ರಂಗಸ್ವಾಮಿ ಎಂ. ಮಾದಾಪುರ, ಮೈಸೂರು
ಮುತ್ಸದ್ಧಿ ರಾಜಕಾರಣಿ, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರ ಕುಟುಂಬ ರಾಜಕೀಯವಾಗಿ ‘ಮನೆಯೊಂದು ಮೂರು ಬಾಗಿಲು’ ಆಗಿದೆ. ತಂದೆ ವಿಶ್ವನಾಥ್ ಬಿಜೆಪಿಯಲ್ಲಿದ್ದರೆ, ಮೊದಲ ಪತ್ನಿ ಮಗ ಅಮಿತ್ ದೇವರಹಟ್ಟಿ ಸಹಕಾರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಣದಲ್ಲಿದ್ದಾರೆ. ಎರಡನೇ ಪತ್ನಿ ಮಗ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್ ಕದ ತಟ್ಟಿದ್ದು, ಶೀರ್ಘದಲ್ಲೇ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಕುರುಬ ಸಮುದಾಯದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ವಿಶ್ವನಾಥ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿಂತಲೂ ಒಂದು ಅವಧಿ ಮುಂಚಿತವಾಗಿ ಶಾಸಕರಾಗಿದ್ದವರು. ಸಿದ್ದರಾಮಯ್ಯ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ವಿಶ್ವನಾಥ್ 1978ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೆ.ಆರ್.ನಗರ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಇಬ್ಬರೂ ಒಂದೇ ಸಮುದಾಯದವರು. ವಕೀಲರಾಗಿ ವೃತ್ತಿ ಆರಂಭಿಸಿ, ರಾಜಕೀಯ ನಾಯಕರಾಗಿ ಬೆಳೆದವರು. ಒಂದು ಕಾಲಕ್ಕೆ ಆತ್ಮೀಯರೂ ಆಗಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಬದ್ಧವೈರಿಗಳಾಗಿದ್ದಾರೆ.
ಇದೀಗ ವಿಶ್ವನಾಥ್ ಅವರ ಪುತ್ರ ಪೂರ್ವಜ್ ರಾಜಕೀಯ ನೆಲೆ ಕಂಡುಕೊಳ್ಳಲು ಸಿದ್ದರಾಮಯ್ಯ ಮನೆಗೆ ಎಡತಾಕುವ ಸನ್ನಿವೇಶ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರೂ ತಂದೆ ಮೇಲಿನ ಸಿಟ್ಟನ್ನು ಮಗನ ಮೇಲೆ ತೋರಿಸದೆ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಪೂರ್ವಜ್ ಕಾಂಗ್ರೆಸ್ ಸೇರಲು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ‘ವಿಸ್ತಾರ ನ್ಯೂಸ್’ಗೆ ಗೊತ್ತಾಗಿದೆ.
ಮೂಲೆಗುಂಪಾದ ವಿಶ್ವನಾಥ್
ಅಡಗೂರು ಎಚ್. ವಿಶ್ವನಾಥ್ ಕೆ.ಆರ್. ನಗರ ಕ್ಷೇತ್ರದಿಂದ ನಿರಂತರವಾಗಿ 8 ಬಾರಿ ಸ್ಪರ್ಧಿಸಿ, ಮೂರು ಗೆಲುವು [1978, 1989, 1999] ಹಾಗೂ ಐದು ಸೋಲು[1983, 1985, 1994, 2004, 2008] ಕಂಡವರು. ಎಂ.ವೀರಪ್ಪ ಮೊಯ್ಲಿ, ಎಸ್. ಎಂ. ಕೃಷ್ಣ ಸರ್ಕಾರಗಳಲ್ಲಿ ಸಚಿವರಾಗಿದ್ದವರು. 2009ರಿಂದ 2014ರವರೆಗೆ ಮೈಸೂರು- ಕೊಡಗು ಕ್ಷೇತ್ರದ ಸಂಸದರಾಗಿದ್ದವರು. ಇಷ್ಟೆಲ್ಲವೂ ಆಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ. ಅಲ್ಲಿವರೆಗೆ ಎಲ್ಲವೂ ಚೆನ್ನಾಗಿತ್ತು. ಆ ನಂತರ ತೆಗೆದುಕೊಂಡ ನಿರ್ಧಾರಗಳು ಅಡಗೂರು ಎಚ್.ವಿಶ್ವನಾಥ್ ಅವರಿಗೆ ತಿರುಗು ಬಾಣವಾದವು.
