Site icon Vistara News

ಟಿಪ್ಪು ವಿವಾದ | ಗಿರೀಶ್‌ ಕಾರ್ನಾಡ್‌ ಬರೆದ ಪುಸ್ತಕದಲ್ಲೇನಿದೆ? ಅದರಲ್ಲಿ ಮಹಾರಾಜರ ಬಗ್ಗೆ ಏನು ಹೇಳಲಾಗಿದೆ?

girish karnad

ರಮೇಶ ದೊಡ್ಡಪುರ, ಬೆಂಗಳೂರು
ಟಿಪ್ಪು ಸುಲ್ತಾನ್‌ ಕುರಿತು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದ ಪುಸ್ತಕ (ನಾಟಕ ರೂಪ) ʼಟಿಪ್ಪುವಿನ ನಿಜಕನಸುಗಳುʼ ಇದೀಗ ವಿವಾದದ ಕೇಂದ್ರಬಿಂದು. ಟಿಪ್ಪು ಸುಲ್ತಾನ ನಿಜವಾಗಲೂ ಎಲ್ಲರೂ ಅಂದುಕೊಂಡಂತೆ ಅಭಿವೃದ್ಧಿ ಶೀಲ, ಸರ್ವಧರ್ಮ ಸಹಿಷ್ಣು ಅಲ್ಲ ಅಂದು ಅಡ್ಡಂಡ ಕಾರ್ಯಪ್ಪ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಅಡ್ಡಂಡ ಕಾರ್ಯಪ್ಪ ಅವರೇ ಹೇಳಿಕೊಂಡಂತೆ, ಈ ಕೃತಿಯು ಜ್ಞಾನಪೀಠ ಪುರಸ್ಕೃತ ನಾಟಕಕಾರ ಡಾ. ಗಿರೀಶ್‌ ಕಾರ್ನಾಡ್‌ 1997ರಲ್ಲಿ ಬರೆದ ʼಟಿಪ್ಪು ಸುಲ್ತಾನ್‌ ಕಂಡ ಕನಸುʼ ನಾಟಕಕ್ಕೆ ಉತ್ತರ. ʼಗಿರೀಶ್‌ ಕಾರ್ನಾಡರು ಬರೆದದ್ದು ಅವರೇಗಿಯೇ ಕಂಡ ಕನಸು. ಆದರೆ ನಾನು ಬರೆದಿರುವುದು ನಿಜವಾಗಿಯೂ ಟಿಪ್ಪು ಕಂಡ ಕನಸುʼ ಎಂದು ತಿಳಿಸಿದ್ದಾರೆ.

ಬಿಬಿಸಿಗೆ ಬರೆದ ಪುಸ್ತಕ

ಟಿಪ್ಪು ತನ್ನ ವೈಯಕ್ತಿಕ ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದ ಅಂಶಗಳನ್ನು ಆಧರಿಸಿ ಗಿರೀಶ್‌ ಕಾರ್ನಾಡ್‌ ಕೃತಿ ರಚಿಸಿದ್ದಾಗಿ ತಿಳಿಸಿದ್ದಾರೆ. ಅಸಲಿಗೆ ಈ ಕೃತಿಯನ್ನು ಅವರು ರಚನೆ ಮಾಡಿದ್ದು ಇಂಗ್ಲೆಂಡಿನ ಮಾಧ್ಯಮ ಸಂಸ್ಥೆ ಬಿಬಿಸಿ ಕೋರಿಕೆ ಮೇರೆಗೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸ್ವರ್ಣ ಮಹೋತ್ಸವ ವರ್ಷದಲ್ಲಿ ಬಿಬಿಸಿಯು ಗಿರೀಶರಿಗೆ ನಾಟಕ ಬರೆಯುವಂತೆ ಕೋರಿದಾಗ ಅವರು ಟಿಪ್ಪ್ಪುವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡರು.

