ಮೈಸೂರು: ಅದೊಂದು ಆನೆ. ಹೆಸರು ಕುಮಾರಿ (Elephant Kumari). ವಯಸ್ಸು ಸುಮಾರು 60 ವರ್ಷ. ತನ್ನ ಯೌವನದಲ್ಲಿ (Animal Love) ಸರ್ಕಸ್ ಕಂಪನಿಯಲ್ಲಿ ಎಲ್ಲ ಆಕರ್ಷಣೆಯ ಕೇಂದ್ರವಾಗಿತ್ತು. ಬಳಿಕ ಅದನ್ನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಆನೆ ಕ್ಯಾಂಪ್‌ಗೆ (Harave Elephant Camp) ತರಲಾಗಿತ್ತು. ಕೆಲವು ದಿನಗಳ ಹಿಂದೆ ʻಕುಮಾರಿʼಯ ಬಲಗಾಲಿಗೆ (Wounded in right leg) ತೀವ್ರ ಗಾಯವಾಗಿತ್ತು.
ವೈದ್ಯರ ತಂಡ ಎಷ್ಟೇ ಔಷಧೋಪಚಾರ ಮಾಡಿದರೂ ಅದು ನೆಲಕ್ಕೆ ಕಾಲಿಟ್ಟ ಕೂಡಲೇ ಔಷಧ ಮಣ್ಣುಪಾಲಾಗುತ್ತಿತ್ತು. ಪ್ರತಿ ದಿನ ಅದನ್ನು ಮಲಗಿಸಿ ಔಷಧ ಹಾಕುವುದು, ಅದು ಕಾಲಿಟ್ಟ ಕೂಡಲೇ ಔಷಧವೆಲ್ಲ ವ್ಯರ್ಥವಾಗುವುದು, ಆನೆ ನೋವಿನಿಂದ ಕಣ್ಣೀರು ಹಾಕುವುದು ನಡೆದೇ ಇತ್ತು. ಆಗ ಒಬ್ಬ ಡಾಕ್ಟರ್‌ಗೆ ಒಂದು ಉಪಾಯ ಹೊಳೆಯಿತು. ಆನೆಗೆ ಚಪ್ಪಲಿ ಹೊಲಿಸಿದರೆ (Sandal to Elephant) ಹೇಗೆ?
ಹೀಗೆ ಯೋಚನೆ ಬಂದಿದ್ದೇ ತಡ ಅವರು ಅದಕ್ಕೆ ಏನನ್ನು ಬಳಸೋಣ ಎಂದು ಚಿಂತನೆ ನಡೆಸಿದರು. ಆಗ ಅವರಿಗೆ ಹೊಳೆದದ್ದು ವಾಹನದ ಟಯರ್. ವಾಹನದ ಟಯರ್ ಬಳಸಿ ಚಪ್ಪಲಿಯನ್ನು ತಯಾರಿಸಿದ ಅವರು ಕುಮಾರಿಯ ಕಾಲಿಗೆ ಕಟ್ಟಿದರು. ಕುಮಾರಿಯ ಕಾಲಿನ ಪಾದದ ಅಡಿಯ ಗಾಯಕ್ಕೆ ಮದ್ದು ಹಚ್ಚಿ ಚಪ್ಪಲಿ ಹಾಕಿ ಬಿಟ್ಟ ಬಳಿಕ ಗಾಯ ವಾಸಿಯಾಗುತ್ತಿದೆ. ಕುಮಾರಿಯ ನೋವೂ ಕಡಿಮೆಯಾಗಿದೆ. ನೋವಿನಿಂದ ಕಣ್ಣೀರು ಹಾಕುತ್ತಿದ್ದ ಆನೆ ಈಗ ಕೃತಜ್ಞತೆಯ ಕಣ್ಣೀರು ಸುರಿಸುತ್ತಿದೆ.
ಯಾರು ಈ ದೇವತಾ ಮನುಷ್ಯನಂಥ ಡಾಕ್ಟರ್?
ಅಂದ ಹಾಗೆ, ಇಂಥಹುದೊಂದು ಐಡಿಯಾ ಬಂದಿದ್ದು ಆನೆಯ ಅರ್ಧ ವಯಸ್ಸಿನ ಒಬ್ಬ ಯುವ ಪಶುವೈದ್ಯರಿಗೆ. ಹೌದು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯರಾಗಿರುವ 29 ವರ್ಷದ ಡಾ. ರಮೇಶ್ (Veternary surgeon Dr Ramesh) ಅವರೇ ಆನೆಯ ನೋವಿಗೆ ಮನಸಿನಿಂದ ಸ್ಪಂದಿಸಿ ಹೊಸ ಪ್ರಯೋಗ ಮಾಡಿದವರು.
ಡಾ ರಮೇಶ್ ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಛತ್ರದ ಹೊಸಹಳ್ಳಿ ಗ್ರಾಮದವರು. ಕಳೆದ 5 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಪಶುವೈದ್ಯರಾಗಿದ್ದಾರೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವ ಇವರು ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅತಿ ಕಡಿಮೆ ಅವಧಿಯಲ್ಲಿ ತಮ್ಮ ಕೆಲಸದಲ್ಲಿ ಸೈ ಅನಿಸಿಕೊಂಡಿದ್ದಾರೆ.