ಸಿದ್ದರಾಮಯ್ಯ ಜತೆಗೆ ಮುನಿಸಿಕೊಂಡು 2017ರಲ್ಲಿ ಜೆಡಿಎಸ್ ಸೇರಿಕೊಂಡರು. ಕೆ.ಆರ್. ನಗರ ಕ್ಷೇತ್ರದಲ್ಲಿ ಅಷ್ಟೊತ್ತಿಗಾಗಲೇ ಸಾ.ರಾ.ಮಹೇಶ್ ಎರಡು ಬಾರಿ ಶಾಸಕರಾಗಿದ್ದ ಪರಿಣಾಮ, 2018ರಲ್ಲಿ ಹಾಲಿ ಶಾಸಕರಿಗೆ ಅವಕಾಶ ಕೊಟ್ಟಿತು. ಸ್ವಕ್ಷೇತ್ರ ಬಿಟ್ಟು ಹುಣಸೂರಿಗೆ ಪಲಾಯನ ಮಾಡಿದ ವಿಶ್ವನಾಥ್, ಗೆಲುವು ಸಾಧಿಸಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದರು. ಜೆಡಿಎಸ್‌ಗೆ ಒಗ್ಗಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಬಾಂಬೆ ಟೀಮ್ ಸೇರುವ ಮೂಲಕ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದರು. ಶಾಸಕ ಸ್ಥಾನ ರದ್ದಾದ ಹಿನ್ನೆಲೆಯಲ್ಲಿ 2019ರಲ್ಲಿ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಆಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್ತು ನಾಮ ನಿರ್ದೇಶನ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನದ ಆಫರ್ ನೀಡಿದ್ದರು. ಹಠ ಮಾಡಿ ಬಿಜೆಪಿ ಅಭ್ಯರ್ಥಿಯಾದ ವಿಶ್ವನಾಥ್, ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ವಿರುದ್ಧ ಹೀನಾಯ ಸೋಲು ಅನುಭವಿಸಿದರು. ಈಗ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಬಿಜೆಪಿಯಲ್ಲಿ ಮೂಲೆ ಗುಂಪಾಗಿದ್ದಾರೆ. ಅತ್ತ ಕೆ.ಆರ್. ನಗರವೂ ಇಲ್ಲ, ಇತ್ತ ಹುಣಸೂರೂ ಇಲ್ಲ.
ಇದನ್ನೂ ಓದಿ | ಜಿ.ಟಿ. ದೇವೇಗೌಡ ಜೆಡಿಎಸ್‌ನಲ್ಲೇ ಉಳಿಯುವಂತೆ ಮನವೊಲಿಸಿದ ಎಚ್.ಡಿ. ಕುಮಾರಸ್ವಾಮಿ
ಅಮಿತ್ ಅತಂತ್ರ
ಮೊದಲ ಪತ್ನಿ ಪುತ್ರ ಅಮಿತ್ ದೇವರಹಟ್ಟಿ ಕೆ. ಆರ್. ನಗರ ತಾಲೂಕಿನ ಭೇರ್ಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಜನಪ್ರತಿನಿಧಿಯಾಗಿ ರಾಜಕೀಯ ಜೀವನ ಆರಂಭಿಸಿದ ಅಮಿತ್, ತಂದೆ ಜೆಡಿಎಸ್ ಮತ್ತು ಬಿಜೆಪಿಗೆ ಹೋದಾಗಲೂ ಕಾಂಗ್ರೆಸ್‌ನಲ್ಲೇ ಮುಂದುವರಿದರು. ಇತ್ತೀಚೆಗೆ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ‘ಸಿದ್ದರಾಮಯ್ಯ ಹೊಳೆಯುವ ವಜ್ರ’ ಎಂದು ಬಣ್ಣಿಸಿದ್ದರು. ಜಿಲ್ಲಾ ಪಂಚಾಯಿತಿ ಅವಧಿ ಮುಕ್ತಾಯವಾಗುವ ಹೊತ್ತಿಗೆ ಮೈಸೂರು ಜಿಲ್ಲಾ ಸಹಕಾರ ಬ್ಯಾಂಕ್ (ಎಂಡಿಸಿಸಿ) ಚುನಾವಣೆ ಎದುರಾಯಿತು. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಣದಲ್ಲಿ ಗುರುತಿಸಿಕೊಂಡು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಜಿ.ಟಿ. ದೇವೇಗೌಡ ಹಾಗೂ ಪುತ್ರ ಜಿ.ಡಿ. ಹರೀಶ್ ಗೌಡ ಜತೆ ನಿಕಟ ಸಂಪರ್ಕ ಹೊಂದಿದ್ದರೂ ರಾಜಕೀಯ ನೆಲೆಯ ಹುಡುಕಾಟದಲ್ಲಿದ್ದಾರೆ.