ಗಿರೀಶ್‌ ಕಾರ್ನಾಡರೇ ಕೃತಿಯಲ್ಲಿ ಹೇಳಿರುವಂತೆ, “ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತನ್ನು ಸೂಚ್ಯವಾಗಿ ಬಂದಾಗ ನನಗೆ ಕೂಡಲೇ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪ್ಪು ಸುಲ್ತಾನನ ದುರಂತ ! ತನ್ನ ಇಡೀ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಎ.ಕೆ.ರಾಮಾನುಜನ್ ಅವರಿಂದ ಕೇಳಿದಂದಿನಿಂದ ನನಗೆ ಟಿಪ್ಪುವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು” ಎಂದಿದ್ದಾರೆ.

ಈ ಕೃತಿಗೆ ಆಕರ ಗ್ರಂಥವಾಗಿ ಮಹಮೂದ್‌ ಹುಸೇನ್‌ ರಚಿಸಿರುವ ದಿ ಡ್ರೀಮ್ಸ್‌ ಆಫ್‌ ಟಿಪ್ಪು ಸುಲ್ತಾನ್‌, ಕಿರ್ಮಾನಿ-ಹುಸೇನ್‌ ಅಲಿ ಖಾನ್‌ ರಚಿಸಿದ ದಿ ಹಿಸ್ಟರಿ ಆಫ್‌ ಹೈದರ್‌ ನಾಯಕ್‌, ಕಿರ್ಮಾನಿಯ ನಿಶಾನೇ ಹೈದರಿಯ ಭಾಷಾಂತರ, ಬಿ. ಶೇಖ್‌ ಅಲಿ ಅವರದ್ದೂ ಸೇರಿ ಅನೇಕ ಕೃತಿಗಳನ್ನು ಹೆಸರಿಸಿದ್ದಾರೆ.

ಸಂಶೋಧಕ ಹಾಗೂ ಇತಿಹಾಸಕಾರ ಕಾಲಿನ್‌ ಮೆಕೆಂಜಿ, ಇತಿಹಾಸಕಾರ ಮೀರ್‌ ಹುಸೇನ್‌ ಅಲಿ ಕಿರ್ಮಾನಿ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ. ಟಿಪ್ಪುವನ್ನು ಕೊಂದ ಸಂದರ್ಭದ ಇತಿಹಾಸವನ್ನು ಬರೆಯುವುದರಿಂದ ಚರ್ಚೆ ಪ್ರಾರಂಭ ಆಗುತ್ತದೆ. ಯುದ್ಧ ಭೂಮಿಯಲ್ಲಿ ರಾಶಿ ರಾಶಿ ಬಿದ್ದಿರುವ ಹೆಣಗಳ ರಾಶಿಯ ನಡುವೆ ಟಿಪ್ಪುವಿನ ಹೆಣವೂ ಇದೆಯೇ ಎಂದು ಸೈನಿಕರು ಹುಡುಕಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಟಿಪ್ಪುವಿನ ಕುರಿತು ಅನೇಕ ಮಾತನ್ನಾಡಲಾಗುತ್ತದೆ. ʼಟಿಪ್ಪುವಿನ ಸೈನಿಕರು ಧೀರರುʼ, ʼ ಟಿಪ್ಪು ರಣರಂಗದಿಂದ ಓಡಿ ಹೋಗುವ ವ್ಯಕ್ತಿಯಲ್ಲʼ ಎಂಬ ಮಾತುಗಳಿವೆ.

