪ್ತ ವಯಸ್ಕ ನವದಂಪತಿಯನ್ನು ಬೇರೆ ಮಾಡಲು ಪೋಷಕರು ಪ್ರಯತ್ನಿಸಿದರೆ ಇತ್ತ ನ್ಯಾಯ ಕೊಡಿಸಬೇಕಾದ ಹುಣಸೂರು ಪೊಲೀಸರೇ ದಂಪತಿಯನ್ನು ದೂರ ಮಾಡಲು ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್ ಮತ್ತು ಚೋಳೇನಹಳ್ಳಿ ಗ್ರಾಮದ ಅನನ್ಯಾ ಪ್ರೀತಿಸುತ್ತಿದ್ದರು. ಇಬ್ಬರ ಪೋಷಕರು ಮದುವೆಗೆ ಒಪ್ಪದಿದ್ದಾಗ, ಮಾರ್ಚ್ 28ರಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಿಲುವಾಗಿಲು-ಬೆಸೂರಿನಲ್ಲಿರುವ ಶ್ರೀ ಬಾಲ ತ್ರಿಪುರಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ವಿವಾಹಕ್ಕೆ ಸ್ನೇಹಿತರು ಸಾಥ್ ಕೊಟ್ಟಿದ್ದರು.
ವಿವಾಹ ಮುಗಿಸಿ ಹುಣಸೂರು ಬಳಿಯ ಕೆಫೆ ಕಾಫಿ ಡೇ ಬಳಿ ಆಗಮಿಸುತ್ತಿದ್ದಾಗ ಐದಾರು ಜನರು ಅಡ್ಡಗಟ್ಟಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೋಟೆಲ್ ಬಳಿ ಇದ್ದವರು ಹಾಗೂ ಸ್ಥಳೀಯರು ಆಗಮಿಸಿ ನವದಂಪತಿ ಹಾಗೂ ಹಲ್ಲೆಗೆ ಪ್ರಯತ್ನಿಸಿದವರನ್ನು ಸಮೀಪದಲ್ಲಿದ್ದ ಹುಣಸೂರು ಠಾಣೆಗೆ ಕರೆದೊಯ್ದಿದ್ದಾರೆ.
ಈ ಸಂದರ್ಭದಲ್ಲಿ ಪ್ರೇಮಿಗಳಿಗೆ ಸಹಕರಿಸುವ ಬದಲಿಗೆ, ಹಲ್ಲೆಗೆ ಒಳಗಾದವರನ್ನೇ ಪೊಲೀಸರು ಬೆಂಬಲಿಸಿದ್ದಾರೆ ಎಂದು ಅಭಿಷೇಕ್ ಹಾಗೂ ಸ್ನೇಹಿತರು ದೂರಿದ್ದಾರೆ. ಠಾಣೆಗೆ ಕರೆತಂದಾಗ, ತಾನು ಅಪ್ಪ ಅಮ್ಮನ ಬಳಿಗೆ ಹೋಗುವುದಿಲ್ಲ ಎಂದು ಅನನ್ಯಾ ಸ್ಪಷ್ಟವಾಗಿ ಹೇಳಿದ್ದಾಳೆ. ಅಭಿಷೇಕ್ ಜತೆಗೆ ಕಳಿಸಿಕೊಡುವಂತೆ ಕೇಳಿದರೂ ಪೊಲೀಸರು, ಹಲ್ಲೆ ಮಾಡಿದವರ ಜತೆಗೇ ಯುವತಿಯನ್ನು ಕಳಿಸಿಕೊಟ್ಟಿದ್ದಾರೆ. ಒಂದು ದಿನ ಕಳೆದರೂ ಅವರ ಕಡೆಯವರು ಯಾರೂ ಬಂದಿಲ್ಲ. ಪೊಲೀಸರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಭಿಷೇಕ್‌ಗೆ ಏನಾದರೂ ಆದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನನ್ಯಾ ಹೇಳುತ್ತಿದ್ದಳು. ಈಗ ಪೊಲೀಸರ ವರ್ತನೆಯಿಂದ ಬೇಸತ್ತು ಆಕೆ ಅಪಾಯ ಮಾಡಿಕೊಂಡರೆ ಪೊಲೀಸರೇ ಹೊಣೆ ಹೊರಬೇಕಾಗುತ್ತದೆ ಎಂದು ಠಾಣೆ ಎದುರು ಆರೋಪ ಮಾಡಿದ್ದಾರೆ. ತನಗೆ ತನ್ನ ಪತ್ನಿಯನ್ನು ಮರಳಿಸಿ ನ್ಯಾಯ ಕೊಡಿಸಿ ಎಂದು ಯುವಕ ಅಭಿಷೇಕ್ ಅಂಗಲಾಚಿದ್ದಾನೆ.