Site icon Vistara News

CM Siddaramaiah : ಎಲ್ಲ ಸರ್ಕಾರಿ ಆಸ್ಪತ್ರೆಗಳು ಜಯದೇವದಂತೆ ಇರಲು ಯಾಕೆ ಸಾಧ್ಯವಿಲ್ಲ: ಸಿಎಂ ಪ್ರಶ್ನೆ

CM Siddaramaiah Jayadeva Hospital

ಮೈಸೂರು: ʻʻಜಯದೇವ ಆಸ್ಪತ್ರೆಯಲ್ಲಿ (Jayadeva Hospital) ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಅಂತ ಕೇಳಿದ್ದೇನೆ. ನಾನು ಯಾವತ್ತೂ ಅಲ್ಲಿಗೆ ಹೋಗಿಲ್ಲ. ಜಯದೇವ ಆಸ್ಪತ್ರೆಯಲ್ಲಿ ಸಿಗುವ ಒಳ್ಳೆಯ ಚಿಕಿತ್ಸೆ ವ್ಯವಸ್ಥೆ ಬೇರೆ ಸರ್ಕಾರಿ ಆಸ್ಪತ್ರೆಯಲ್ಲಿ ಯಾಕೆ ಸಾಧ್ಯವಿಲ್ಲ?ʼʼ- ಹೀಗೆಂದು ಪ್ರಶ್ನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು. ಕಿದ್ವಾಯಿ ಸ್ಮಾರಕ (Kidwai memorial Hospital) ಗಂಥಿ ಸಂಸ್ಥೆಯ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ (Peripheral cancer Center) ಕಟ್ಟಡದ ಶಂಕುಸ್ಥಾಪನೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ʻʻನಾನು ಸಿಎಂ ಆಗುವವರೆಗೂ ಮೈಸೂರಲ್ಲಿ ಒಂದು ಜಿಲ್ಲಾಸ್ಪತ್ರೆ ಇರಲಿಲ್ಲ. ಹಿಂದಿನ ಸರ್ಕಾರ ಕಿದ್ವಾಯಿ ಆಸ್ಪತ್ರೆ ಆರಂಭಿಸಿರಬಹುದು. ಆದರೆ ದುಡ್ಡು ಕೊಡಲಿಲ್ಲ. ನಾನು ದುಡ್ಡು ಕೊಟ್ಟಿದ್ದೇನೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನು. ಇಲ್ಲಿ ಹಾರ್ಟ್, ಲಿವರ್, ಕಿಡ್ನಿ ಎಲ್ಲವೂ ಟಾನ್ಸ್‌ಫರ್‌ ಮಾಡುತ್ತಾರೆ. ಉಳಿದಿರೋದು ಬ್ರೈನ್ ಮಾತ್ರʼʼ ಎಂದು ನಕ್ಕರು ಸಿಎಂ ಸಿದ್ದರಾಮಯ್ಯ.

ಮೈಸೂರಿಗೆ ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್, ಕಿದ್ವಾಯಿ ಆಸ್ಪತ್ರೆ ಕೊಟ್ಟಿದ್ದು ನಾನೇ. ಈಗಾಗಲೇ 40 ಕೋಟಿ ಕೂಡ ಕೊಟ್ಟಿದ್ದೇವೆ. ಇನ್ನೂ 50 ಕೋಟಿ ಕೊಡ್ತೀವಿ. ನೆಫ್ರೋಲಜಿ ಕೇಂದ್ರ ಬೇಕು ಎನ್ನುವ ಬೇಡಿಕೆಯೂ ಇದೆ. ಅದನ್ನೂ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು ಸಿದ್ದರಾಮಯ್ಯ.

ಎಲ್ಲ ಜಿಲ್ಲೆಗಳಲ್ಲೂ ಕ್ಯಾನ್ಸರ್‌ ಆಸ್ಪತ್ರೆ ಆಗಬೇಕು

ಎಲ್ಲಾ ವಯೋಮಾನದವರಿಗೂ ಕ್ಯಾನ್ಸರ್ ಬರುತ್ತಿರುವುದು ಕಾಳಜಿ ವಹಿಸಬೇಕಾದ ಸಂಗತಿ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಕ್ಯಾನ್ಸರ್ ಆಸ್ಪತ್ರೆ ಆರಂಭಿಸುವ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ದುಡಿಯುವ ವರ್ಗಗಳಿಗೆ ಚಿಕಿತ್ಸೆ ಹೊರೆ ಆಗದೆ ಉಚಿತವಾಗಿ ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಕಾಳಜಿ ಎಂದರು.

CM Siddaramaiah Mysore kidwai Hospital

ಮೈಸೂರಿನ ಅಭಿವೃದ್ಧಿಗೆ ಬದ್ಧ ಎಂದ ಸಿಎಂ

ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಈಗಲೂ ನಿವೃತ್ತರು ಮೈಸೂರಿನ ಬಗ್ಗೆ ಪ್ರೀತಿ ಹೊಂದಿದ್ದಾರೆ. ಹೀಗಾಗಿ ಅಗತ್ಯ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನೂ ಮೈಸೂರಿಗೆ ಒದಗಿಸಬೇಕಾಗಿದ್ದು ಇದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಡಾ.ಯತೀಂದ್ರ ಅವರ ಕೋರಿಕೆಯಂತೆ ಮೈಸೂರಿನಲ್ಲಿ ಬೋನ್ ಮ್ಯಾರೋ ಚಿಕಿತ್ಸಾ ಸೌಲಭ್ಯ ಒದಗಿಸುತ್ತೇವೆ ಎಂದರು.

ನಮ್ಮ ಸರ್ಕಾರ ಇರುವಾಗ ಮೈಸೂರು ನಗರಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸುತ್ತೇವೆ. ಪಾರಂಪರಿಕ ನಗರದ ಹೆಮ್ಮೆಯನ್ನು ನಾವು ಉಳಿಸುತ್ತೇವೆ. ಮೈಸೂರು ಜಿಲ್ಲೆಯ ಜನರ ಋಣ ತೀರಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಜಿಲ್ಲೆಯ ಶಾಸಕರುಗಳಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ತನ್ವೀರ್ ಸೇಠ್, ರವಿಶಂಕರ್, ಅನಿಲ್ ಚಿಕ್ಕಮಾದು, ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡರು, ಎಚ್.ವಿಶ್ವನಾಥ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Exit mobile version