ಇದನ್ನೂ ಓದಿ | ಮೈಸೂರಿನಲ್ಲಿ ಟಿಪ್ಪು ಹೆಸರು ಇಲ್ಲದಂತೆ ಮಾಡುತ್ತೇನೆ: ಪ್ರತಾಪ್‌ಸಿಂಹ

ನಾನು ಕಂಡ ಹಾಗೂ ಕಾಣುತ್ತಿರುವ ಕನಸುಗಳನ್ನು ಈ ಕೃತಿಯಲ್ಲಿ ಬರೆದಿಡುತ್ತಿದ್ದೇನೆ ಎಂದು ಟಿಪ್ಪುವಿನ ಧ್ವನಿಯಲ್ಲೇ ಹೇಳಿಸಲಾಗಿದ್ದು, ಆತ ಸರ್ವಧರ್ಮಗಳ ಸಹಿಷ್ಣು ಎಂಬುದನ್ನು ಅನೇಕ ಸಂದರ್ಭದಲ್ಲಿ ಒತ್ತಿ ಹೇಳಲಾಗಿದೆ. ಒಮ್ಮೆ ಟಿಪ್ಪು ಕಾಣುವ ಕನಸಿನಲ್ಲಿ ಆತ ಯುದ್ಧವನ್ನು ಮುಗಿಸಿ ಸಲಾಮಾಬಾದ್‌ ಮೂಲಕ ಆಗಮಿಸುತ್ತಿದ್ದಾಗ ಅಲ್ಲಿ ಒಂದು ದೇವಾಲಯ ಕಾಣುತ್ತದೆ. ಅದರ ಒಳಗೆ ಹೋಗುವ ಟಿಪ್ಪು, ಧ್ಯಾನ ಮಾಡುತ್ತಿದ್ದವರನ್ನು ಮಾತನಾಡಿಸುತ್ತಾನೆ. ನಿಮಗೆ ಏನು ಬೇಕು? ಎಂದು ಕೇಳಿದಾಗ ಅಲ್ಲಿದ್ದ ಧ್ಯಾನಾಸಕ್ತರು ʼನಮ್ಮನ್ನು ನೆಮ್ಮದಿಯಿಂದ ಧ್ಯಾನ ಮಾಡಲು ಬಿಟ್ಟರೆ ಅಷ್ಟೇ ಸಾಕು ಎನ್ನುತ್ತಾರೆʼ ಇದಕ್ಕೆ ಕೂಡಲೆ ಗೌರವ ಕೊಡುವ ಟಿಪ್ಪು ಕೂಡಲೆ ಅಲ್ಲಿಂದ ಹೊರಬರುತ್ತಾನೆ. ಈ ದೇವಾಲಯದ ಗೋಡೆಗಳು ಶಿಥಿಲಗೊಂಡಿದ್ದು, ಕೂಡಲೆ ಸರಿಪಡಿಸಿ, ಧ್ಯಾನ ಮಾಡುತ್ತಿರುವವರಿಗೆ ಎಲ್ಲ ಸಹಾಯವನ್ನೂ ಮಾಡಿ ಎನ್ನುತ್ತಾನೆ.