ನಾಡಿಗೆ ಬಂದ ಪ್ರಾಣಿಗಳನ್ನು ಕಾಡಿಗೆ ಬಿಡುವುದರಲ್ಲಿ ಪರಿಣಿತ
ಡಾ. ರಮೇಶ್ ಅವರು ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳನ್ನು ಸುರಕ್ಷಿತವಾಗಿ ವಾಪಸ್ಸು ಕಾಡಿಗೆ ಕಳುಹಿಸುವುದರಲ್ಲಿ ಪರಿಣಿತ. ಇದುವರೆಗೆ ಅವರು ಆರು ಹುಲಿ ಕಾರ್ಯಾಚರಣೆ 35 ಆನೆ ಕಾರ್ಯಾಚರಣೆ ಹಾಗೂ 50ಕ್ಕೂ ಹೆಚ್ಚು ಚಿರತೆಗಳನ್ನು ನಾಡಿನಿಂದ ಕಾಡಿಗೆ ವಾಪಸ್ಸು ಕಳುಹಿಸಿದ್ದಾರೆ.
ಮನೆಯಲ್ಲಿದ್ದವು ಪ್ರಾಣಿಗಳು, ಇವರಿಗಿತ್ತು ಪ್ರೀತಿ
ರಮೇಶ್ ಅವರ ಹೊಸಹಳ್ಳಿ ಮನೆಯಲ್ಲಿ ಸಾಕಷ್ಟು ಜಾನುವಾರು, ಪ್ರಾಣಿಗಳು ಇದ್ದವು. ಹಸು, ಕರು, ಎಮ್ಮೆ, ನಾಯಿ, ಬೆಕ್ಕು ಇವುಗಳನ್ನು ಕಂಡರೆ ರಮೇಶ್‌ಗೆ ಎಲ್ಲಿಲ್ಲದ ಪ್ರೀತಿ. ಅವುಗಳ ಜತೆಗೇ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ, ಆವುಗಳಿಗೆ ಗಾಯವಾದಾಗ ಅನಾರೋಗ್ಯ ಕಾಡಿದಾಗ, ಅವು ನರಳುವುದನ್ನು ನೋಡಿ ಇವರಿಗೆ ತೀವ್ರ ಸಂಕಟವಾಗುತ್ತಿತ್ತು. ಅದರಲ್ಲೂ ಸಾಕು ಪ್ರಾಣಿಗಳು ಚಿಕಿತ್ಸೆ ಸಿಗದೆ ಮೃತಪಟ್ಟಾಗ ಇವರನ್ನು ತುಂಬ ಕಾಡುತ್ತಿತ್ತು.
ಬಾಲ್ಯದಿಂದಲೇ ತಾನೊಬ್ಬ ಪಶು ವೈದ್ಯನಾಗಬೇಕು ಎಂದು ಕನಸು ಕಾಣುತ್ತಿದ್ದ ಅವರು ಬಳಿಕ ಹಾಸನದ ಪಶುವೈದ್ಯಕೀಯ ಕಾಲೇಜು ಸೇರಿ ಪದವಿ ಪಡೆದರು. ಬಳಿಕ ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಣಿಗಳ ಶಸ್ತ್ರಚಿಕಿತ್ಸೆ ಹಾಗೂ ರೇಡಿಯಾಲಜಿಯ ಕೋರ್ಸ್ ಮಾಡಿದರು. 2018ರಲ್ಲಿ ಅವರು ತಮ್ಮ ಕನಸನ್ನು ಪೂರೈಸಿಕೊಂಡು ಪ್ರಾಣಿಗಳ ಡಾಕ್ಟರ್ ಆದರು.
ತಮ್ಮ 24ನೇ ವಯಸ್ಸಿನಲ್ಲಿ ಅವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿತು. ಮೊದಲು ಬನ್ನೇರುಘಟ್ಟದ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಅವರಿಗೆ ಕೆಲಸ. ಅಲ್ಲಿನ ಅಗಾಧ ಅವಕಾಶಗಳನ್ನು ಬಳಸಿಕೊಂಡು ಶ್ರದ್ಧೆಯಿಂದ ಕಲಿತರು. ಅಲ್ಲಿ ಸಿಂಹ, ಹುಲಿಮರಿಗಳಿಗೆ ಚಿಕಿತ್ಸೆ ನೀಡಿ ಹೆಸರಾದರು.
ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತದೆ ಈ ಬೆಕ್ಕು!
2021ರಲ್ಲಿ ಅವರು ಮೈಸೂರು ಜಿಲ್ಲಾ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶಿಫ್ಟ್ ಆದರು. ಮೈಸೂರು ದಸರಾ ಮಹೋತ್ಸವ ಕಾಲದಲ್ಲಿ ಆನೆಗಳನ್ನು ಅತ್ಯಂತ ಜತನದಿಂದ ನೋಡಿಕೊಂಡರು. ಅದರಲ್ಲೂ ಕೊರೊನಾ ಕಾಲದಲ್ಲಿ ಆನೆಗಳನ್ನು ಮಕ್ಕಳಂತೆ ನೋಡಿಕೊಂಡದ್ದು ಅವರ ಪ್ರೀತಿಗೆ ಒಂದು ದೊಡ್ಡ ನಿದರ್ಶನ. ಈ ಪ್ರಾಣಿ ಪ್ರೀತಿಯ ಡಾಕ್ಟರ್‌ಗೆ ಕೈಮುಗಿಯೋಣ ಅಲ್ಲವೇ?