ಕಾಂಗ್ರೆಸ್ ಹಾದಿಯಲ್ಲಿ ಪೂರ್ವಜ್
ಎರಡನೇ ಪತ್ನಿಯ ಪುತ್ರ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್ ಸೇರುವುದಾಗಿ ಘೋಷಿಸಿಕೊಂಡಿದ್ದಾರೆ. ೩೫ ವರ್ಷದ ಪೂರ್ವಜ್ ತಂದೆಯ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಯಾವುದೇ ಪಕ್ಷದಲ್ಲಿ ಹುದ್ದೆ ನಿರ್ವಹಿಸಿಲ್ಲ. ಯಾವುದೇ ಚುನಾವಣೆಯನ್ನೂ ಎದುರಿಸಿಲ್ಲ. ಮಹಾನಗರ ಪಾಲಿಕೆ ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯನಾಗುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
“ಅಮಿತ್ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ನಾನು ನನ್ನ ದಾರಿ ನೋಡಿಕೊಳ್ಳುತ್ತಿದ್ದೇನೆ.
ಮೊದಲಿನಿಂದಲೂ ಕಾಂಗ್ರೆಸ್ ನೋಡಿಕೊಂಡು ಬೆಳೆದಿದ್ದೇನೆ. ಸಮುದಾಯಕ್ಕೆ ಸಿದ್ದರಾಮಯ್ಯ ಸಿಂಹ ಇದ್ದಂತೆ. ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಲಿ ಬಿಡು ಅಂದಿದ್ದಾರೆ.
ನನ್ನ ತಂದೆ ಮಾರ್ಗದರ್ಶನ ಮಾಡಿಲ್ಲ ಎಂದು ಹೇಳಲ್ಲ. ನಿಮ್ಮ ದಾರಿ ನೀವು ತೆಗೆದುಕೊಳ್ಳಿ ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಶಾಸಕ, ಮಂತ್ರಿ ಎಲ್ಲವೂ ಆಗಿದ್ದರು. ಅಲ್ಲೇ ಉಳಿಯಬೇಕಿತ್ತು. ಕನಿಷ್ಠ ಜೆಡಿಎಸ್‌ನಲ್ಲಾದರೂ ಇರಬೇಕಿತ್ತು.
ಬಿಜೆಪಿಗೆ ಸೇರಿ ತಪ್ಪು ಮಾಡಿದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾಂಗ್ರೆಸ್ ಸೇರುತ್ತಿದ್ದೇನೆ. ಶೀರ್ಘದಲ್ಲೇ ಪಕ್ಷ ಸೇರ್ಪಡೆ ದಿನಾಂಕ ತಿಳಿಸುತ್ತೇನೆ” ಎಂದು ‘ವಿಸ್ತಾರ ನ್ಯೂಸ್’ಗೆ ತಿಳಿಸಿದ್ದಾರೆ.
ಇದನ್ನೂ ಓದಿ | ಅಪ್ಪ ಬಿಜೆಪಿ, ಮಗ ಕಾಂಗ್ರೆಸ್: ಕೈ ಪಾಳಯ ಸೇರಲಿದ್ದಾರೆ ಅಡಗೂರು ವಿಶ್ವನಾಥ್ ಪುತ್ರ