ಮುಂದುವರಿದು, ಟಿಪ್ಪು ಆಡಳಿತದ ಕುರಿತು ಹೊಂದಿದ್ದ ದೂರದರ್ಶಿತ್ವವನ್ನು ಪುಸ್ತಕದಲ್ಲಿ ಗಿರೀಶ್‌ ಕಾರ್ನಾಡ್‌ ಚಿತ್ರಿಸಿದ್ದಾರೆ. ಚೀನೀ ಸೈನಿಕರು ಟಿಪ್ಪುವಿಗೆ ಬಿಳಿ ಆನೆಯೊಂದನ್ನು ಉಡುಗೊರೆಯಾಗಿ ನೀಡುತ್ತಾರೆ. ನೆಪೋಲಿಯನ್‌ ಬಿಟ್ಟರೆ ನಿಮಗೇ ಈ ರೀತಿ ಉಡುಗೊರೆ ನೀಡುತ್ತಿರುವುದು ಎಂದು ಚೀನೀ ಸೈನಿಕರು ಹೇಳುವ ಮೂಲಕ ಟಿಪ್ಪುವಿನ ಮಹತ್ವವನ್ನು ಬಿಂಬಿಸಲಾಗಿದೆ. ವ್ಯಾಪಾರ, ಉದ್ಯೋಗದ ಕುರಿತು ಟಿಪ್ಪುವಿಗಿದ್ದ ಆಸಕ್ತಿಯನ್ನು ಯಥೇಚ್ಚವಾಗಿ ಚಿತ್ರಿಸಲಾಗಿದೆ. ಮೈಸೂರಿಗೆ ರೇಷ್ಮೆಯನ್ನು ತಂದಾಗ ಎಲ್ಲರೂ ವಿರೋಧಿಸಿದ್ದರು. ಆದರೆ ಈಗ ನೋಡಿ ಇಡೀ ಸೀಮೆ ರೇಷ್ಮೆ ನಾಡಾಗಿದೆ ಎಂದು ಟಿಪ್ಪು ತನ್ನ ಬಗ್ಗೆ ತಾನೇ ಹೇಳಿಕೊಳ್ಳುತ್ತಾನೆ. ಸೈನಿಕರು, ಆಯುಧಗಳು ಎಲ್ಲವೂ ಬೇಕು ಎನ್ನುವುದು ನಿಜ. ಆದರೆ ವ್ಯಾಪಾರ-ಉದ್ಯೋಗ-ಹಣ ಮುಖ್ಯ ಎಂದು ಟಿಪ್ಪು ಹೇಳುತ್ತಾನೆ. ತನ್ನ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದ. ನಮ್ಮ ಅಜ್ಜ ಹೆಚ್ಚು ಓದಿರಲಿಲ್ಲವಲ್ಲ ನಾವೇಕೆ ಓದಬೇಕು ಎಂದು ಮಕ್ಕಳು ಕೇಳಿದಾಗ, ಆತನಿಗೆ ಶಿಕ್ಷಣ ಬೇಕಿರಲಿಲ್ಲ. ಇದು ಹೊಸ ಯುಗ. ಶಿಕ್ಷಣ ಪಡೆಯಲೇಬೇಕು ಎಂದು ಬುದ್ಧಿವಾದ ಹೇಳುತ್ತಾನೆ.

ಅರಸರ ಕುರಿತು ಹೇಳಿದ್ದೇನು?

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದಲ್ಲಿದ್ದ 565 ರಾಜ ಸಂಸ್ಥಾನಗಳನ್ನು ವಿಲೀನ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆ ಸಂಸ್ಥಾನಗಳ ಅಧಿಪತಿಗಳಿಗೆ ಇದ್ದ ಬಿರುದು, ಗೌರವಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಯಿತು. ಜತೆಗೆ ಆಯಾ ಸಂಸ್ಥಾನದ ಪ್ರಾಮುಖ್ಯತೆಗೆ ಅನುಗುಣವಾಗಿ ಸರ್ಕಾರದಿಂದ ವಾರ್ಷಿಕ ಹಣ ನೀಡಲಾಗುತ್ತಿತ್ತು. ಇದನ್ನು ಪ್ರಿವಿ ಪರ್ಸ್‌ ಎನ್ನಲಾಗುತ್ತಿತ್ತು. ಅತಿ ಸಣ್ಣ ಸಂಸ್ಥಾನಗಳಿಗೆ ವಾರ್ಷಿಕ ಐದು ಸಾವಿರ ರೂ. ಇತ್ತು. 102 ಸಂಸ್ಥಾನಗಳಿಗೆ ವಾರ್ಷಿಕ 1-2 ಲಕ್ಷ ರೂ. ನೀಡಲಾಗುತ್ತಿತ್ತು. ಆರು ಸಂಸ್ಥಾನಗಳಿಗೆ ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತ ನೀಡಲಾಗುತ್ತಿತ್ತು. ಅದರಲ್ಲಿ ಮೈಸೂರು ಸಂಸ್ಥಾನದ ಜತೆಗೆ ಹೈದರಾಬಾದ್‌, ತಿರುವಾಂಕೂರು, ಬರೋಡಾ, ಜೈಪುರ ಹಾಗೂ ಪಟಿಯಾಲಾ ಸಂಸ್ಥಾನಗಳಿದ್ದವು. 1970ರಲ್ಲಿ ಸಂವಿಧಾನದ 26 ನೇ ತಿದ್ದುಪಡಿ ಮೂಲಕ ಈ ಸೌಲಭ್ಯವನ್ನು ಪ್ರಧಾನಿ ಇಂದಿರಾ ಗಾಂಧಿ ರದ್ದು ಮಾಡುವವರೆಗೂ ಚಾಲ್ತಿಯಲ್ಲಿತ್ತು.

