Site icon Vistara News

`ಚಪ್ಪಲಿ’ ತೆಗೆದು `ಕೊಳೆತ ಮೊಟ್ಟೆ’ ಉಳಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ !

ಸಿದ್ದರಾಮಯ್ಯ

ಮೈಸೂರು: ಕಾಂಗ್ರೆಸ್‌ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಾಗಿತ್ತು ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತಿಗೆ ಪ್ರತಿಕ್ರಿಯೆ ನೀಡುವ ಆವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಡಿದ ಮಾತನ್ನು ಹಿಂಪಡೆದಿದ್ದಾರೆ. ನಮ್ಮ ಸರ್ಕಾರ ಇದ್ದಿದ್ದರೆ ಕಲ್ಲಲ್ಲಿ ಹೊಡೆಯಬಹುದಾಗಿದ್ದರೆ ಈ ಸರ್ಕಾರಕ್ಕೆ ಕೊಳೆತ ಮೊಟ್ಟೆ ಹಾಗೂ ಚಪ್ಪಲಿಯಲ್ಲಿ ಹೊಡೆಯಬೇಕೇ ಎಂದು ಹೇಳಿ ಆನಂತರ ತಪ್ಪು ಸರಿಪಡಿಸಿಕೊಂಡಿದ್ದಾರೆ.

ಸುಳ್ಯದಲ್ಲಿ ಜುಲೈ 27ರಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿತ್ತು. ಸತತ ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೇಸತ್ತ ಯುವಮೋರ್ಚಾ ಹಾಗೂ ಇನ್ನಿತರ ಪ್ರಕೋಷ್ಠಗಳ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಲು ಆರಂಭಿಸಿದರು.

ಈ ಕುರಿತು ಚಿಕ್ಕಮಗಳೂರು ಯುವಮೋರ್ಚಾ ಅಧ್ಯಕ್ಷ ಸಂದೀಪ್‌ ಜತೆ ಮಾತನಾಡಿದ್ದ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಕಾಂಗ್ರೆಸ್‌ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಾಗಿತ್ತು ಆದರೆ ಈಗ ನಮ್ಮ ಸರ್ಕಾರ ಇದೆ. ರಾಜೀನಾಮೆಯನ್ನು ವಾಪಸ್‌ ಪಡೆಯಿರಿ ಎಂದು ಮನವಿ ಮಾಡಿದ್ದರು. ಈ ಆಡಿಯೊ ಗುರುವಾರ ಲೀಕ್‌ ಆಗಿ ಎಲ್ಲೆಡೆ ಹರಿದಾಡಿತ್ತು. ಈ ಕುರಿತು ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೇಳಿದ ಕೂಡಲೆ ಕೆಂಡಾಮಂಡಲವಾದ ಸಿದ್ದರಾಮಯ್ಯ, ನಮ್ಮ ಸರ್ಕಾರ ಇದ್ದರೆ ಕಲ್ಲು ಹೊಡೆಯುತ್ತಿದ್ದರ? ಅಂದರೆ ಈಗಿನ ಸರ್ಕಾರಕ್ಕೆ ಕೊಳೆತ ಮೊಟ್ಟೆ, ಚಪ್ಪಲಿಯಲ್ಲಿ ಹೊಡೆಯಬೇಕಾ? ಒಬ್ಬ ಸಂಸದನಾಗಿ ಎಂತಹ ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆ ನೋಡಿ ಎಂದು ಹೇಳಿದರು. ಕೂಡಲೆ ತಮ್ಮ ಮಾತಿನ ತೀವ್ರತೆಯನ್ನು ಅರಿತ ಸಿದ್ದರಾಮಯ್ಯ, ಚಪ್ಪಲಿ ಪದವನ್ನು ಹಿಂಪಡೆಯುತ್ತೇನೆ. ನಾನು ಆವೇಶದಲಿ ಆ ಹೇಳಿಕೆ ನೀಡಿದೆ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ | Audio Leak | ಕಾಂಗ್ರೆಸ್ ಸರ್ಕಾರ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದ ತೇಜಸ್ವಿ!

Exit mobile version