ಮೈಸೂರು: ಬಿಜೆಪಿ- ಜೆಡಿಎಸ್ ಪಾದಯಾತ್ರೆ (BJP-JDS Padayatra) ಮೈಸೂರು (Mysore) ತಲುಪುವ ಒಂದು ದಿನ ಮೊದಲೇ ಭಾರಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನದ ಮೂಲಕ ದೋಸ್ತಿಗಳಿಗೆ ಟಕ್ಕರ್ ಕೊಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಸಜ್ಜಾಗಿದ್ದಾರೆ. ನಾಳೆ ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್‌ನ (Congress) ʼಜನಾಂದೋಲನ ಸಮಾವೇಶʼಕ್ಕೆ ಸುಮಾರು 2 ಲಕ್ಷ ಜನ ಸೇರಿಸಲು ಕೈ ಪಡೆ ಚಿಂತಿಸಿದೆ.
ನಾಳೆ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಜನಾಂದೋಲನ ಸಮಾವೇಶದ ಮೂಲಕ ಪ್ರತಿಪಕ್ಷಗಳ ಆಪಾದನೆಗಳಿಗೆ ಉತ್ತರ ನೀಡಲು ಸಿದ್ದರಾಮಯ್ಯ ಮುಂದಾಗಿದ್ದು, ಹೆಚ್ಚು ಜನ ಸೇರಿಸಲು ಪ್ರಮುಖವಾಗಿ 6 ಜಿಲ್ಲೆಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ರಾಮನಗರ ಜಿಲ್ಲೆಗಳಿಗೆ ಸೂಚನೆ ಕೊಡಲಾಗಿದೆ. ಜೊತೆಗೆ ರಾಜ್ಯದ ವಿವಿಧೆಡೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಲಿದ್ದಾರೆ.
ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಲಿದ್ದು, ಬಿಜೆಪಿ-ಜೆಡಿಎಸ್ ಕಾಲದ ಹಗರಣಗಳ ಕುರಿತು ಪ್ರಸ್ತಾಪ ಮಾಡಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರ ಭ್ರಷ್ಟಾಚಾರ ಪ್ರಕರಣಗಳ ಪ್ರಸ್ತಾಪ ಮಾಡಲಿದ್ದಾರೆ.
ಇದಕ್ಕೂ ಮೊದಲು ರಾಜ್ಯ ರಾಜಕೀಯ ಇತಿಹಾಸದಲ್ಲಿ ಬಿಎಸ್‌ವೈ- ಎಚ್‌ಡಿಕೆ ನಡುವೆ ನಡೆದ ಟಾಕ್ ಫೈಟ್ ವಿಡಿಯೋ ತುಣುಕುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಬಿಜೆಪಿ ಆಡಳಿತ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟ ಹೇಳಿಕೆಗಳನ್ನೂ ಪ್ರದರ್ಶಿಸಲಾಗುತ್ತದೆ.
ಹಿಂದೆ ಹೆಚ್‌ಡಿಕೆ ಕುಟುಂಬದ ವಿರುದ್ಧ ಬಿಎಸ್‌ವೈ ಮಾಡಿದ್ದ ಆರೋಪಗಳನ್ನು, ಹೆಚ್‌ಡಿಕೆ ಕುಟುಂಬಕ್ಕೆ ಸಂಬಂಧಿಸಿದ 42 ಸೈಟ್‌ಗಳ ಕುರಿತು ಬಿಜೆಪಿ ನೀಡಿದ್ದ ಜಾಹೀರಾತನ್ನು ಕೈ ಪಡೆ ದೊಡ್ಡ ದೊಡ್ಡ ಫ್ಲೆಕ್ಸ್ ಮಾಡಿ ಹಾಕಲಿದೆ ಎನ್ನಲಾಗಿದೆ. ನಾಳೆ ಮೈಸೂರು ನಗರದ ಉದ್ದಕ್ಕೂ ಬಿಜೆಪಿ ನೀಡಿದ್ದ ಜಾಹೀರಾತಿನ ಪ್ರತಿಯನ್ನು ಬ್ಯಾನರ್ಸ್ ಮಾಡಿ ಕಾಂಗ್ರೆಸ್ ಹಾಕಲಿದೆ ಎಂದು ತಿಳಿದುಬಂದಿದೆ. ಆ ಮೂಲಕ ಜೆಡಿಎಸ್- ಬಿಜೆಪಿ ನಾಯಕರಿಗೆ ಮುಜುಗರ ಸೃಷ್ಟಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.
ಒಂದಾದ್ರಾ ಸಿದ್ದರಾಮಯ್ಯ- ಬಿಕೆ ಹರಿಪ್ರಸಾದ್?
ಪಕ್ಷದೊಳಗೆ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಭಿನ್ನಮತ ಹೊಂದಿದ್ದ ಮುಖಂಡ ಬಿಕೆ ಹರಿಪ್ರಸಾದ್ ನಿನ್ನೆ ರಾತ್ರಿ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಹಿಂದೆ ಅಸಮಾಧಾನಗೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಬಿಕೆಹೆಚ್ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿಎಂ ಅವರನ್ನು ದಿಢೀರ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಸುದೀರ್ಘ ಒಂದುವರೆ ಗಂಟೆಗಳ ಕಾಲ ಸಿಎಂ ಹಾಗೂ ಹರಿಪ್ರಸಾದ್ ಮಾತುಕತೆ ನಡೆಸಿದರು. ಸಚಿವ ಮಹದೇವಪ್ಪ ಕರೆ ಮಾಡಿ ಬಿಕೆ ಹರಿಪ್ರಸಾದ್‌ಗೆ ಆಹ್ವಾನ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಬಳಿಗೆ ಹರಿಪ್ರಸಾದ್ ಅವರನ್ನು ಆರ್.ಎಲ್ ಜಾಲಪ್ಪ ಅವರ ಅಳಿಯ ನಾಗರಾಜ್ ಕರೆದುಕೊಂಡು ಹೋದರು. ಮೈಸೂರಿನ ಜನಾಂದೋಲನ ಸಮಾವೇಶಕ್ಕೆ ಬರುವಂತೆ ಬಿಕೆ ಹರಿಪ್ರಸಾದ್‌ಗೆ ಸಿದ್ದರಾಮಯ್ಯ ಖುದ್ದು ಆಹ್ವಾನಿಸಿದರು.
ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ಹಿನ್ನೆಲೆಯಲ್ಲಿ ಯಾವೆಲ್ಲ ಷಡ್ಯಂತ್ರ ತಮ್ಮ ವಿರುದ್ಧ ನಡೆದಿದೆ ಎಂಬ ಅಭಿಪ್ರಾಯವನ್ನು ಹರಿಪ್ರಸಾದ್ ಜೊತೆ ಸಿಎಂ ಹಂಚಿಕೊಂಡಿದ್ದಾರೆ. ಇದೀಗ ಮೈಸೂರಿನ ಜನಾಂದೋಲನ ಸಮಾವೇಶಕ್ಕೆ ಬಿಕೆಎಚ್ ಹೋಗ್ತಾರಾ ಇಲ್ಲವಾ ಎಂಬ ಕುತೂಹಲ ಮೂಡಿದೆ. ಹೈಕಮಾಂಡ್ ನಾಯಕರ ನಡೆ ನೋಡಿ ಅವರು ತೀರ್ಮಾನ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: BJP-JDS Padayatra: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ; ಬ್ಯಾನರ್‌ಗಳಲ್ಲೂ ಕಾಣಿಸಿಕೊಳ್ಳದ ಸುಮಲತಾ ಅಂಬರೀಷ್!