ನಾಟಕದುದ್ದಕ್ಕೂ ಟಿಪ್ಪುವಿನ ಕುರಿತು ಧನಾತ್ಮಕವಾದದ್ದನ್ನೇ ಹೇಳಲಾಗಿದೆ. ಅಂತಿಮ ಹಂತದಲ್ಲಿ, ಟಿಪ್ಪು ಮರಣವನ್ನಪ್ಪುತ್ತಾನೆ. ಟಿಪ್ಪುವಿನ ಇಬ್ಬರು ಮಕ್ಕಳನ್ನು ಕಲ್ಕತ್ತೆಯಲ್ಲಿ ನಜರ ಕೈದಿಯಾಗಿ ಇರಿಸಲಾಗಿತ್ತು ಎಂಬ ವಿಚಾರಗಳ ಮೂಲಕ ನಾಟಕ ಅಂತಿಮ ಹಂತಕ್ಕೆ ಬರುತ್ತದೆ. ಕೊನೆಯದಾಗಿ ಇತಿಹಾಸ ಕಿರ್ಮಾನಿ, “1947ರಲ್ಲಿ ಈ ನಾಡು ಸ್ವತಂತ್ರವಾದಾಗ ಭಾರತದ ಹೊಸ ಸರ್ಕಾರ, ಬ್ರಿಟಿಷರೆದುರಿಗೆ ಜೊಲ್ಲು ಸುರಿಸಿದ ರಾಜರು-ಮಹಾರಾಜರುಗಳಿಗೆಲ್ಲ ಕೋಟ್ಯಾವಧಿ ರೂಪಾಯಿಗಳ ಪಿಂಚಣಿ-ಪ್ರಿವಿ ಪರ್ಸ್‌ ಕೊಟ್ಟು ಪೋಷಿಸುವ ಹೊಣೆ ಹೊತ್ತುಕೊಂಡಿತು. ಟಿಪ್ಪು ಸುಲ್ತಾನನ ವಂಶಜರಿಗೆ ಮಾತ್ರ ಕಲ್ಕತ್ತೆಯಕೊಳಚೆಪಟ್ಟಿಯಲ್ಲಿ ಕೊಳೆಬಾಳು ತಪ್ಪಲಿಲ್ಲ” ಎಂದು ನಾಟಕ ಮುಗಿಯುತ್ತದೆ. ಅಲ್ಲಿಗೆ, ಮೈಸೂರು ಮಹಾರಾಜರೂ ಸೇರಿ ಭಾರತದೊಂದಿಗೆ ವಿಲೀನವಾಗಿ, ಪ್ರಿವಿ ಪರ್ಸ್‌ ತೆಗೆದುಕೊಂಡ ಎಲ್ಲ ರಾಜ ಮಹಾರಾಜರನ್ನೂ ಒಟ್ಟಿಗೆ ಟೀಕಿಸಲಾಗಿದೆ.

ಗಿರೀಶ್‌ ಕಾರ್ನಾಡ್‌ ಬರೆದ ನಾಟಕದ ಕೊನೆಯ ಭಾಗ.

ಇದನ್ನೂ ಓದಿ | ಮುಸಲ್ಮಾನರಿಗೆ ಅಬ್ದುಲ್‌ ಕಲಾಂ ಬೇಕಿಲ್ಲ; ಟಿಪ್ಪುವೇ ಅವರಿಗೆ ಹೀರೊ: ಡಾ. ಎಸ್‌. ಎಲ್‌. ಭೈರಪ್ಪ ಆಕ್ರೋಶ

Exit mobile version